ಮಕ್ಕಳ ರಕ್ಷಣೆಗೆ ಪ್ರಬಲ ಆದ್ಯತೆ ಅಗತ್ಯ

KannadaprabhaNewsNetwork |  
Published : Jan 31, 2024, 02:18 AM IST
1 | Kannada Prabha

ಸಾರಾಂಶ

ಮಕ್ಕಳ ಏಳಿಗೆ ಕುರಿತು ನಾವು ಜವಾಬ್ದಾರಿಯುತವಾಗಿ ಮಕ್ಕಳ ರಕ್ಷಣೆ ಮತ್ತು ನಿರ್ವಹಣೆ ಮಾಡಬೇಕು. ಅರಿವೇ ಗುರು ಎನ್ನುತ್ತಾ ಮಕ್ಕಳಿಗೆ ಬಾಲ್ಯದಲ್ಲಿಯೇ ನೈತಿಕತೆ, ಆಚಾರ ವಿಚಾರಗಳು, ಸಂಪ್ರದಾಯದ ಬಗ್ಗೆ ತಿಳಿಸಿದರೆ ದೇಶವನ್ನು ಮುನ್ನಡೆಸಲು ಸಹಕಾರಿಯಾಗುತ್ತದೆ. ಮಕ್ಕಳನ್ನು ಬೆಳೆಸುವಲ್ಲಿ ನಮ್ಮ ನಮ್ಮ ಜವಾಬ್ದಾರಿಗಳನ್ನೂ ಸಹ ನಿರ್ವಹಿಸಬೇಕು

- ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ

- ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು ಕುರಿತು ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ

----

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ದೇಶವನ್ನು, ರಾಜ್ಯವನ್ನು ರಕ್ಷಣೆ ಮಾಡಲು ಸಮಾಜವನ್ನು ಸದೃಢವಾಗಿ ಬೇಳೆಸಬೇಕಾದರೆ ಮಕ್ಕಳನ್ನು ರಕ್ಷಣೆ ಮಾಡಬೇಕು. ಮಕ್ಕಳ ರಕ್ಷಣೆಯನ್ನು ಮಾಡಿದಾಗ ನಾವು ಮುಂದಿನ ಭವಿಷ್ಯವನ್ನು ವಿಚಾರ ಮಾಡಲು ಸಾಧ್ಯ. ಹೀಗಾಗಿ, ಮಕ್ಕಳ ರಕ್ಷಣೆಗೆ ಪ್ರಬಲ ಪ್ರಥಮ ಆದ್ಯತೆಯನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ಕಾವೇರಿ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ನ್ಯೂಟ್ರಿಷನ್ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಮಂಗಳವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು ಕುರಿತು ಒಂದು ದಿನದ ತರಬೇತಿ ಹಾಗೂ ಅರಿವು ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಏಳಿಗೆ ಕುರಿತು ನಾವು ಜವಾಬ್ದಾರಿಯುತವಾಗಿ ಮಕ್ಕಳ ರಕ್ಷಣೆ ಮತ್ತು ನಿರ್ವಹಣೆ ಮಾಡಬೇಕು. ಅರಿವೇ ಗುರು ಎನ್ನುತ್ತಾ ಮಕ್ಕಳಿಗೆ ಬಾಲ್ಯದಲ್ಲಿಯೇ ನೈತಿಕತೆ, ಆಚಾರ ವಿಚಾರಗಳು, ಸಂಪ್ರದಾಯದ ಬಗ್ಗೆ ತಿಳಿಸಿದರೆ ದೇಶವನ್ನು ಮುನ್ನಡೆಸಲು ಸಹಕಾರಿಯಾಗುತ್ತದೆ. ಮಕ್ಕಳನ್ನು ಬೆಳೆಸುವಲ್ಲಿ ನಮ್ಮ ನಮ್ಮ ಜವಾಬ್ದಾರಿಗಳನ್ನೂ ಸಹ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಇನ್ನೂ ಬಾಲ್ಯ ವಿವಾಹ ನಡೆಯುತ್ತಿದೆ

