ಕರ್ನಾಟಕದ ಗಾಜಾಪಟ್ಟಿ ಕೊಪ್ಪಳ: ನ್ಯಾಯಾಧೀಶ ಚಂದ್ರಶೇಖರ

KannadaprabhaNewsNetwork |  
Published : May 26, 2025, 12:22 AM IST

ಸಾರಾಂಶ

ಎಸ್‌ಸಿ-ಎಸ್‌ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಅಡಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುವ ವೇಳೆಯಲ್ಲಿ ಅಂಕಿ ಸಂಖ್ಯೆ ನೋಡಿದಾಗ ಇದೆಲ್ಲ ಗೊತ್ತಾಗುತ್ತಿದೆ

ಕೊಪ್ಪಳ: ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ನೋಡಿದರೆ ಕೊಪ್ಪಳವನ್ನು ಕರ್ನಾಟಕದ ಗಾಜಾಪಟ್ಟಿ ಎಂದೇ ಕರೆಯಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ಚಂದ್ರಶೇಖರ ಹೇಳಿದ್ದಾರೆ.

ನಗರದ ಸಾಹಿತ್ಯ ಭವನದಲ್ಲಿ ಪೀಪಲ್ಸ್ ಎಜುಕೇಶನ್ ಸೊಸೈಟಿ, ಸಿಂಚನ ಜನಸೇನಾ ಟ್ರಸ್ಟ್, ಚಿನ್ಮಯಿ ಪ್ರಕಾಶನ ಜಂಟಿಯಾಗಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಶಿಕ್ಷಕ ಬಿ. ತಿರುಪತಿ ಶಿವನಗುತ್ತಿ ಅವರ ಎಂದೂ ಮುಳುಗದ ಸೂರ್ಯ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ಎಸ್‌ಸಿ-ಎಸ್‌ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಅಡಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುವ ವೇಳೆಯಲ್ಲಿ ಅಂಕಿ ಸಂಖ್ಯೆ ನೋಡಿದಾಗ ಇದೆಲ್ಲ ಗೊತ್ತಾಗುತ್ತಿದೆ. ಜಿಲ್ಲೆಯಲ್ಲಿ 2023ರಲ್ಲಿ 64 ಪ್ರಕರಣ, 2024ರಲ್ಲಿ 43 ಪ್ರಕರಣ ಹಾಗೂ 2025ರಲ್ಲಿ 19 ಪ್ರಕರಣಗಳು ದಾಖಲಾಗಿವೆ. ಆದರೆ, ದಾಖಲಾಗದೆ ಇರುವ ಅದೆಷ್ಟೋ ಪ್ರಕರಣಗಳು ನಡೆಯುತ್ತಿವೆ. ಅವುಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಗುತ್ತದೆ. ಎಸ್‌ಸಿ-ಎಸ್‌ಟಿ ಕಾಯ್ದೆ ಅಡಿಯಲ್ಲಿ ಬರುವ ದೂರು ವಿಚಾರಣೆಯನ್ನೇ ಮಾಡದೆ ಮುಗಿಸಿ ಹಾಕಲಾಗುತ್ತದೆ. ಹೇಳಿಕೆ ಪಡೆಯದೇ ಹೇಳಿಕೆ ದಾಖಲಿಸಲಾಗುತ್ತದೆ. ಪ್ರತಿ ದೂರು ದಾಖಲಿಸಿಕೊಂಡು ನೈಜ ಪ್ರಕರಣಕ್ಕೆ ಹಿನ್ನಡೆಯುಂಟು ಮಾಡುತ್ತಾರೆ. ಇದೆಲ್ಲವನ್ನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರನ್ನು ಗಮನಿಸಬೇಕಾಗುತ್ತದೆ ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಆಗುವ ರೀತಿಯಲ್ಲಿ ನಡೆದಿರುವ ಪ್ರಕರಣಗಳನ್ನು ಎಸ್‌ಸಿ-ಎಸ್‌ಟಿ ಕಾಯ್ದೆ ಅಡಿ ದಾಖಲು ಮಾಡಿಕೊಳ್ಳದೆ ಬೇರೆ ಪ್ರಕರಣಗಳನ್ನಾಗಿ ಪರಿವರ್ತಿಸಿ ವಂಚಿಸಲಾಗುತ್ತದೆ ಎಂದು ಚಂದ್ರಶೇಖರ ಅವರು ಹೇಳಿದರು

ನನಗೂ ಬೇಡ:ಜಿಲ್ಲೆಯಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಇಂಥ ಸ್ಥಿತಿಯಲ್ಲಿ ನನಗೂ ಬೆಂಗಾವಲು ಬೇಡ ಎಂದು ನಾನು ನನ್ನ ಬೆಂಗಾವಲು ಸಿಬ್ಬಂದಿಯನ್ನು ತೆಗೆದುಕೊಂಡಿಲ್ಲ. ದಲಿತರಿಗೆ ಇಲ್ಲದ ರಕ್ಷಣೆ ನನಗೆ ಯಾಕೆ ಎಂದರು. ಆದರೆ, ಭೀಮ ಮಾರ್ಗದಲ್ಲಿ ಸುರಕ್ಷತೆ ಇದೆ ಎಂದರು.

ಶೋಷಣೆಯಿಂದ ಹೊರ ಬರಲು ಅಂಬೇಡ್ಕರ್ ಹೇಳಿದಂತೆ ಶಿಕ್ಷಣವೊಂದೆ ಮಾರ್ಗವಾಗಿದೆ. ಹೀಗಾಗಿ, ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಇದರಿಂದ ಹೊರಬರುವಂತಾಗಬೇಕು ಎಂದರು.

