ಸ್ಪರ್ಧಾರ್ಥಿಗಳು ಕಲಿಕೆಯನ್ನು ಮೈಗೂಡಿಸಿಕೊಳ್ಳಬೇಕು

KannadaprabhaNewsNetwork |  
Published : Dec 20, 2025, 01:00 AM IST
37 | Kannada Prabha

ಸಾರಾಂಶ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹುದ್ದೆ ಪಡೆದಾಗ ಮಾತ್ರ ಅದು ಸಮಾರೋಪ ಆಗುವುದು.

ಕನ್ನಡಪ್ರಭ ವಾರ್ತೆ ಮೈಸೂರು ಸ್ಪರ್ಧಾರ್ಥಿಗಳು ಕಲಿಕಾಶ್ರದ್ಧೆಯನ್ನು ಮೈಗೂಡಿಸಿಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಹೀಗೆ ಕಲಿಕಾ ತರಬೇತಿಯು ಕೂಡ ನಿರಂತರವಾಗಿರಬೇಕು ಎಂದು ಮೈಸೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ನಿತೇಶ್‌ ಪಾಟೀಲ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕಿಂಗ್‌ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಕ್ತಭಂಡಾರ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹುದ್ದೆ ಪಡೆದಾಗ ಮಾತ್ರ ಅದು ಸಮಾರೋಪ ಆಗುವುದು. 50 ದಿನದ ಈ ತರಬೇತಿ ಶಿಬಿರ ನಿಮಗೆ ತುಂಬಾ ಉಪಯುಕ್ತವಾಗುತ್ತದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಿಗುವ ಎಲ್ಲಾ ಅವಕಾಶ ಬಳಸಿಕೊಂಡು ಪರೀಕ್ಷೆಗೆ ಸಿದ್ಧರಾಗಿ ಎಂದು ಹೇಳಿದರು.ನೇಮಕಾತಿ ಪ್ರಾರಂಭವಾದಾಗ ಲಕ್ಷ ಲಕ್ಷ ಜನ ನೋಂದಾಣಿ ಆಗುತ್ತಾರೆ. ಆದರೆ ಆಯ್ಕೆ ಆಗುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕೆಲವರು ಪರೀಕ್ಷೆ ಭಯದಿಂದಲೇ ದೂರ ಉಳಿದರೆ. ಇನ್ನಷ್ಟು ಜನ ಕೇವಲ ನೋಂದಣಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಹೀಗಾಗಿ ತುಂಬಾ ಗಂಭೀರವಾಗಿ ಕುಳಿತು ಓದಿದವರಿಗೆ ಮಾತ್ರ ಸರ್ಕಾರಿ ಕೆಲಸ ಸಿಗುವುದು ಎಂದರು. ಯುಪಿಎಸ್‌, ಕೆ.ಪಿ.ಎಸ್‌.