ಅನಿರೀಕ್ಷಿತ ಗೆಲವಿನಿಂದ ಮುಖ್ಯ ಪಂದ್ಯಾವಳಿಗೆ ಕರ್ನಾಟಕದ ಸೂರಜ್‌

KannadaprabhaNewsNetwork | Published : Oct 18, 2023 1:01 AM

ಸಾರಾಂಶ

ಕರ್ನಾಟಕದ ಸೂರಜ್‌ ಪ್ರಬೋಧ ಮತ್ತು ಗುಜರಾತದ ಮಧ್ವಿನ್‌ ಕಾಮತ್‌ ಇಲ್ಲಿ ನಡೆದಿರುವ ಐಟಿಎಫ್‌ ಪುರುಷರ ವಿಶ್ವ ಟೆನಿಸ್‌ ಟೂರ್‌ ಪಂದ್ಯಾವಳಿಯ ಅರ್ಹತಾ ಸುತ್ತಿನಲ್ಲಿ ಪ್ರಮುಖ ಆಟಗಾರರ ವಿರುದ್ಧ ಅನಿರೀಕ್ಷಿತ ಗೆಲವು ಸಾಧಿಸಿ ಮುಖ್ಯ ಪಂದ್ಯಾವಳಿಗೆ ಅರ್ಹತೆ ಪಡೆದರು.

ಕನ್ನಡಪ್ರಭ ವಾರ್ತೆ ಧಾರವಾಡ

ಕರ್ನಾಟಕದ ಸೂರಜ್‌ ಪ್ರಬೋಧ ಮತ್ತು ಗುಜರಾತದ ಮಧ್ವಿನ್‌ ಕಾಮತ್‌ ಇಲ್ಲಿ ನಡೆದಿರುವ ಐಟಿಎಫ್‌ ಪುರುಷರ ವಿಶ್ವ ಟೆನಿಸ್‌ ಟೂರ್‌ ಪಂದ್ಯಾವಳಿಯ ಅರ್ಹತಾ ಸುತ್ತಿನಲ್ಲಿ ಪ್ರಮುಖ ಆಟಗಾರರ ವಿರುದ್ಧ ಅನಿರೀಕ್ಷಿತ ಗೆಲವು ಸಾಧಿಸಿ ಮುಖ್ಯ ಪಂದ್ಯಾವಳಿಗೆ ಅರ್ಹತೆ ಪಡೆದರು.

25 ಸಾವಿರ ಡಾಲರ್‌ ಬಹುಮಾನ ಮೊತ್ತದ ಮುಖ್ಯ ಪಂದ್ಯಾವಳಿ ಮಂಗಳವಾರ ಇಲ್ಲಿಯ ಧಾರವಾಡ ಜಿಲ್ಲಾ ಟೆನಿಸ್‌ ಸಂಸ್ಥೆಯ ರಾಜಾಧ್ಯಕ್ಷ ಪೆವಿಲಿಯನ್‌ ಕೋರ್ಟಗಳಲ್ಲಿ ಪ್ರಾರಂಭವಾಯಿತು.

ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಧ್ವಿನ್‌ ಕಾಮತ್‌ ಭಾರತದ ಮಾಜಿ ಡೇವಿಸ್‌ ಕಪ್‌ ಆಟಗಾರ ಮತ್ತು ಏಶಿಯನ್‌ ಗೇಮ್ಸ್‌ ಪದಕ ವಿಜೇತ ವಿಷ್ಣುವರ್ಧನ ವಿರುದ್ಧ 5-7, 6-3, 10-5 ರಿಂದ ಗೆಲವು ಸಾಧಿಸಿದರೆ, ಸೂರಜ್‌ 14ನೇ ಶ್ರೇಯಾಂಕಿತ ಯಶ್‌ ಯಾದವ ಅವರನ್ನು 6-4, 6-1ರಿಂದ ನೇರ ಸೆಟ್‌ಗಳಲ್ಲಿ ಪರಾಭವಗೊಳಿಸಿದರು.