ದೇಶದೊಳಗಿನ ಸ್ವಾತಂತ್ರ್ಯ:ದೇಶಕ್ಕೆ ಸ್ವಾತಂತ್ರ್ಯ ಎಷ್ಟು ಮುಖ್ಯವೋ ದೇಶದೊಳಗಿನ ಸ್ವಾತಂತ್ರ್ಯವೂ ಅಷ್ಟೇ ಮುಖ್ಯವಾಗಿರುತ್ತದೆ. ದೇಶ ಪ್ರೇಮ ಹೇಗಿರಬೇಕು ಎಂದರೆ ಕೋರಿಯಾ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗ ದೇಶದ ಪ್ರಜೆಗಳು ತಮ್ಮ ಒಡವೆ, ವಸ್ತ್ರಗಳನ್ನು ಮಾರಿ ದೇಶಕ್ಕೆ ಹಣ ನೀಡಿದರು. ಅಂಥ ದೇಶ ಪ್ರೇಮ ಮುಖ್ಯ ಎಂದರು.

ಕಿನ್ನಾಳ ಗ್ರಾಮ ದತ್ತು ಪಡೆದು ಅಭಿವೃದ್ಧಿ ಮಾಡಿದ್ದೇವೆ. ಅಲ್ಲಿ ಅಕ್ರಮ ಮರಳು ದಂಧೆ, ಅಕ್ರಮ ಮದ್ಯ ಮಾರಾಟ, ಸ್ಮಶಾನ ಒತ್ತುವರಿ ತೆರವು ಮಾಡುವ ಕಾರ್ಯ ಮಾಡಲಾಗಿದೆ. ಇದರ ಮಧ್ಯೆಯೂ ಕಲ್ಯಾಣ ಕರ್ನಾಟಕದಲ್ಲಿ 371ಜೆ ಪ್ರಮಾಣಪತ್ರ ವಿತರಣೆ ಸೇರಿದಂತೆ ಸಾಕಷ್ಟು ಪ್ರಗತಿಯಾಗಿದ್ದನ್ನು ಅಲ್ಲಗಳೆಯುವಂತೆ ಇಲ್ಲ ಎಂದರು.

ಎಂದೂ ಮರೆಯ ಸೂರ್ಯ ಕುರಿತು ಸಾಹಿತಿ ಡಿ. ರಾಮಣ್ಣ ಆಲ್ಮರ್ಸಿಕೇರಿ ಮಾತನಾಡಿದರು. ಹೋರಾಟಗಾರ ಅಭಿ ಒಕ್ಕಲಿಗರು ಎಂದೂ ಮುಳುಗದ ಅಂಬೇಡ್ಕರ್ ಎನ್ನುವ ವಿಷಯ ಮೇಲೆ ಉಪನ್ಯಾಸ ನೀಡಿದರು.

ಛಲವಾದಿ ಜಾಗ್ರತ ವೇದಿಕೆ ಸಂಚಾಲಕ ಕೃಷ್ಣ ಎಂ. ಇಟ್ಟಂಗಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಪ್ರಾಸ್ಥಾವಿಕವಾಗಿ ರಾಜಶೇಖರ ಪಾಟೀಲ್ ಮಾತನಾಡಿದರು. ಶರಣಪ್ಪ ಬಿಳಿಎಲಿ ಹಾಗೂ ನಾಗರಾಜ ಡೊಳ್ಳಿನ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಛಲವಾದಿ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಎಂ. ಬೆಲ್ಲದ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ, ನಿವೃತ್ತ ಪ್ರಾಚಾರ್ಯ ಸೋಮನಗೌಡ ಪಾಟೀಲ್, ಪತ್ರಕರ್ತ ಚಾಮರಾಜ ಸವಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಉಪಸಭಾಪತಿ ಡಾ. ಶ್ರೀನಿವಾಸ ಹ್ಯಾಟಿ, ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ ಹೊರಪೇಟೆ, ಜಿಲ್ಲಾ ಎಸ್‌ಸಿ-ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಮ್ಯಾಗಳಮನಿ, ಗುಡದಪ್ಪ ಹಡಪದ, ವೇಣಗೋಪಾಲ, ಪ್ರಕಾಶ ರಾಜೇಶ ಯಾವಗಲ್, ಬಸವರಾಜ ಕಡೆಮನಿ ಮೊದಲಾದವರು ಇದ್ದರು.

ಗಮನ ಸೆಳೆದ ಚಿತ್ರಕಲಾ ಪ್ರದರ್ಶನ: ಸುಚನಾ ಶಿವನಗುತ್ತಿ ಚಿತ್ರಕಲಾ ಪ್ರದರ್ಶನ ವಿಶೇಷ ಗಮನ ಸೆಳೆಯಿತು. ಹೂವು, ಬಳ್ಳಿಗಳ ಮೇಲೆ ಅಂಬೇಡ್ಕರ್ ಪದವಿಗಳು, ಸಾಧನಾ ಕೃತಿಗಳನ್ನು ಹಾಗೂ ಒಂದು ಕೋಟಿ ಬಾರಿ ಜೈ ಭೀಮ ಎಂದು ಬರೆದಿರುವ ಅಂಬೇಡ್ಕರ್ ಚಿತ್ರ ವಿಶೇಷ ಆಕರ್ಷಕವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