ಕಡ್ಲೆಪುರಿ, ಕಡಲೆಕಾಯಿ ತಿಂದು, ಟೀ ಕುಡಿದು ವಿನೂತನ ಪ್ರತಿಭಟನೆ । ತಮಿಳುನಾಡಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರ ಕ್ರಮಕ್ಕೆ ಖಂಡನೆಕನ್ನಡಪ್ರಭ ವಾರ್ತೆ ಚಾಮರಾಜನಗರ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ 100ನೇ ದಿನವಾದ ಗುರುವಾರ ನಗರದಲ್ಲಿ ಕಡ್ಲೆಪುರಿ, ಕಡಲೆಕಾಯಿ ತಿಂದು, ಟೀ ಕಾಯಿಸಿ ಕುಡಿದು ವಿನೂತನ ಪ್ರತಿಭಟನೆ ನಡೆಸಿತು. ಕಳೆದ ೧೦೦ ದಿನಗಳಿಂದ ಸೇನಾ ಪಡೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದೆ.ನಗರದ ಚಾಮರಾಜೇಶ್ವರ ಉದ್ಯಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಭುವನೇಶ್ವರಿ ಭಾವಚಿತ್ರವಿಟ್ಟು ಕಡ್ಲೆಪುರಿ, ಕಡಲೆಕಾಯಿ ತಿಂದು, ಟೀ ಕಾಯಿಸಿ ಕುಡಿಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಾಥ್ ನೀಡಿದರು.
ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಕ್ರಮವನ್ನು ಖಂಡಿಸಿ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ತಮಿಳು ಸಂಘಟನೆಗಳು ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹಾಗೂ ಇನ್ನಿತರ ಸಂಘಟನೆಗಳು ಸೇರಿ ಸತತವಾಗಿ ೧೦೦ನೇ ದಿನದ ಹೋರಾಟ ಮಾಡಲಾಗುತ್ತಿದೆ. ಈ ಚಳವಳಿ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಡಲಾಗುತ್ತಿದೆ’ಎಂದು ಹೇಳಿದರು.‘ರಾಜ್ಯದ ಸಂಸದ ಸದಸ್ಯರು, ಕೇಂದ್ರ ಸಚಿವರು ಕಾವೇರಿ ವಿಚಾರದಲ್ಲಿ ಇದುವರೆಗೂ ತುಟಿ ಬಿಚ್ಚಿಲ್ಲ. ಇದು ಅತ್ಯಂತ ಖಂಡನೀಯ. ಮುಂದೆಯೂ ಕಾವೇರಿ ನೀರಿನ ವಿಚಾರದಲ್ಲಿ ಮಾತನಾಡದಿದ್ದರೆ ನೀವು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು’ ಎಂದು ಆಗ್ರಹಿಸಿದರು.
