ಆಲ್ದೂರಿನಲ್ಲಿ ರಸ್ತೆ ತಡೆ ಪ್ರತಿಭಟನೆ, ಡಿಸಿಗೆ ಮನವಿ । ಚಿಕ್ಕಮಗಳೂರು ಪ್ರವೇಶಕ್ಕೆ ನಿರ್ಬಂಧ ಹೇರಲು ಆಗ್ರಹ
ಇದೇ ಸಂದರ್ಭದಲ್ಲಿ ಆಲ್ದೂರು ವಲಯದ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಬಿ.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಒಕ್ಕಲಿಗ ಸಮಾಜ ಹತ್ತಾರು ಮುಖ್ಯಮಂತ್ರಿಗಳನ್ನು ನೀಡಿದೆ. ಹೆಸರಾಂತ ಸಾಹಿತಿಗಳಾದ ಕುವೆಂಪು, ಜವರೇಗೌಡ ನಮ್ಮ ಸಮಾಜದವರಾಗಿದ್ದು, ಅನೇಕ ಕೊಡುಗೆಗಳನ್ನು ಕೊಟ್ಟಿರುವ ಈ ಸಮಾಜದ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡಿರುವ ಭಗವಾನ್ ಸಾಹಿತಿ ಅಲ್ಲ. ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ತಾಪಂ ಮಾಜಿ ಸದಸ್ಯ ಜಿ.ಯು.ರಘು ಮಾತನಾಡಿ, ಭಗವಾನ್‌ಗೆ ಮಾತಿನಲ್ಲಿ ಹಿಡಿತವಿಲ್ಲ. ಅವರಿಗೆ ಪೊಲೀಸ್ ಇಲಾಖೆಯಿಂದ ಭದ್ರತೆ ಕೊಡಬಾರದು. ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರಿಗೆ ಜನರು ಬುದ್ಧಿ ಕಲಿಸಬೇಕು. ಪ್ರತಿಭಟನೆ ಮಾಡಿದರೆ ಪ್ರಯೋಜನವಿಲ್ಲ, ಅವರು ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಘೇರಾವ್ ಹಾಕಬೇಕು. ಚಿಕ್ಕಮಗಳೂರು ಟಿಎಪಿಎಂಎಸ್ ನಿರ್ದೇಶಕ ಎಚ್.ಎಸ್ ಕವೀಶ್ ಮಾತನಾಡಿ, ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸುತ್ತೇವೆಂದರು. ಪ್ರತಿಭಟನೆಯಲ್ಲಿ ಒಕ್ಕಲಿಗ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು. ವಿರೋಧಕ್ಕೆ ಕಾರಣ ಏನು ?: ದಂಟರಮಕ್ಕಿ ಶ್ರೀನಿವಾಸ್ಚಿಕ್ಕಮಗಳೂರು: ಪ್ರೊ. ಕೆ.ಎಸ್. ಭಗವಾನ್ ಅವರನ್ನು ವಿರೋಧಿಸಲು ಕಾರಣ ಏನು ?. ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಮಹಿಷ ದಸರಾ ಆಚರಣಾ ಸಮಿತಿ ಆಗ್ರಹಿಸಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘಟನೆಯ ಮುಖಂಡ ದಂಟರಮಕ್ಕಿ ಶ್ರೀನಿವಾಸ್, ಒಂದು ಸಂಘಟನೆಯ ಹಕ್ಕು, ಇನ್ನೊಂದು ಸಂಘಟನೆ ಕಿತ್ತುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಪ್ರೊ. ಭಗವಾನ್ ಹೇಳಿದ್ದೇನು ?, ಇದನ್ನು ವಿರೋಧ ಮಾಡುವ ಸಂಘಟನೆಗಳು ಸ್ಪಷ್ಟಪಡಿಸಬೇಕು. ಅ. 20 ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಮಹಿಷ ದಸರಾ ಕಾರ್ಯಕ್ರಮದಲ್ಲಿ ಪ್ರೊ. ಕೆ.ಎಸ್. ಭಗವಾನ್ ಅವರು ಪಾಲ್ಗೊಳ್ಳಲಿದ್ದಾರೆ. ಅಂದು, ಯಾರಾದರೂ ಅಡ್ಡಿಪಡಿಸಿದರೆ, ಅದರ ಹೊಣೆಯನ್ನು ಜಿಲ್ಲಾಡಳಿತ ಹೊರಬೇಕು. ಪ್ರತಿಭಟನೆಯ ಎಚ್ಚರಿಕೆ ನೀಡಿರುವ ಸಂಘಟನೆಯ ಮುಖಂಡರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ನಮ್ಮ ಕಾರ್ಯಕ್ರಮಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅದಕ್ಕೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದ ಅವರು, ನಾವು ಈ ದೇಶದ ಕಾನೂನು ಗೌರವಿಸುತ್ತೇವೆ. ನೀವು ಕೂಡ ಗೌರವಿಸಬೇಕು ಎಂದು ಕಿವಿಮಾತು ಹೇಳಿದರು. ಈ ಕಾರ್ಯಕ್ರಮದ ಮೂಲ ಉದ್ದೇಶ ಮೂಲ ನಿವಾಸಿಗಳ ಇತಿಹಾಸ ಅರಿತು ಪ್ರಸ್ತುತ ಮೂಲ ನಿವಾಸಿಗಳ ಸ್ಥಿತಿಗತಿ ಕುರಿತಾಗಿದೆ ವಿನಃ, ಯಾರನ್ನು ಅವಹೇಳನ ಮಾಡುವ ಉದ್ದೇಶವನ್ನು ಹೊಂದಿಲ್ಲ. ಈ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಸಂಚು ಮಾಡಿಸಿರುವ ಸಂಘಟನೆಗಳ ಮುಖಂಡರನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ಸೂಕ್ತ ರೀತಿಯ ರಕ್ಷಣೆ ನೀಡುವುದರೊಂದಿಗೆ ಶಾಂತ ರೀತಿಯಲ್ಲಿ ಕಾರ್ಯಕ್ರಮ ನಡೆಸಲು ಸಹಕರಿಸಬೇಕು ಎಂದು ಹೇಳಿದರು. ಸುದ್ಧಿಗೋಷ್ಠಿಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಮರ್ಲೆ ಅಣ್ಣಯ್ಯ, ಲಕ್ಷ್ಮಣ್ ಹುಣಸೇಮಕ್ಕಿ, ದೇವಿಪ್ರಸಾದ್, ಹರೀಶ್ ಮಿತ್ರಾ, ಜಗದೀಶ್, ಪರಮೇಶ್ ಉಪಸ್ಥಿತರಿದ್ದರು.