ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಜುಲೈ 9ರಂದು ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ಚಳವಳಿಯಲ್ಲಿ ಭಾಗವಹಿಸಲಿದ್ದಾರೆ.

ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರು ಹಾಗೂ ರೈತ ಹೋರಾಟಗಾರರು ನಿವೃತ್ತ ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ಕುಶಲೊಪರಿ ವಿಚಾರಿಸಿ ಭೈರಮಂಗಲ ಭಾಗದಲ್ಲಿ ನಡೆಯುತ್ತಿರುವ ಬಿಡದಿ ಟೌನ್ ಶಿಪ್ ಹೋರಾಟದ ವಿಚಾರವಾಗಿ ಚರ್ಚೆ ನಡೆಸಿದರು.

ಸುಮಾರು ಒಂದೂವರೆ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಹೋರಾಟದ ವಿಚಾರವನ್ನು ರೈತರು ಗಮನಕ್ಕೆ ತಂದಾಗ ಸಂತೋಷ್ ಹೆಗ್ಡೆರವರು, ಈ ವಿಚಾರವನ್ನು ಪ್ರತಿನಿತ್ಯವೂ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ. ರಾಜಕಾರಣಿಗಳು ತಮ್ಮ ಪ್ರತಿಷ್ಠೆಯ ಕಣವಾಗಿ ಹೋರಾಟವನ್ನು ಬಳಸಿಕೊಳ್ಳುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.

ಸರ್ಕಾರ ಇಷ್ಟೊಂದು ರೈತರ ವಿರೋಧದ ನಡುವೆಯೂ ಬಲವಂತದ ಭೂಸ್ವಾಧೀನಕ್ಕೆ ಮುಂದಾಗಿರುವುದು ಅಮಾನವೀಯ ಹಾಗೂ ಅಸಂವಿಧಾನಿಕ ಪ್ರಕ್ರಿಯೆಯಾಗಿದೆ. ಬೈರಮಂಗಲ - ಕಂಚುಗಾರನಹಳ್ಳಿ ರೈತರ ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿ ಜುಲೈ 9ರಂದು ಖುದ್ದಾಗಿ ತಾವೇ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಸಂತೋಷ್ ಹೆಗ್ಡೆ ಘೋಷಿಸಿದರು.

ರೈತರ ನಿಯೋಗದಲ್ಲಿ ರೈತ ಹೋರಾಟಗಾರರಾದ ನಾಗರಾಜ್, ಆನಂದ್, ಕೃಷ್ಣಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕುಮಾರಸ್ವಾಮಿ, ರಾಜ್ಯ ರೈತ ಹಿತರಕ್ಷಣಾ ಸಂಘದ ರಾಜ್ಯಾಧ್ಯಕ್ಷ ನದೀಮ್ ಪಾಷಾ , ರಾಜ್ಯ ಸಲಹೆಗಾರ ಪ್ರಶಾಂತ್ , ವೆಂಕಟೇಶ್ ಹಾಗೂ ರೈತ ಮಹಿಳೆಯರು ಹಾಜರಿದ್ದರು.


26ಕೆಆರ್ ಎಂಎನ್ 8.ಜೆಪಿಜಿ

ರೈತರ ನಿಯೋಗ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ದೆ ಅವರನ್ನು ಭೇಟಿಯಾಗಿರುವುದು.