‘ಮುಖಂಡರು ಮಾತನಾಡಿ ಕರ್ನಾಟಕ ಸರ್ಕಾರ ನಮ್ಮನ್ನು ಕಡ್ಲೆಪುರಿ ತಿನ್ನುವ ಸ್ಥಿತಿ ನಿರ್ಮಾಣ ಮಾಡಿ ಎಂದು ಆರೋಪಿಸಿ ಕಡ್ಲೆಪುರಿ, ಕಡಲೆಕಾಯಿ, ಹಾಗೂ ಟೀ ಕಾಯಿಸಿ ಕುಡಿಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ನಿಲ್ಲಿಸುವ ತನಕ ನಿರಂತರ ಹೋರಾಟ ಮಾಡಲಾಗುತ್ತಿದೆ ಎಂದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹೊನ್ನೂರುಪ್ರಕಾಶ್, ಬಸವಣ್ಣ, ಚಿನ್ನಸ್ವಾಮಿಗೌಂಡರ್, ಉಡಿಗಾಲ ಕುಮಾರಸ್ವಾಮಿ, ತಮಿಳು ಸಂಘದ ಜಗದೀಶ್, ಪಣ್ಯದಹುಂಡಿ ರಾಜು, ಮಹೇಶ್‌ಗೌಡ, ಗು.ಪುರುಷೋತ್ತಮ್, ಸಿ.ಕೆ.ಮಂಜುನಾಥ್, ಸಿ.ಎಂ.ಕೃಷ್ಣಮೂರ್ತಿ, ನಿಜಧ್ವನಿಗೋವಿಂದರಾಜು, ರಾಮಸಮುದ್ರ ಸುರೇಶ್, ಚಾ.ರಾ.ಕುಮಾರ್, ಚಾ.ಹ.ರಾಮು, ರವಿಚಂದ್ರಪ್ರಸಾದ್, ಚಾ.ಸಿ.ಸಿದ್ದರಾಜು, ಪ್ರಶಾಂತ್, ತಾಂಡವಮೂರ್ತಿ, ವೀರಭದ್ರ, ರಾಚಪ್ಪ, ಲಿಂಗರಾಜು ಭಾಗವಹಿಸಿದ್ದರು. ಬೆತ್ತಲೆ ಚಳವಳಿ ಎಚ್ಚರಿಕೆ
ಕಾವೇರಿ ನೀರಿನ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಒಬ್ಬ ಶಾಸಕನೂ ಕಾವೇರಿ ವಿಚಾರದಲ್ಲಿ ಮಾತನಾಡಲಿಲ್ಲ. ಕೆಳವೇ ತಿಂಗಳಲ್ಲಿ ರಾಜ್ಯ ಸರ್ಕಾರವನ್ನೆ ಗಿರಿವಿಗೆ ಇಡುತ್ತಾರೆ. ಬರಗಾಲ ಬರುತ್ತದೆ, ರಾಜ್ಯದ ಜನತೆ ಗುಳೆ ಹೋಗಬೇಕಾಗುತ್ತದೆ. ಇನ್ನೂ ಮುಂದಿನ ದಿನಗಳಲ್ಲಿ ಕಡ್ಲೆಪುರಿ ಸಿಗುವುದು ಅನುಮಾನವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ವರ್ತನೆ ಖಂಡನೀಯವಾದದ್ದು, ಮುಂದೆ ಬೆತ್ತಲೆ ಚಳವಳಿ ಮಾಡಲಾಗುತ್ತದೆ ಎಂದು ಶ್ರೀನಿವಾಸಗೌಡ ಎಚ್ಚರಿಸಿದರು.ನೀರು ನಿಲ್ಲಿಸದಿದ್ದರೆ ರಾಜ್ಯದ ಜನರಿಂದ ಪಾಠ
ಈಗಾಗಲೇ ಜಲಾಶಯಗಳು ಬತ್ತಿ ಹೋಗಿವೆ. ಕರ್ನಾಟಕದಲ್ಲಿ ನೀರು ಇಲ್ಲ. ತಮಿಳುನಾಡಿ ಜೊತೆ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುಲು ನಮ್ಮ ನೀರನ್ನು ತಮಿಳುನಾಡಿಗೆ ಬಿಡುತ್ತೀದ್ದೀರಿ ಇದರಿಂದ ರಾಜ್ಯದ ಜನತೆ, ರೈತರಿಗೆ ತೊಂದರೆಯಾಗುತ್ತದೆ. ತಕ್ಷಣವೇ ನೀರು ನಿಲ್ಲಿಸದಿದ್ದರೆ ರಾಜ್ಯದ ಜನತೆ ಪಾಠ ಕಲಿಸಲಿದ್ದಾರೆ ಎಂದು ಶ್ರೀನಿವಾಸಗೌಡ ಹೇಳಿದರು. ನಗರದಲ್ಲಿ ೧೦೦ನೇ ದಿನವಾದ ಗುರುವಾರ ಕಡ್ಲೆಪುರಿ, ಕಡಲೆಕಾಯಿ ತಿಂದು, ಟೀ ಕಾಯಿಸಿ ಕುಡಿದು ಕರ್ನಾಟಕ ಸೇನಾ ಪಡೆ ವಿನೂತನ ಪ್ರತಿಭಟನೆ ನಡೆಸಿತು.