ಕನ್ನಡಪ್ರಭ ವಾರ್ತೆ ಕಲಬುರಗಿ
ಸಿಯುಕೆಯ ಆಂತರಿಕ ದೂರುಗಳ ಸಮಿತಿ (ಐಸಿಸಿ) ಆಯೋಜಿದ್ದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಜಾಗೃತಿ ಮೂಡಿಸುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2013 ಶಿಕ್ಷಣ, ವಿಚಾರಣೆ, ಕೆಲಸದ ಸ್ಥಳವನ್ನು ಸುರಕ್ಷಿತವಾಗಿಸುವ ಮತ್ತು ಮಹಿಳಾ ಸ್ನೇಹಿಯಾಗಿ ಮಾಡುವಲ್ಲಿ ಉದ್ಯೋಗದಾತರ ಜವಾಬ್ದಾರಿ ಕುರಿತು ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಈ ಕಾಯ್ದೆ ಅಡಿಯಲ್ಲಿ ಉದ್ಯೋಗದಾತರು ಲೈಂಗಿಕ ಕಿರುಕುಳ ತಡೆಯಲು ಅಗತ್ಯ ಮಾಹಿತಿಯನ್ನು ಸಂಸ್ಥೆಯ ಪ್ರಮುಖ ಕೆಲಸದ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ಇದರಿಂದ ಲೈಂಗಿಕ ಕಿರುಕುಳ ಕುರಿತು ಉದ್ಯೋಗಿಗಳಲ್ಲಿ ಜಾಗೃತಿ ಮೂಡಿಸುವ ಹಾಗೂ ಉದ್ಯೋಗಿಗಳಿಗೆ ಸುರಕ್ಷಿತ ಕೆಲಸದ ಸ್ಥಳವನ್ನು ಒದಗಿಸುವುದು ಜವಾಬ್ದಾರಿ ಉದ್ಯೋಗದಾತರದ್ದಾಗಿದೆ ಎಂದರು.ಲೈಂಗಿಕ ಕಿರುಕುಳ ಏನು ಎಂದು ಜನರಿಗೆ ಶಿಕ್ಷಣ ನೀಡಿದರೆ ಅವರು ಹಾಗೆ ಮಾಡುವುದನ್ನು ತಡೆಯುತ್ತಾರೆ. ಈ ಕಾಯ್ದೆಯ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಐಸಿಸಿ ರಚನೆ. ಅನೇಕ ಬಾರಿ ಮಹಿಳೆಯರು ತಮ್ಮ ನೋವನ್ನು ಸೂಕ್ತ ಅಧಿಕಾರಿಗಳಿಗೆ ತಿಳಿಸಲು ಮುಂದೆ ಬರುವುದಿಲ್ಲ ಮತ್ತು ಪೊಲೀಸ್ ಠಾಣೆಗೆ ಹೋಗಲು ಹಿಂಜರಿಯುತ್ತಾರೆ. ಸಹೋದ್ಯೋಗಿಗಳು ಐಐಸಿ ಸಮಿತಿಯ ಸದಸ್ಯರಾಗಿರುವುದರಿಂದ ಮಹಿಳೆಯರು ತಮ್ಮ ನೋವುಗಳನ್ನು ಹಂಚಿಕೊಳ್ಳಲು ಮತ್ತು ಅಪರಾಧಿಯನ್ನು ಬಹಿರಂಗಪಡಿಸಲು ನಿರ್ಭೀತ ವೇದಿಕೆಯನ್ನು ಒದಗಿಸುತ್ತದೆ ಎಂದರು.
ಸಿಯುಕೆಯ ಕುಲಪತಿ, ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಐಸಿಸಿ ಕೇವಲ ಉದ್ಯೋಗಿಗಳಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ನಮ್ಮ ವಿಶ್ವವಿದ್ಯಾಲಯವನ್ನು ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಅತ್ಯಂತ ಸುರಕ್ಷಿತ ಸ್ಥಳವನ್ನಾಗಿ ಮಾಡಲು ನಾವು ಈ ಕಾಯ್ದೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಹಿಳೆಯರಿಗೆ ಅಧಿಕಾರ ನೀಡುವ ಕಾನೂನುಗಳ ಬಗ್ಗೆ ನೀವೆಲ್ಲರೂ ತಿಳಿದಿರಬೇಕು ಮತ್ತು ಅವುಗಳನ್ನು ಬಳಸಲು ಭಯಪಡಬೇಡಿ ಎಂದರು.
ಪ್ರಭಾರಿ ರಿಜಿಸ್ಟ್ರಾರ್ ಚನ್ನವೀರ ಆರ್ ಎಂ, ಸಿಯುಕೆ ಐಸಿಸಿ ಸದಸ್ಯ ಡಾ.ಬಸವರಾಜ ಎಂ.ಕುಬಕಡ್ಡಿ, ಡಾ.ರೇಣುಕಾ ಗುಬ್ಬೇವಾಡ, ಡಾ. ರೇಷ್ಮಾ ನದಾಫ್, ಸಮರ್ಥಿನಿ ಶೇರಿಕಾರ, ಮಹಿಳಾ ಎನ್‍ಜಿಒ ಪ್ರತಿನಿಧಿ ಡಾ.ಪಲ್ಲವಿ ಪಾಟೀಲ್ ಉಪಸ್ಥಿತರಿದ್ದರು. ಡಾ.ಜಯದೇವಿ ಜಂಗಮಶೆಟ್ಟಿ ಮತ್ತು ಡಾ.ಸ್ವಪ್ನಿಲ್ ಚಾಪೇಕರ್ ಪ್ರಾರ್ಥಿಸಿದರು.