ಮುಖ್ಯ ಪಂದ್ಯಾವಳಿಯಲ್ಲಿ ಮೊದಲ ದಿನ ಕೇವಲ ಎರಡು ಸಿಂಗಲ್ಸ್‌ ಪಂದ್ಯಗಳು ನಡೆದು, 3ನೇ ಶ್ರೇಯಾಂಕಿತ ದಿಗ್ವಿಜಯ ಪ್ರತಾಪಸಿಂಗ್‌ ಸಿದ್ಧಾಂತ ಬಂಥಿಯಾ ಅವರಿಂದ ಪ್ರಬಲ ಪ್ರತಿರೋಧ ಎದುರಿಸಿ ಕೊನೆಗೆ 6-2, 7-6 (7) ರಿಂದ ಗೆಲುವಿನ ನಗೆ ಬೀರಿದರು. ಇನ್ನೊಂದು ಸಿಂಗಲ್ಸ್‌ನಲ್ಲಿ ನಿತಿನಕುಮಾರ ಸಿನ್ಹಾ ವೈಲ್ಡ್‌ ಕಾರ್ಡ್ ಮೂಲಕ ನೇರ ಪ್ರವೇಶ ಪಡೆದಿದ್ದ ರಿಶಿ ರೆಡ್ಡಿ ಅವರನ್ನು 6-2, 6-2 ರಿಂದ ನಿರಾಯಾಸವಾಗಿ ಹಣಿದರು.

ಡಬಲ್ಸ್‌ ಮುಖ್ಯ ಡ್ರಾ ಪಂದ್ಯದಲ್ಲಿ ಭಾರತದ ಸಾಯಿ ಕಾರ್ತಿಕ ರಡ್ಡಿ ಗಂಟಾ ಮತ್ತು ಮನೀಶ ಸುರೇಶಕುಮಾರ ಜೋಡಿ ದ್ವಿತೀಯ ಶ್ರೇಯಾಂಕಿತ ಅಮೇರಿಕಾದ ಬೋಗಡಾನ್‌ ಬೋಬ್ರೋವ್‌ ಮತ್ತು ನಿಕ್‌ ಚಾಪೆಲ್‌ ಅವರನ್ನು 6-3, 3-6, 10-5 ರಿಂದ ಸೋಲಿಸಿ ಅಚ್ಚರಿಯ ಫಲಿತಾಂಶ ಒದಗಿಸಿದರು.

ಸೋಮವಾರ ಮಂದ ಬೆಳಕು ಮತ್ತು ಸ್ವಲ್ಪ ಕಾಲ ಸುರಿದ ಮಳೆಯಿಂದಾಗಿ ಮಧ್ವಿನ್‌ ಕಾಮತ್‌ ಮತ್ತು ವಿಷ್ಣುವರ್ಧನ ಅವರ ಮಧ್ಯದ ಪಂದ್ಯ ಪ್ರಥಮ ಸೆಟ್‌ನಲ್ಲಿ ಸ್ಕೋರ್‌ 4-4 ಆಗಿದ್ದಾಗ ಸ್ಥಗಿತಗೊಂಡಿತ್ತು. ಮಂಗಳವಾರ ಆಟ ಮುಂದುವರಿದು ವಿಷ್ಣು 7-5 ರಿಂದ ಪ್ರಥಮ ಸೆಟ್‌ ಗೆದ್ದರು. ಆದರೆ, ಚೇತರಿಸಿಕೊಂಡು ಉತ್ತಮ ಆಟ ಆಡಿದ 21ರ ಹರೆಯದ ಮಧ್ವಿನ್‌ 2ನೇ ಸೆಟ್‌ನ 4 ಮತ್ತು 6ನೇ ಗೇಮ್‌ಗಳಲ್ಲಿ ಎದುರಾಳಿಯ ಸರ್ವೀಸ್‌ ಮುರಿದು ಆ ಸೆಟ್‌ ಗೆದ್ದು ಪಂದ್ಯವನ್ನು ಸಮಸ್ಥಿತಿಗೆ ತಂದರು. 3ನೇ ಸೆಟ್‌ನಲ್ಲಿ 4-2 ರಿಂದ ಮುನ್ನಡೆಯಲಿದ್ದು, ವಿಷ್ಣುವರ್ಧನ ಸರ್ವೀಸ್‌ ಮತ್ತು ಚೆಂಡನ್ನು ಮರಳಿಸುವಲ್ಲಿ ತಪ್ಪೆಸಗಿ ತಮಗೆ ಸಿಕ್ಕಿದ್ದ ಪ್ರಯೋಜನವನ್ನು ಮಣ್ಣುಪಾಲು ಮಾಡಿದರು. ಕೊನೆಗೆ ಪಂದ್ಯ ಸೋತರು.

