ಜಗತ್ತಿನಲ್ಲಿ ಮನುಷ್ಯರ ಬಗ್ಗೆ ಮಾತನಾಡಿದವರು ಬಸವಣ್ಣನವರು ಮಾತ್ರ

KannadaprabhaNewsNetwork |  
Published : Jul 10, 2025, 12:50 AM IST
9ಎಂಡಿಜಿ1,ಮುಂಡರಗಿ ಪಟ್ಟಣದ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಜರುಗಿದ ಶರಣರ ಚರಿತಾಮೃತ ಪ್ರವಚನ ಕಾರ್ಯಕ್ರಮವನ್ನು ಶಾಸಕ ಡಾ.ಚಂದ್ರು ಲಮಾಣಿ ಉದ್ಘಾಟಿಸಿದರು.   | Kannada Prabha

ಸಾರಾಂಶ

ಈ ಜಗತ್ತಿನಲ್ಲಿ ಬಂದ ಎಲ್ಲ ಮಹಾತ್ಮರು ದೇವರು ಮತ್ತು ಧರ್ಮದ ಬಗ್ಗೆ ಮಾತನಾಡಿ ಹೋದರು. ಆದರೆ ಬಸವಣ್ಣನವರು ಒಬ್ಬರೇ ಒಬ್ಬರು ಮಾತ್ರ ಮನುಷ್ಯರ ಬಗ್ಗೆ ಮಾತನಾಡಿದರು. ಮನುಷ್ಯರ ಬಗ್ಗೆ ಮಾತನಾಡುವುದು ನಿಜವಾದ ಧರ್ಮವಾಗುತ್ತದೆ ಎಂದು ಮುಂಡರಗಿ ತೋಂಟದಾರ್ಯ ಮಠದ ಪೀಠಾಧಿಪತಿ ಜ.ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಹೇಳಿದರು.

ಮುಂಡರಗಿ: ಈ ಜಗತ್ತಿನಲ್ಲಿ ಬಂದ ಎಲ್ಲ ಮಹಾತ್ಮರು ದೇವರು ಮತ್ತು ಧರ್ಮದ ಬಗ್ಗೆ ಮಾತನಾಡಿ ಹೋದರು. ಆದರೆ ಬಸವಣ್ಣನವರು ಒಬ್ಬರೇ ಒಬ್ಬರು ಮಾತ್ರ ಮನುಷ್ಯರ ಬಗ್ಗೆ ಮಾತನಾಡಿದರು. ಮನುಷ್ಯರ ಬಗ್ಗೆ ಮಾತನಾಡುವುದು ನಿಜವಾದ ಧರ್ಮವಾಗುತ್ತದೆ ಎಂದು ಮುಂಡರಗಿ ತೋಂಟದಾರ್ಯ ಮಠದ ಪೀಠಾಧಿಪತಿ ಜ.ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಹೇಳಿದರು.

ಅವರು ಮಂಗಳವಾರ ಸಂಜೆ ಪಟ್ಟಣದ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ 15 ದಿನಗಳ ಪರ್ಯಂತ ಆಯೋಜಿಸಿರುವ ಶರಣ ಚರಿತಾಮೃತ ಪ್ರವಚನದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ಅನೇಕ ಮಹಾತ್ಮರು ಕೈಲಾಸದಲ್ಲಿ ದೇವರಿದ್ದಾನೆ, ಪರಂದಾಮದಲ್ಲಿ ದೇವರಿದ್ದಾನೆ, ಎಲ್ಲ ಕಡೆಗಳಲ್ಲಿಯೂ ದೇವರಿದ್ದಾನೆ ಎಂದಿದ್ದಾರೆ. ಆದರೆ ಬಸವಣ್ಣನವರು ಮಾತ್ರ ಮನುಷ್ಯರ ಪ್ರೇಮದಲ್ಲಿ ದೇವರಿದ್ದಾನೆ ಎಂದು ಹೇಳಿದರು. 15 ದಿನಗಳ ಕಾಲ ಜರುಗಲಿರುವ ಶರಣರ ಚರಿತಾಮೃತ ಪ್ರವಚನ ಕಾರ್ಯಕ್ರಮಕ್ಕೆ ಈ ಬಾರಿ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿಯವರು ಆಗಮಿಸಿದ್ದು, ಅತ್ಯಂತ ಸುಂದರವಾಗಿ ಪ್ರವಚನ ಮಾಡಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಜಾತಿ ವ್ಯವಸ್ಥೆಯಿಂದ ಹೊರಬರಬೇಕೆಂದು 12ನೇ ಶತಮಾನದಲ್ಲಿಯೇ ಬಸವಣ್ಣನವರು ಹೇಳಿದ್ದರು. ಬಸವಣ್ಣನವರಿಗೆ ಎಷ್ಟೇ ಕಷ್ಟಗಳು ಸ್ತುತಿನಿಂದೆಗಳು ಬಂದರೂ ತಮ್ಮ ತತ್ವಾದರ್ಶಗಳನ್ನು ಎಂದಿಗೂ ಬಿಡಲಿಲ್ಲ. ಇಂದಿನ ಮಕ್ಕಳಿಗೆ ಉತ್ತಮ ಸಂಸ್ಕಾರದ ಕೊರತೆ ಇದೆ. ಅವಿಭಕ್ತ ಕುಟುಂಬಗಳು ಮಾಯವಾಗಿ ಗಂಡ, ಹೆಂಡತಿ, ಮಕ್ಕಳು ಇದೇ ಇಂದು ಕುಟುಂಬವಾಗಿದೆ. ಸಂಬಂಧಗಳು ಮಾಯವಾಗಿ ಸಣ್ಣ ಪುಟ್ಟ ವಿಷಯಕ್ಕೂ ಗಂಡ-ಹೆಂಡತಿಯ ಸಂಬಂಧಗಳು ಬಿಡುಗಡೆಯಾಗುತ್ತಿವೆ. ಹೀಗಾಗಿ ಇಂದಿನ ಮಕ್ಕಳಿಗೆ ಹಾಗೂ ಯುವ ಸ್ನೇಹಿತರಿಗೆ ಇಂತಹ ಪ್ರವಚನದ ಮೂಲಕ ಬಸವಾದಿ ಶಿವಶರಣರ ಮಾತುಗಳನ್ನು ಕೇಳಿಸುವುದು ಅವಶ್ಯವಾಗಿದೆ. ಶರಣರ ಮಾತಿನಲ್ಲಿ ಮೌಲ್ಯವಿದೆ ಎಂದರು.

