ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ಕನ್ನಡಪ್ರಭ ವಾರ್ತೆ ಚಾಮರಾಜನಗರ ರಾಜ್ಯ ಸರ್ಕಾರವು ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದಲ್ಲಿ ಕಪ್ಪುಬಾವುಟ ಹಿಡಿದು ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀಚಾಮರಾಜೇಶ್ವರ ಉದ್ಯಾನದ ಮುಂಭಾಗದಲ್ಲಿ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಅಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಕಪ್ಪು ಬಾವುಟ ಹಿಡಿದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕಾವೇರಿ ನೀರು ಹಂಚಿಕೆಯಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ, ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕಪ್ಪುಬಾವುಟ ಹಿಡಿದು ಪ್ರತಿಭಟನೆ ಮಾಡಲಾಗಿದೆ. ರಾಜ್ಯ ಸರ್ಕಾರ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಶಾ.ಮುರಳಿ, ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್ ಗೋಪಾಲ್, ಸೋಮವಾರಪೇಟೆ ಮಂಜು, ವರದನಾಯಕ, ವೀರಭದ್ರ, ರವಿಚಂದ್ರ ಪ್ರಸಾದ್ ಕಹಳೆ, ಚಾ.ಹ.ರಾಮು, ಲಿಂಗರಾಜು, ಗು.ಪುರುಷೋತ್ತಮ್, ತಾಂಡವಮೂರ್ತಿ ಭಾಗವಹಿಸಿದ್ದರು. ರಾಜ್ಯ ಸರ್ಕಾರವು ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಚಾಮರಾಜನಗರದಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಲಾಯಿತು.