ಸಾವಯವ ಬೆಳೆ ಬೆಳೆಯುವಲ್ಲಿ ರಾಜ್ಯ ಮೊದಲು: ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : Mar 03, 2024, 01:34 AM IST
ಚಿತ್ರ 2ಬಿಡಿಆರ್50ಎ | Kannada Prabha

ಸಾರಾಂಶ

ರೈತರ ಅಭಿವೃದ್ಧಿಗಾಗಿ ಕೇಂದ್ರ, ರಾಜ್ಯ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಬೀದರ್ ನಗರದಲ್ಲಿ ಶನಿವಾರ ಜಿಲ್ಲಾಮಟ್ಟದ ಸಾವಯವ ಮತ್ತು ಸಿರಿಧಾನ್ಯ ನಡಿಗೆಯಲ್ಲಿ ಕೇಂದ್ರ ಹಾಗೂ ರಾಜ್ಯದ ಸಚಿವರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಬೀದರ್‌

ರೈತ ನಮ್ಮೆಲ್ಲರಿಗೂ ಆಹಾರ ನೀಡುವ ಅನ್ನದಾತನಾಗಿದ್ದು, ಅವರ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿವೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ನಗರದಲ್ಲಿ ಶನಿವಾರ ಜಿಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಾವಯವ ಮತ್ತು ಸಿರಿಧಾನ್ಯ ನಡಿಗೆ-2024 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಉದ್ದೇಶ ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿದೆ. ಬೀದರ್‌ ಜಿಲ್ಲೆಯಲ್ಲಿ ಶೇ.70ರಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಸಾವಯವ ಕೃಷಿಯ ಆಹಾರಗಳಾದ ಸಜ್ಜೆ, ಬರಗು, ರಾಗಿ, ನವಣೆ, ಹಾರಕ, ಸಾಮೆಗಳ ಸೇವನೆಯಿಂದ ಬಿಪಿ, ಶುಗರ್‌, ಡಯಾಬಿಟಿಸ್‌ನಂತಹ ಇತರೆ ಕಾಯಿಲೆಗಳು ಬರುವುದಿಲ್ಲ ಎಂದರು.

ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಸಾವಯವ ಬೆಳೆಗಳನ್ನು ಹೆಚ್ಚು ಬೆಳೆಯುತ್ತಿರುವ ಮೊದಲ ರಾಜ್ಯವಾಗಿದೆ ಹಾಗಾಗಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ವಾಣಿಜ್ಯ ಮೇಳ ಆಯೋಜಿಸಲಾಗಿತ್ತು. ಕೃಷಿ ಲಾಭದಾಯಕವಾಗಲು ಅದಕ್ಕೆ ಸೂಕ್ತ ಬೆಲೆ ಸಿಗುವದರ ಜೊತೆಗೆ ವ್ಯವಸ್ಥಿತ ಮಾರುಕಟ್ಟೆಯು ಬೇಕು ಮುಂದೊಂದು ದಿನ ಕೃಷಿ ಕಡೆ ನೋಡುವ ಕಾಲ ಬರುತ್ತದೆ ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ನಾವು ಚಿಕ್ಕವರಿದ್ದಾಗ ಸಿರಿಧಾನ್ಯ ಎಲ್ಲರ ಮನೆಯಲ್ಲಿ ಉಪಯೋಗಿಸುತ್ತಿದ್ದೆವು. ಅನ್ನವನ್ನು ಅಂದು ಶ್ರೀಮಂತರು ಮಾತ್ರ ಊಟ ಮಾಡುತ್ತಿದ್ದರು. 2022-23ನೇ ಸಾಲಿನಲ್ಲಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಯುಎನ್‌ಒದಲ್ಲಿ ಘೋಷಣೆ ಮಾಡಿಸಿದರು. ರೈತರು ದೇಶದ 140 ಕೋಟಿ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡುವುದರ ಜೊತೆಗೆ ಶೇ.30 ಪ್ರತಿಶತ ಆಹಾರವನ್ನು ವಿದೇಶಕ್ಕೆ ರಪ್ತು ಮಾಡುತ್ತಾರೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೆಶಕರಾದ ರಿತೇಂದ್ರನಾಥ ಸೂಗೂರ ಪ್ರಾಸ್ತಾವಿಕ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಒಳ್ಳೆಯದು. ಇಂದಿನ ವೈಜ್ಞಾನಿಕ ಯುಗದಲ್ಲಿ ಯುವ ಪೀಳಿಗೆ ದೇಶಿಯ ಆಹಾರವಾದ ಸಿರಿಧಾನ್ಯ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು.

ನಗರದ ಡಾ. ಅಂಬೇಡ್ಕರ್ ವೃತ್ತದಲ್ಲಿ ಸಚಿವರು ಮಡಿಕೆಗಳಿಗೆ ಸಿರಿಧಾನ್ಯ ಸುರಿಯುವ ಮೂಲಕ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಿರಿಧಾನ್ಯ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು. ಸಿರಿಧಾನ್ಯ ನಡಿಗೆ ನಗರದ ಅಂಬೇಡ್ಕರ್ ವೃತ್ತದಿಂದ ಶಿವನಗರ ಕ್ರಾಸ್‌ವರೆಗೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ನಗರ ಸಭೆ ಅಧ್ಯಕ್ಷರಾದ ಮೊಹ್ಮದ ಗೌಸ್, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಸಿದ್ರಾಮಯ್ಯ ಸ್ವಾಮಿ, ರಾಜ್ಯ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ವಿಶ್ವನಾಥ ಪಾಟೀಲ, ಜಿಪಂ ಸಿಇಒ ಡಾ. ಗಿರೀಶ್ ಬದೋಲೆ, ಎಸ್ಪಿ ಚನ್ನಬಸವಣ್ಣ ಎಸ್.ಎಲ್., ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ., ತೋಟಗಾರಿಕೆ ಮಹಾವಿದ್ಯಾಲಯ ಡೀನ್‌ ಡಾ.ಎಸ್.ವಿ.ಪಾಟೀಲ್, ಕೃಷಿ ವಿಜ್ಞಾನ ಕೇಂದ್ರದ ಡಾ.ಸುನಿಲ್ ಕುಮಾರ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಕುಮಾರ ಗಂಧಗೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರ, ಸುರೇಖಾ, ವಿದ್ಯಾರ್ಥಿಗಳು, ರೈತರು, ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