ಹುಬ್ಬಳ್ಳಿ, ಧಾರವಾಡ ಅಭಿವೃದ್ಧಿಗೆ ಪಕ್ಷಾತೀತ ಕೆಲಸ: ಟೆಂಗಿನಕಾಯಿ

KannadaprabhaNewsNetwork |  
Published : Nov 02, 2025, 03:15 AM IST
ಮದಮದಮ | Kannada Prabha

ಸಾರಾಂಶ

ಹು-ಧಾ ಮಹಾನಗರ ಸಮಗ್ರ ಅಭಿವೃದ್ಧಿ ಹೊಂದಿದ ನಗರವನ್ನಾಗಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಶ್ರಮಿಸುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನ ತಂದು ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿ:

ಹು-ಧಾ ಮಹಾನಗರ ಸಮಗ್ರ ಅಭಿವೃದ್ಧಿ ಹೊಂದಿದ ನಗರವನ್ನಾಗಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಶ್ರಮಿಸುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನ ತಂದು ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ 70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧೀಮಂತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಧೀಮಂತ ಸನ್ಮಾನ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಮಹಾನಗರ ಪಾಲಿಕೆಯು ಅತ್ಯಂತ ಅಚ್ಚುಕಟ್ಟಿನಿಂದ ಮಾಡಿದೆ ಎಂದರು.

ಪಾಲಿಕೆ ವಿಪಕ್ಷ ನಾಯಕ ಇಮ್ರಾನ ಎಲಿಗಾರ ಮಾತನಾಡಿ, ಪಾಲಿಕೆ ಕೊಡಮಾಡುವ ಧೀಮಂತ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಿಂದ 650ಕ್ಕೂ ಹೆಚ್ಚು ಸಾಧಕರು ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ 70 ಜನ ಸಾಧಕರಿಗೆ ಪ್ರಶಸ್ತಿ ನೀಡಲು ಯೋಜಿಸಲಾಗಿತ್ತು. ಬಳಿಕ 129 ಜನ ಸಾಧಕರಿಗೆ ಪ್ರಶಸ್ತಿ ನೀಡುವ ನಿರ್ಧಾರ ಕೈಗೊಳ್ಳಲಾಯಿತು ಎಂದರು.

ಮಹಾನಗರ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರದಿಂದ ₹ 1000 ಕೋಟಿ ವಿಶೇಷ ಪ್ಯಾಕೇಜ್‌ ತರುವ ನಿಟ್ಟಿನಲ್ಲಿ ಶಾಸಕರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್‌ ಜ್ಯೋತಿ ಪಾಟೀಲ, ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಮರೆತು ಹಿರಿಯರ ಮಾರ್ಗದರ್ಶನದಲ್ಲಿ ಪಾಲಿಕೆ ಕೆಲಸ ಮಾಡುತ್ತಿದೆ. ಅದೇ ರೀತಿ ನಿಗದಿತ ಅವಧಿಯಲ್ಲಿ ತೆರಿಗೆ ಸಂಗ್ರಹವಾಗುತ್ತಿದ್ದು, 6 ತಿಂಗಳ ಅವಧಿಯಲ್ಲಿ ₹ 206 ಕೋಟಿ ಸಂಗ್ರಹವಾಗಿದೆ ಎಂದರು.

ಕಾರ್ಯಕ್ರಮಕ್ಕೂ ಪೂರ್ವ ಮತ್ತು ನಂತರದಲ್ಲಿ ವಿದ್ಯಾರ್ಥಿಗಳು ಹಾಗೂ ಕಲಾ ತಂಡಗಳಿಂದ ತಡರಾತ್ರಿ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಉಪ ಮೇಯರ್‌ ಸಂತೋಷ ಚವ್ಹಾಣ, ಪಾಲಿಕೆ ಸಭಾನಾಯಕ ಈರೇಶ ಅಂಚಟಗೇರಿ, ಮಾಜಿ ಸಂಸದ ಐ.ಜಿ. ಸನದಿ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿನಕಾಯಿ, ಶಿವು ಹಿರೇಮಠ, ಉಮೇಶಗೌಡ ಕೌಜಗೇರಿ, ಬೀರಪ್ಪ ಖಂಡೇಕರ, ವಿಜಯಾನಂದ ಶೆಟ್ಟಿಘಿ, ರಾಜಣ್ಣ ಕೊರವಿ, ದೊರೆರಾಜ ಮಣಿಕುಂಟ್ಲಘಿ, ಚೇತನ ಹಿರೇಕೆರೂರ, ಆರೋಗ್ಯಾಧಿಕಾರಿ ಡಾ.ಶ್ರೀಧರ ದಂಡೆಪ್ಪನವರ, ಅಧೀಕ್ಷಕ ಎಂಜನಿಯರ್‌ ವಿಜಯಕುಮಾರ ಆರ್‌. ಸೇರಿದಂತೆ ಇತರರು ಇದ್ದರು.ಸಾಧಕರಿಗೆ ಧೀಮಂತ ಸನ್ಮಾನ ಪ್ರಶಸ್ತಿ

ಯೋಗ ಶಿಕ್ಷಕ ಎಂ.ಎನ್‌. ಹವಾಲ್ದಾರ್‌, ಸಾಹಿತ್ಯದಲ್ಲಿ ಡಾ. ಹ.ವೆಂ. ಕಾಖಂಡಕಿ, ಶಶಿಧರ ತೋಡಕರ, ಡಾ. ರಾಜೇಶ್ವರಿ ಮಹೇಶ್ವರಯ್ಯ, ಪದ್ಮಜಾ ಉಮರ್ಜಿ, ಧನವಂತ ಹಾಜವಗೋಳ, ರಂಗಕ್ಷೇತ್ರದಲ್ಲಿ ಡಾ. ಪ್ರಕಾಶ ಗರುಡ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 129 ಸಾಧಕರಿಗೆ ಧೀಮಂತ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