ಸಿ ನಡೆಸುವ ನೇಮಕಾತಿಯ ಎಲ್ಲಾ ಪರೀಕ್ಷೆ ಎದುರಿಸಿ. ಯಾವುದೂ ದೊಡ್ಡದು, ಚಿಕ್ಕದು ಎಂದು ವಿಂಗಡಿಸಿಕೊಳ್ಳಬೇಡಿ, ಪಿಡಿಒ ಪರೀಕ್ಷೆ ಸಹ ಬರೆಯಿರಿ. ಎಷ್ಟು ಪರೀಕ್ಷೆ ಬರೆಯುತ್ತೀರಿ ಅಷ್ಟು ಚುರುಕಾಗುತ್ತೀರಿ. ನಿಮ್ಮ ಗುರಿ ತಲುಪಲು ಕೂಡ ಇದು ಸಹಕಾರಿಯಾಗಲಿದೆ. ನಾನು ಯು.ಪಿ.ಎಸ್‌.ಸಿ ಓದುವಾಗ ಸಣ್ಣಸಣ್ಣ ಪರೀಕ್ಷೆಗಳನ್ನು ಬರೆದಿದ್ದೆ ಎಂದು ಅವರು ವಿವರಿಸಿದರು.ಬ್ಯಾಂಕಿಂಗ್‌ ಪರೀಕ್ಷೆಗಳನ್ನು ಬರೆಯುವಾಗ ಮಾಕ್‌ ಪರೀಕ್ಷೆಗಳನ್ನು ಹೆಚ್ಚೆಚ್ಚು ತೆಗೆದುಕೊಳ್ಳಿ. ಅದು ನಿಮಗೆ ಸಮಯ ಹಾಗೂ ನಿಮ್ಮ ತಪ್ಪುಗಳ ಅರಿವನ್ನು ಸರಿಪಡಿಸುತ್ತ ಹೋಗುತ್ತದೆ. ಓದುವ ಪ್ರತಿಯೊಂದನ್ನು ನೋಡಿಕೊಳ್ಳಬೇಕು. ಜೊತೆಗೆ ಮುಖ್ಯವಾದುದನ್ನು ಗುರುತು ಮಾಡಿಕೊಂಡು ಓದಬೇಕು. ಪರೀಕ್ಷೆ ಹತ್ತಿರ ಬಂದಂತೆ ಅವುಗಳೆಲ್ಲಾ ಪುನರಾವರ್ತಿಸಬೇಕು. ಮಾನಸಿಕ ಸಿದ್ಧತೆ, ಕಠಿಣ ಪರಿಶ್ರಮ ಹಾಗೂ ತಿಳಿದುಕೊಂಡದನ್ನು ಅಭಿವ್ಯಕ್ತಿಸುವ ರೀತಿ ನಿಮ್ಮನ್ನು ಯಶಸ್ಸಿನ ಶಿಖರದತ್ತ ಕೊಂಡೊಯ್ಯುತ್ತವೆ ಎಂದು ಅವರು ಸಲಹೆ ನೀಡಿದರು.ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು ಮಾತನಾಡಿ, ಕಲಿಕೆ ಎಂಬುದು ದಿನ ನಿತ್ಯದ ಪಯಣ. ಅದು ಒಂದು ದಿನದಲ್ಲಿ ಮುಗಿಯುವುದಿಲ್ಲ. ಹೀಗಾಗಿ ನಿಮ್ಮ ಕಲಿಕೆ ನಿರಂತರವಾಗಿರಲಿ ಎಂದರು.ನೀವು ನಮ್ಮ ವಿವಿಗೆ ಬರುವಾಗ ಹೇಗೆ ಇದ್ದಿರಿ, ಈವಾಗ ಇಲ್ಲಿ ಏನನ್ನು ಕಲಿತಿದ್ದಿರಿ ಎಂಬುದನ್ನು ನೀವೇ ಮನದಟ್ಟು ಮಾಡಿಕೊಳ್ಳಬೇಕು. ನಿಮಗೆ ಗುರಿ ಇರಬೇಕು. ಗುರಿ ಇಟ್ಟುಕೊಂಡು ಮುಂದೆ ಸಾಗಿ ಎಂದು ಹೇಳಿದರು.ಸಮಾರಂಭದಲ್ಲಿ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಬಿ. ಸಿದ್ದೇಶ್‌ ಹೊನ್ನೂರ್‌, ಗಣೇಶ್‌ಕೆ.ಜಿ. ಕೊಪ್ಪಲ್, ಡಾ.ಈ. ಶಿವಪ್ರಸಾದ್‌, ಡಾ. ನವೀನ್‌ ಕುಮಾರ್‌, ಡಾ. ಬೀರಪ್ಪ, ಚಲನಚಿತ್ರ ನಿರ್ದೇಶಕ ಬಿ. ಸಿದ್ದೇಗೌಡ, ರಂಗಕಲಾವಿದ ಎಸ್.ಡಿ. ದಯಾನಂದ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಎಂ.ಚಂದ್ರಪ್ಪರಿಂದ ಸರ್ಕಾರಿ ಗುಡ್ಡ ಕಬಳಿಕೆ
ಇಂದು ಸ್ತುತಿ ಶಂಕರ- ಸ್ತೋತ್ರ ಮಹಾ ಸಮರ್ಪಣೆ