ರಸ್ತೆ ಗುಂಡಿ: ಟಾಟಾ ಏಸ್ ಮೇಲೆ ಉರುಳಿಬಿದ್ದ ಟ್ರ್ಯಾಕ್ಟರ್‌ನ ಟ್ರೇಲರ್‌

KannadaprabhaNewsNetwork | Published : Oct 18, 2023 1:01 AM

ಸಾರಾಂಶ

ರಸ್ತೆಯಲ್ಲಿನ ಗುಂಡಿಗೆ ಬಿದ್ದ ಕಟ್ಟಿಗೆ ನಾಟಾ ತುಂಬಿದ ಟ್ರ್ಯಾಕ್ಟರ್‌ನ ಟ್ರೇಲರ್‌ ಟಾಟಾ ಎಸಿ ಗಾಡಿಯ ಮೇಲೆ ಉರುಳಿದ ಘಟನೆ ಮಂಗಳವಾರ ಸಂಜೆ ಇಲ್ಲಿನ ತಡಸ ಗೊಂದಿ ಮುಖ್ಯ ರಸ್ತೆಯ ಉದಾಸಿ ಕಲ್ಯಾಣ ಮಂಟಪದ ಬಳಿ ನಡೆದಿದೆ. ಆದರೆ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ರಸ್ತೆಯಲ್ಲಿನ ಗುಂಡಿಗೆ ಬಿದ್ದ ಕಟ್ಟಿಗೆ ನಾಟಾ ತುಂಬಿದ ಟ್ರ್ಯಾಕ್ಟರ್‌ನ ಟ್ರೇಲರ್‌ ಟಾಟಾ ಎಸಿ ಗಾಡಿಯ ಮೇಲೆ ಉರುಳಿದ ಘಟನೆ ಮಂಗಳವಾರ ಸಂಜೆ ಇಲ್ಲಿನ ತಡಸ ಗೊಂದಿ ಮುಖ್ಯ ರಸ್ತೆಯ ಉದಾಸಿ ಕಲ್ಯಾಣ ಮಂಟಪದ ಬಳಿ ನಡೆದಿದೆ. ಆದರೆ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ.

ಆನಿಕೆರೆ ಕಡೆಯಿಂದ ಬಸ್‌ ಡಿಪೋದತ್ತ ತೆರಳುತ್ತಿರುದ್ದ ಕಟ್ಟಿಗೆ ನಾಟಾ ತುಂಬಿದ ಟ್ರ್ಯಾಕ್ಟರ್ ರಸ್ತೆಯಲ್ಲಿನ ತಗ್ಗಿಗೆ ಬಿದ್ದಿದ್ದು, ಪಕ್ಕದಲ್ಲಿಯೇ ಹೋಗುತ್ತಿದ್ದ ಇನ್ನೊಂದು ಟಾಟಾ ಎಸಿ ವಾಹನದ ಮೇಲೆ ಉರುಳಿದ ಪರಿಣಾಮವಾಗಿ ಎರಡೂ ಗಾಡಿಗಳು ನುಜ್ಜು ಗುಜ್ಜಾಗಿವೆ. ಪೊಲೀಸ್‌ ಸಿಬ್ಬಂದಿ ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ವಾಹನಗಳನ್ನು ಬೇರೆ ದಾರಿಯ ಮೂಲಕ ಸಂಚರಿಸಲು ಮಾರ್ಗ ಸೂಚಿಸಿ ವಾಹನ ಸಂಚಾರ ಸುಗಮಗೊಳಿಸಿದರು.

ಅತ್ಯಂತ ಜನನಿಬಿಡವಾದ ಈ ರಸ್ತೆಯ ದುರಸ್ತಿಗಾಗಿ ಸಾರ್ವಜನಿಕರು ಸಾಕಷ್ಟು ಬಾರಿ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ಕಳೆದ ಐದಾರು ತಿಂಗಳಿನಿಂದ ಇದಕ್ಕಾಗಿ ಹತ್ತು ಹಲವು ಹೋರಾಟ ನಡೆದರೂ ರಸ್ತೆಗೆ ದುರಸ್ತಿ ಭಾಗ್ಯ ಸಿಗುದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ರಸ್ತೆ ದುರಸ್ತಿಗೆ ಈಗಾಗಲೇ ಟೆಂಡರ್ ಆಗಿದೆ. ನಾಳೆಯಿಂದಲೇ ಕೆಲಸ ಆರಂಭ ಮಾಡುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ರಸ್ತೆ ದುರಸ್ತಿ ಸ್ವಲ್ಪ ವಿಳಂಬವಾಗಿದೆ. ಕೂಡಲೇ ಸಾರ್ವಜನಿಕರ ಹಿತಕ್ಕಾಗಿ ದುರಸ್ತಿಗೆ ಕಾಳಜಿ ವಹಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಸ್. ನಾರಾಜ ತಿಳಿಸಿದ್ದಾರೆ.

Share this article