ಪ್ರವಚನಕಾರರಾಗಿ ಆಗಮಿಸಿ ಬಸವೇಶ್ವರಿ ಮಾತಾಜಿ ಶರಣ ಚರಿತಾಮೃತ ಪ್ರವಚನ ಪ್ರಾರಂಭಿಸಿ 12ನೇ ಶತಮಾನದ ಶಷರಣರ ಯುಗ ಎಂದರೆ ಅದೊಂದು ಸುವರ್ಣ ಯುಗ. ಈ ಜಗತ್ತಿನಲ್ಲಿ ಜಾತಿಯೇ ಇಲ್ಲದಂತೆ ನೋಡಿಕೊಳ್ಳಲು ಪ್ರಯತ್ನಿಸಿದವರು ಬಸವಾದಿ ಶಿವಶರಣರು. ಬಾಲ್ಯದಲ್ಲಿಯೇ ಬಂಡಾಯ ಹೂಡಿದವರು ಬಸವಣ್ಣನವರು. ಅವರೊಬ್ಬ ಸರ್ವಾಂಗ ಪರಿಪೂರ್ಣ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿದ್ದರು. ಪ್ರಜಾಪ್ರಭುತ್ವದ ಮಾದರಿಯಲ್ಲಿ ಬಸವ ಧರ್ಮ ಹುಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿನೇಟ್ ಸದಸ್ಯರಾಗಿ ಆಯ್ಕೆಯಾಗಿರುವ ಡಾ. ವೀರೇಶ ಹಂಚಿನಾಳ, ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಈರ್ವರೂ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರವಚನ ಸಮಿತಿ ಅಧ್ಯಕ್ಷ ಬಸಯ್ಯ ಗಿಂಡಿಮಠ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಎಚ್.ವಿರೂಪಾಕ್ಷಗೌಡ, ಶಿವಯೋಗಿ ಗಡ್ಡದ, ಶಿವಕುಮಾರ ಬೆಟಗೇರಿ, ವೀರಪ್ಪ ಮಡಿವಾಳರ, ಎನ್.ಎ. ಗೌಡರ್, ಹೇಮಗಿರೀಶ ಹಾವಿನಾಳ, ಬಸವರಾಜ ಹೂಗಾರ, ದೇವಪ್ಪ ರಾಮೇನಹಳ್ಳಿ, ಈಶಣ್ಣ ಬೆಟಗೇರಿ, ಪಾಲಾಕ್ಷಿ ಗಣದಿನ್ನಿ, ಅಶೋಕ ಹುಬ್ಬಳ್ಳಿ, ಸದಾಶಿವಯ್ಯ ಕಬ್ಬೂರಮಠ, ಬಿ.ವಿ. ಮುದ್ದಿ, ಪವನ್ ಚೋಪ, ಶರಣಪ್ಪ ಕುಬಸದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ಸ್ವಾಗತಿಸಿ, ವಿಶ್ವನಾಥ ಉಳ್ಳಾಗಡ್ಡಿ ನಿರೂಪಿಸಿದರು.

PREV