ಕನ್ನಡಪ್ರಭ ವಾರ್ತೆ ಮೈಸೂರುಜಾತಿ ಸಂಕೋಲೆಯಿಂದ ಸಮಾಜವನ್ನು ಬಿಡುಗಡೆಗೊಳಿಸುವ ಕೆಲಸವನ್ನು ಸಮುದಾಯದ ವಿದ್ಯಾವಂತ ನಾಗರಿಕರು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಸಂಘ, ಮೈಸೂರು ಜಿಲ್ಲಾ ಮತ್ತು ನಗರ ಪೌರ ಕಾರ್ಮಿಕರ ಸಂಘಟನೆಗಳ ಒಕ್ಕೂಟವು ನಗರದ ಎಂಜಿನಿಯರ್ ಗಳ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ನೂತನ ಸದಸ್ಯ ಸಿ. ಶಂಕರ್ ಅಂಕನಶೆಟ್ಟಿಪುರ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪೌರ ಕಾರ್ಮಿಕ ಕೆಲಸ ಯಾವುದೇ ಕೀಳು ಅಲ್ಲ. ಅದನ್ನು ವಂಶ ಪರಂಪರ್ಯವಾಗಿ ಮಾಡಲು ಬಿಡಬೇಡಿ. ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ ಕೊಡಿಸಿ, ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕೆಲಸವನ್ನು ಪೋಷಕರು ಮಾಡಬೇಕು. ಹುಟ್ಟಿನಿಂದ ವ್ಯಕ್ತಿಯ ಅಳೆಯುವುದು ಕೀಳು ಮನಸ್ಥಿತಿ. ಅದರ ಜೊತೆಗೆ ಜಾತಿಯ ಹಣೆಪಟ್ಟಿ ಕಟ್ಟಿ ಅದರ ಸಂಕೋಲೆಯಲ್ಲಿಯೇ ಸಾಯುವಂತೆ ಮಾಡುವುದು ನಮ್ಮ ದೇಶದಲ್ಲಿದೆ ಎಂದರು.ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿವರೆಗೆ ಅದರಲ್ಲಿ ಬಹಳಷ್ಟು ಬದಲಾವಣೆಗಳು ಆಗಿದ್ದರೂ, ಅದು ಸೀಮಿತ ಸ್ಥಳಗಳಲ್ಲಿ ಮಾತ್ರ. ಅನೇಕ ಕಾಯಕ ಸಮಾಜಗಳಿವೆ. ಆದರೂ ಸಮಾಜದಿಂದ ದುರವಾಗಿ ಇರುವುದು ಸಫಾಯಿ ಕರ್ಮಚಾರಿಗಳ ಮಾತ್ರ. ಅಂದಿನ ಅನುಭವ ಮಂಟಪದಲ್ಲಿ ಬಸವಣ್ಣನವರು ಎಲ್ಲರನ್ನೂ ಒಳಗೊಂಡ ಸಂಘಟನೆ ನಿರ್ಮಾಣ ಮಾಡಿದ್ದರು. ಇಂದಿನ ಪರಿಸ್ಥಿತಿ ಆಗಿಲ್ಲ. ನಮ್ಮ ಹಕ್ಕುಗಳಿಗಾಗಿ ನಾವೇ ಹೊರಡಬೇಕು ಎಂದು ಅವರು ಸೂಕ್ಷ್ಮವಾಗಿ ಹೇಳಿದರು.ಅಂತರ್ಜಾತಿ ಮಾಡುವೆಯದಲ್ಲಿ ಜಾತೀಯತೆ ನಾಶವಾಗುತ್ತದೆ. ಎಲ್ಲರಲ್ಲೂ ಒಂದೇ ಎನ್ನುವ ಮನೋಭಾವ ಬೆಳೆಯುತ್ತದೆ. ಇದು ಆಗಬೇಕಾದಲ್ಲಿ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಪೌರ ಕಾರ್ಮಿಕ ವೃತ್ತಿ ವಂಶ ಪಾರಂಪರ್ಯವಾಗಿ ಬಂದ ಕೆಲಸವಲ್ಲ ಎಂದರು.ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಶಿಕ್ಷಣ ಎಲ್ಲಾ ಮಕ್ಕಳಿಗೂ ಸಿಗಬೇಕಿರುವ ಕಾಲಘಟ್ಟದಲ್ಲಿದ್ದು, ಶಿಕ್ಷಣದಿಂದ ಪೌರ ಕಾರ್ಮಿಕರ ಸಾಮಾಜಿಕ ಬದಲಾವಣೆ ಸಾಧ್ಯ. ಸಮುದಾಯದ ಪರ ಹೊರಟ ಮಾಡುವವರು ಆಸೆ ಆಮಿಷಗಳಿಗೆ ಬಲಿಯಾಗದೆ ಎಲ್ಲರ ಏಳಿಗೆಗೆ ದುಡಿಯುವ ಕೆಲಸ ಮಾಡಬೇಕು. ಅಂಬೇಡ್ಕರ್ ಅವರ ಶಿಕ್ಷಣ ಸಿದ್ಧಾಂತ ಹೊಸ ಪೀಳಿಗೆಯನ್ನು ಹುಟ್ಟು ಹಾಕುತ್ತವೆ. ಇದಕ್ಕಾಗಿ ಸಂಘಟನೆ ಮತ್ತು ಹೊರಟ ಅತ್ಯಗತ್ಯ ಎಂದರು.ಎಲ್ಲರಲ್ಲಿಯೂ ಸಾಮಾಜಿಕ ಚಿಂತನೆ, ಕಳಕಳಿ ಬಹಳ ಮುಖ್ಯ. ನುಡಿದಂತೆ ನಡೆದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ. ಸರ್ವರ ಏಳಿಗೆಗೆ ಸದಾ ದುಡಿದ ಜನ ಸೇವಕ. ಒಳಮೀಸಲಾತಿ ಕೊಟ್ಟ ಕಾರಣದಿಂದ ಈ ಸಮುದಾಯ ಶೈಕ್ಷಣಿಕ, ಸಾಮಾಜಿಕ ಆರ್ಥಿಕವಾಗಿ ಬೆಳವಣಿಗೆ ಕಾಣಲು ಸಹಕಾರಿಯಾಯಿತು ಎಂದರು.ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ಮಾತನಾಡಿ, ಸರ್ಕಾರ ಆಯೋಗ ರಚಿಸುವ ಮೂಲಕ ಧ್ವನಿ ಇಲ್ಲದವರಿಗೆ ಧ್ವನಿ ನೀಡಿತು. ನ್ಯಾಯಾಂಗ ಬಲದ ಆಯೋಗ, ನೊಂದ ಪೌರಕರ್ಮಿಕರಿಗೆ ಬೆಂಬಲವಾಗಿ ನಿಂತಿತ್ತು. ಹಿಂದೆ ಅಧ್ಯಕ್ಷರು ಯಾರು ಎನ್ನುವುದೇ ಗೊತ್ತಿಲ್ಲದ ದಿನಗಳಲ್ಲಿ ನಾನು ಅಧ್ಯಕ್ಷನಾಗಿ ರಾಜ್ಯಾದ್ಯಂತ ಎರಡು ಬಾರಿ ಸಂಚರಿಸಿ ನೊಂದ ಪೌರಕಾರ್ಮಿಕರಿಗೆ ಬೆಂಬಲವಾಗಿ ನಿಂತಿದ್ದೆ ಎಂದು ಹೇಳಿದರು.ಸಿದ್ದರಾಮಯ್ಯ ಅವರು ನಮ್ಮ ಪೌರಕಾರ್ಮಿಕರ ಬಹುತೇಕ ಬೇಡಿಕೆ ಈಡೇರಿಸಿದ್ದಲ್ಲದೇ ಹುದ್ದೆ ಖಾಯಂಗೊಳಿಸಿ ಜೀವನದ ದಾರಿ ತೋರಿದ್ದಾಗಿ ಹೇಳಿದರು.ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ನೂತನ ಸದಸ್ಯ ಸಿ. ಶಂಕರ ಅಂಕನಶೆಟ್ಟಿಪುರ ಅವರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಸಫಾಯಿ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷ ಆರ್ಟಿಸ್ಟ್ ನಾಗರಾಜು, ದೇವರತ್ನ ಫೌಂಡೇಷನ್ ಅಧ್ಯಕ್ಷ ಶಿವಪ್ರಸಾದ್ ಮೊದಲಾದವರು ಇದ್ದರು.