ಡಬಲ್ಸ್‌ ಪಂದ್ಯಗಳಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಆಟಗಾರ ರಾಮಕುಮಾರ ರಾಮನಾಥನ್‌-ಪುರವಕುಮಾರ ಹಾಗೂ ದಿಗ್ವಿಜಯ ಪ್ರತಾಪಸಿಂಗ್‌-ಕರಣಸಿಂಗ್‌ ಅವರ ನಡುವಿನ ಹಣಾಹಣಿಯಲ್ಲಿ ಮೊದಲ ಸೆಟ್‌ನಲ್ಲಿ ದಿಗ್ವಿಜಯ-ಕರಣ ಜೋಡಿ 7-6 (7) ಜಯಶಾಲಿಯಾದ ನಂತರ ಬೆಳಕಿನ ಅಭಾವದಿಂದ ಸ್ಥಗಿತಗೊಂಡಿದ್ದು ಬುಧವಾರ ಬೆಳಿಗ್ಗೆ ಮುಂದುವರಿಯಲಿದೆ.

ಫಲಿತಾಂಶಗಳು..

ಪುರುಷರ ಸಿಂಗಲ್ಸ್‌ ..

-ದಿಗ್ವಿಜಯ ಪ್ರತಾಪ ಸಿಂಗ್‌ ವಿರುದ್ಧ ಸಿದ್ಧಾಂತ ಬಂಥಿಯಾ 6-2, 7-6 (7)

-ನಿತಿನಕುಮಾರ ಸಿನ್ಹಾ ವಿರುದ್ಧ ರಿಷಿ ರೆಡ್ಡಿ 6-2, 6-2

ಪುರುಷರ ಡಬಲ್ಸ್‌..

ಮನಿಷ ಗಣೇಶ - ಸೂರಜ್‌ ಪ್ರಬೋಧ ವಿರುದ್ಧ ದೀಪಕ ಅನಂತರಾಮು-ರಶೀನ್‌ ಸ್ಯಾಮ್ಯುವೆಲ್‌ 7-6 (3), 6-3.

ರಿಷಬ್‌ ಅಗರವಾಲ್‌-ಫ್ಲೋರೆಂಟ್‌ ಬಾಕ್ಸ್‌ (ಫ್ರಾನ್ಸ್‌) ವಿರುದ್ಧ ಆದಿಲ್‌ ಕಲ್ಯಾಣಪುರ-ರೋಟಾರೋ ಮತ್ಸುಮುರಾ (ಜಪಾನ) 6-4, 5-7, 10-4.

ಇಶಾಕ್‌ ಇಕ್ಬಾಲ್‌ -ಫೈಸಲ್‌ ಕಮರ್‌ ವಿರುದ್ಧ ಚಿರಾಗ ದುಹಾನ್‌ -ದೇವ ಜಾವಿಯಾ 6-3, 6-7 (4) 10-4.

ಜೇಕ್‌ ಭಾಂಗಡಿಯಾ (ಅಮೇರಿಕಾ)-ರಾಘವ ಜಯಸಿಂಘಾನಿ ವಿರುದ್ಧ ತುಷಾರ ಮದನ್‌-ಜಗಮೀತ ಸಿಂಗ್‌ 6-3, 6-4

ಸಿದ್ಧಾಂತ ಬಂಥಿಯಾ-ವಿಷ್ಣುವರ್ಧನ ವಿರುದ್ಧ ತೀಜಮನ್‌ ಲೂಫ್‌ (ನೆದರಲ್ಯಾಂಡ್)-ಸ್ಟಿಜ್ನ್ ಪೇಲ್‌ (ನೆದರಲ್ಯಾಂಡ) 6-4, 6-1.

ಪ್ರಜ್ವಲ ದೇವ-ನಿತಿನಕುಮಾರ ಸಿನ್ಹಾ ವಿರುದ್ಧ ಯಶ್‌ ಚೌರಾಸಿಯಾ-ಅಥರ್ವ ಶರ್ಮಾ 6-1, 6-2.

ಸಾಯಿ ಕಾರ್ತಿಕರೆಡ್ಡಿ ಘಂಟಾ-ಮನಿಷ ಸುರೇಶಕುಮಾರ ವಿರುದ್ಧ ಬೋಗಡಾನ ಬೋಬ್ರೋ-ನಿಕ್‌ ಚಾಪೆಲ್‌ (ಅಮೇರಿಕಾ) 6-3, 3-6, 10-5.

ಪುರುವರಾಜಾ-ರಾಮಕುಮಾರ ರಾಮನಾಥನ್‌ ವಿರುದ್ಧ ದಿಗ್ವಿಜಯ ಪ್ರತಾಪಸಿಂಗ್‌ -ಕರಣಸಿಂಗ್‌ 6-7 (7) ಪಂದ್ಯ ಮುಂದುವರೆಯಲಿದೆ.

Share this article