ಯಲ್ಲಾಪುರ: ರಾಜ್ಯದಿಂದ ಕೇಂದ್ರಕ್ಕೆ ₹ 4 ಲಕ್ಷ ಕೋಟಿ ಜಿಎಸ್‌ಟಿ ನೀಡುತ್ತಿದ್ದೇವೆ. ನಮಗೆ ಕೇಂದ್ರ ಸರ್ಕಾರ ₹1.65 ಸಾವಿರ ಕೋಟಿ ನೀಡಬೇಕಿತ್ತು. ಆದರೆ ಕೇವಲ ₹65 ಕೋಟಿ ಮಾತ್ರ ನೀಡಿದೆ. ಈ ಕಾರಣದಿಂದ ರಾಜ್ಯದಲ್ಲಿ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ವಿಳಂಬವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಅವರು ಬುಧವಾರ ಪಟ್ಟಣದ ಅಡಕೆ ಭವನದಲ್ಲಿ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ಸರ್ಕಾರ ನುಡಿದಂತೆ ನಡೆದಿದೆ, ಕೇಂದ್ರಕ್ಕೆ ನೀಡಿದ ತೆರಿಗೆ ಹಣ ನೀಡಿಲ್ಲ. ದೇಶದಲ್ಲೇ ಅತಿ ಹೆಚ್ಚು ಜಿಎಸ್‌ಟಿ ನೀಡುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನವಿದೆ. ಈಗಾಗಲೇ ಅಭಿವೃದ್ಧಿಗಾಗಿ ₹ ೩.೭೫ ಸಾವಿರ ಕೋಟಿ ಹಣ ವಿನಿಯೋಗಿಸುತ್ತಿದ್ದೇವೆ. ಅಲ್ಲದೇ ಪ್ರತಿ ತಿಂಗಳು ₹ ೫೫ ಸಾವಿರ ಕೋಟಿ ನಮ್ಮ ಗ್ಯಾರಂಟಿ ಯೋಜನೆಗೆ ನೀಡಲಾಗುತ್ತಿದೆ ಎಂದ ಅವರು, ಹಿಂದಿನ ಬಿಜೆಪಿ ಸರ್ಕಾರ ಹೋಗುವಾಗ ₹ ೨ ಲಕ್ಷ ಕೋಟಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಹೋಗಿದೆ. ಇದನ್ನು ನಾವು ಕಷ್ಟಪಟ್ಟಾದರೂ ಪೂರ್ತಿಗೊಳಿಸುವುದು ಅನಿವಾರ್ಯವಾಗಿದೆ ಎಂದರು.
ಬಿಜೆಪಿ ಪ್ರತಿಯೊಬ್ಬರ ಖಾತೆಗೆ ₹೧೫ ಲಕ್ಷ ಎಂದು ಪ್ರಚಾರ ಮಾಡಿ ಅಧಿಕಾರಕ್ಕೆ ಬಂತು. ಆ ಹಣ ಎಲ್ಲಿಗೆ ಹೋಯಿತು? ಎಂದು ಪ್ರಶ್ನಿಸಿದ ಸಚಿವರು, ಉದ್ಯೋಗ ಖಾತ್ರಿ ಯೋಜನೆಯ ಹಣ ಕೂಡ ಬರುತ್ತಿಲ್ಲ. ಅಲ್ಲದೇ ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ. ದೂರದ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಿದ್ದೇವೆ. ಬಿಜೆಪಿಯ ಅಸಮರ್ಥ ಆಡಳಿತದಿಂದ ತೊಂದರೆ ಸರಿಪಡಿಸಲು ೨ ವರ್ಷ ಬೇಕಾಯಿತು ಎಂದರು.ಕ್ಷೇತ್ರದ ಉಸ್ತುವಾರಿ ರಾಬರ್ಟ್ ದತ್ತಾಪುರಿ ಮಾತನಾಡಿ, ಸರ್ಕಾರದ ಕಾರ್ಯಕ್ರಮ ಪ್ರತಿಯೊಬ್ಬ ಮತದಾರರಿಗೆ ತಿಳಿಸುವ ಕೆಲಸ ಆಗಬೇಕು. ಪ್ರಧಾನಿ ನೆಹರು ಪಂಚವಾರ್ಷಿಕ ಯೋಜನೆ ರೂಪಿಸಿದರು. ಇಂದಿರಾ ಗಾಂಧಿ ೨೦ಅಂಶ ಯೋಜನೆ ರೂಪಿಸಿದರು. ನಮ್ಮ ಸಿಎಂ,ಡಿಸಿಎಂ ೫ ಗ್ಯಾರಂಟಿ ತಂದರು. ಪಕ್ಷಕ್ಕೆ ದುಡಿದವರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ ಎಂದು ರಾಜ್ಯಾಧ್ಯಕ್ಷರು ನಿರ್ದೇಶಿಸಿದ್ದಾರೆ. ಅಂತೆಯೇ ಪಕ್ಷದ ಕಾರ್ಯಕರ್ತರೇ ನಮಗೆ ಶ್ರೀರಕ್ಷೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಸಾಯಿನಾಥ ಗಾಂವ್ಕರ ಮಾತನಾಡಿ, ಯಲ್ಲಾಪುರ ಕ್ಷೇತ್ರ ಸಂಘಟನೆ ದೃಷ್ಟಿಯಿಂದ ಮುಂಚೂಣಿಯಲ್ಲಿದೆ. ಮುಂಬರುವ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು. ಗ್ರಾಪಂ, ತಾಪಂ, ಜಿಪಂ ಚುನಾವಣೆ ಎದುರಿಸಲು ನಮ್ಮ ಕಾರ್ಯಕರ್ತರು ಈಗಿಂದಲೇ ಸಿದ್ಧರಾಗಬೇಕು ಎಂದರು.ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ, ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸುವಂತಾಗಬೇಕು ಎಂದರು.
ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಮಾತನಾಡಿ, ಸರ್ಕಾರ ಕಾರ್ಯಕರ್ತರ ಮಹತ್ವ ಅರಿತುಕೊಳ್ಳಬೇಕು. ಕಾರ್ಯಕರ್ತರ ನಿಷ್ಠೆಯಿಂದ ಮಾತ್ರ ಪಕ್ಷ ಬಲಗೊಳ್ಳಲು ಸಾಧ್ಯ. ಆ ನೆಲೆಯಲ್ಲಿ ನಮ್ಮ ಎಲ್ಲ ಸಚಿವರು, ಶಾಸಕರು ಕಾರ್ಯಕರ್ತರಿಗೆ ಸ್ಪಂದಿಸುತ್ತಿದ್ದಾರೆ ಎಂದ ಅವರು, ಯಲ್ಲಾಪುರ ಶಾಸಕ ಹೆಬ್ಬಾರ ನಡೆ ಕಾಂಗ್ರೆಸ್ ಕಡೆ ಎಂದು ಹೇಳಿದರು.ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಧ್ಯಕ್ಷ ನಾಗರಾಜ ನಾರ್ವೇಕರ ಮಾತನಾಡಿ, ಕಾರ್ಯಕರ್ತ ನಾಯಕನಾಗಿ ಬೆಳೆಯಬೇಕಾದರೆ ಸಮಾಧಾನದಿಂದ ಹಿರಿಯರಿಂದ ಬೈಸಿಕೊಂಡು, ಅವರ ಪ್ರೀತಿ ಪಡೆದು, ತನ್ನ ತಪ್ಪನ್ನು ಒಪ್ಪಿಕೊಳ್ಳುವ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ಆತ ನಾಯಕನಾಗುತ್ತಾನೆ. ಬೇರೆ ಕುಟುಂಬದ ಬಗ್ಗೆ ರಾಜಕೀಯ ಮಾಡಬಾರದು ಎಂದರು.
ಬನವಾಸಿ ಭಾಗದ ಮಾಜಿ ಅಧ್ಯಕ್ಷ ಸಿ.ಎಫ್. ನಾಯಕ ಸಾಂದರ್ಭಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ದ್ಯಾಮಣ್ಣ ದೊಡ್ಮನೆ, ಎನ್.ಕೆ. ಭಟ್ಟ ಮೆಣಸುಪಾಲ, ಉಲ್ಲಾಸ ಶಾನಭಾಗ, ಕೃಷ್ಣ ಹೀರೆಹಳ್ಳಿ, ಗಣಪತಿ ನಾಯ್ಕ, ಎಂ.ಆರ್. ಹೆಗಡೆ ತಾರೇಹಳ್ಳಿ, ರವಿ ಗೌಡ ಪಾಟೀಲ, ಎಂ.ಕೆ. ಭಟ್ಟ ಯಡಳ್ಳಿ, ಜ್ಯೋತಿ ಪಾಟೀಲ, ಕ್ಷೇತ್ರದ ಅನೇಕ ಮುಖಂಡರು ವೇದಿಕೆಯಲ್ಲಿದ್ದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ರವಿ ಭಟ್ಟ ನಿರ್ವಹಿಸಿದರು. ಬಸವರಾಜ ದೊಡ್ಮನಿ ವಂದಿಸಿದರು.