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಮಕ್ಕಳ ಹಕ್ಕುಗಳು, ಬಾಲ್ಯವಿವಾಹ, ಮಕ್ಕಳ ಶಿಕ್ಷಣದ ಕುರಿತು ಪೋಷಕರಿಗೆ ಹಾಗೂ ಅಧಿಕಾರಿಗಳಿಗೆ ಅರಿವು ಮೂಡಿಸಬೇಕು. ಮೈಸೂರು ಇತ್ತೀಚಿಗೆ ಅತಿ ವೇಗದಲ್ಲಿ ನಗರೀಕರಣಕ್ಕೆ ಒಳಗಾಗುತ್ತಿದೆ. ಆದರೆ ಇನ್ನೂ ಗ್ರಾಮೀಣ ಭಾಗಗಳಲ್ಲಿ ಹೆಣ್ಣು ಮಕ್ಕಳ ಬಾಲ್ಯ ವಿವಾಹ ನಡೆಯುತ್ತಿದೆ ಎಂದರು.

ಪ್ರತಿಯೊಬ್ಬರಲ್ಲಿಯೂ ಮಾನವೀಯತೆ, ಸಂವೇದನಾ ಶೀಲತೆ ಇರಬೇಕು. ಹೆಣ್ಣು ಮಕ್ಕಳು ಸಮಸ್ಯೆಗಳನ್ನು ಹೊತ್ತು ತಂದಾಗ ಅದನ್ನು ಕಡೆಗಣಿಸಬಾರದು. ಸಮಸ್ಯೆ ಚಿಕ್ಕಾದಾಗಿದ್ದಗಲೇ ಅದನ್ನು ಬಗೆಹರಿಸಿಕೊಳ್ಳಬೇಕು. ಎಲ್ಲಾ ವಿಭಾಗದ ಅಧಿಕಾರಿಗಳು ಸಹ ಇದರ ಬಗ್ಗೆ ಗಮನ ಹರಿಸಬೇಕು. ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಮಕ್ಕಳ ಬಗೆಗೆ ಯಾವುದೇ ರೀತಿಯ ತೊಂದರೆಗಳು ಕಂಡು ಬಂದಲ್ಲಿ ಅದನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ಮಾತನಾಡಿ, ಇಂಡಿಯನ್ ಮೆಜಾರಿಟಿ ಕಾಯಿದೆ ಮತ್ತು ಪೋಕ್ಸೋ ಕಾಯಿದೆ ಪ್ರಕಾರ 18 ವರ್ಷದೊಳಗಿನ ಎಲ್ಲರೂ ಮಕ್ಕಳೇ ಎಂದು ಪರಿಗಣಿಸಲಾಗುತ್ತದೆ. ಮಕ್ಕಳಿಗೆ ಪೌಷ್ಟಿಕ ಆಹಾರವನ್ನೂ ಪಡೆಯುವ ಹಕ್ಕು, 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾದುದ್ದು, ಇಂದಿನ ಮಕ್ಕಳೇ ಮುಂದಿನ ಭವಿಷ್ಯದ ಆಸ್ತಿ ಎಂದು ತಿಳಿಸಿದರು.

ಈ ವೇಳೆ ಛಾಯಾದೇವಿ ಶಾಲಾ ಮಕ್ಕಳಿಂದ ಬಾಲ್ಯ ವಿವಾಹದ ನಿಷೇಧ ಕುರಿತಂತೆ ಕಿರು ನಾಟಕವನ್ನು ಪ್ರದರ್ಶಿಸಲಾಯಿತು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಎಸ್. ಮಂಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ಸುರೇಶ್, ಜಿಲ್ಲಾ ಮಕ್ಕಳಾ ರಕ್ಷಣಾಧಿಕಾರಿ ಎನ್.ಟಿ. ಯೋಗೇಶ್, ರಾಜ್ಯ ಮುಕ್ತ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಸಿ. ಅನಿತ, ಪೋಲಿಸ್ ತರಬೇತುದಾರರಾದ ಸಿ.ಜೆ. ರೋಹಿತ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಾಂಡು ಮೊದಲಾದವರು ಇದ್ದರು.

----

ಕೋಟ್...

ಮಕ್ಕಳ ರಕ್ಷಣೆಯಲ್ಲಿ ಮಕ್ಕಳ ಪಾಲನಾ ಪೋಷಣೆ ಮಾಡಬೇಕಾದ ಮಕ್ಕಳ ಹಕ್ಕುಗಳು ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಗಳ ಬಗ್ಗೆ ಅರಿವು ಮೂಡಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಗಂಡು ಹೆಣ್ಣು ಎಂಬ ತಾರತಮ್ಯ ಮಾಡಬಾರದು.

- ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು