ದ್ವಿಭಾಷಾ ನೀತಿ ತುಳು ಕಲಿಕೆಗೆ ಅಡ್ಡಿಯಾಗದು: ತಾರಾನಾಥ ಗಟ್ಟಿ ಕಾಪಿಕಾಡ್‌

KannadaprabhaNewsNetwork |  
Published : Jan 18, 2026, 03:00 AM IST
ತಾರಾನಾಥ ಗಟ್ಟಿ ಕಾಪಿಕಾಡ್‌ ಮಾತನಾಡುತ್ತಿರುವುದು  | Kannada Prabha

ಸಾರಾಂಶ

ಉರ್ವಸ್ಟೋರ್ ತುಳುಭವನದಲ್ಲಿ ಶನಿವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ತುಳು ಶಿಕ್ಷಕರ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಮಂಗಳೂರು

ದ್ವಿಭಾಷಾ ನೀತಿ ಶಾಲೆಗಳಲ್ಲಿ ತುಳು ಕಲಿಕೆಗೆ ಅಡ್ಡಿಯಾಗದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.ಉರ್ವಸ್ಟೋರ್ ತುಳುಭವನದಲ್ಲಿ ಶನಿವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ತುಳು ಶಿಕ್ಷಕರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದ್ವಿಭಾಷಾ ನೀತಿ ಮಾತೃ‌ಭಾಷೆಯನ್ನು ಕಲಿಸುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಹಾಗಾಗಿ ತುಳು ಕಲಿಕೆಗೆ ತೊಂದರೆಯಾಗದು. ವಿದ್ಯಾರ್ಥಿಗಳಿಗೆ ತುಳು ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಸ್ಪರ್ಧೆ, ಚಟುವಟಿಕೆಗಳನ್ನು ನಡೆಸುವುದಕ್ಕೆ ಅಕಾಡೆಮಿ ಪ್ರೋತ್ಸಾಹ ನೀಡಲಿದೆ ಎಂದು ಅವರು ಹೇಳಿದರು.ನಿರಂತರ ಪ್ರೋತ್ಸಾಹಧನಕ್ಕೆ ಕ್ರಮ: ಶಿಕ್ಷಕರು ತುಳು ಭಾಷೆಯ ಮೇಲಿನ ಪ್ರೀತಿಯಿಂದ ತುಳು ಕಲಿಸುತ್ತಿದ್ದಾರೆ.‌ ಭಾಷೆ ಶಿಕ್ಷಣ ವ್ಯವಸ್ಥೆಯೊಳಗೆ ಬಂದರೆ‌ ಅದು ಉಳಿಯುತ್ತದೆ. ಈ ಹಿಂದೆ ಕೆಲವು ಬಾರಿ ಶಿಕ್ಷಕರಿಗೆ ಪ್ರೋತ್ಸಾಹ ಧನ ನೀಡುವಾಗ ವಿಳಂಬವಾಗಿದೆ. ಮುಂದೆ‌ ಅದನ್ನು ಕ್ಲಪ್ತ ಸಮಯದಲ್ಲಿ ನೀಡುವ ಬಗ್ಗೆ ವ್ಯವಸ್ಥೆಯಾಗಬೇಕಿದೆ.‌ ಅಕಾಡೆಮಿಯಲ್ಲಿ ಮೂಲಧನ ಇದ್ದರೆ ಕ್ಲಪ್ತ ಸಮಯದಲ್ಲಿಯೇ ಪ್ರೋತ್ಸಾಹಧನ ನೀಡಬಹುದು. ಸಂಘ ಸಂಸ್ಥೆಗಳಿಂದ ದೇಣಿಗೆ ಪಡೆದು ಅದನ್ನು ಅಕಾಡೆಮಿ ಮೂಲಕ ನೀಡುವ ಚಿಂತನೆ ಇದ್ದು ಶಿಕ್ಷಕರು ಮತ್ತು ಸಂಬಂಧ ಪಟ್ಟ ಇತರರೊಂದಿಗೆ ಸಮಾಲೋಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಾರಾನಾಥ ಗಟ್ಟಿ ಭರವಸೆ ನೀಡಿದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಉರ್ವ ಪೊಂಪೈ ಪ್ರೌಢಶಾಲೆಯ ನಿವೃತ್ತ ಸಹ ಪ್ರಾಧ್ಯಾಪಕ, ತುಳು ಭಾಷಾ ಶಿಕ್ಷಕ ದಿನೇಶ್ ಆರ್. ಶೆಟ್ಟಿಗಾರ್, 2010 ರಲ್ಲಿ ತುಳು ತರಗತಿಯನ್ನು ಆರಂಭಿಸಿದ್ದೆ. ಶಾಲಾಡಳಿತ ಮಂಡಳಿಗಳ ಸಹಕಾರ, ಪ್ರೋತ್ಸಾಹವಿದ್ದರೆ ತುಳು ಶಿಕ್ಷಕರ ಕೆಲಸ ಸಲೀಸಾಗುತ್ತದೆ. ತುಳು ಉಳಿಯಲು ತುಳು ಶಿಕ್ಷಕರ ಪಾತ್ರ ದೊಡ್ಡದು ಎಂದು ಹೇಳಿದರು.ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ತುಳು ಸಾಹಿತ್ಯ ಅಕಾಡೆಮಿಯ ನಿವೃತ್ತ ರಿಜಿಸ್ಟ್ರಾರ್ ಚಂದ್ರಹಾಸ ರೈ ಮಾತನಾಡಿ, ತುಳು ಕಲಿಯುವ ಮಕ್ಕಳು, ಕಲಿಸುವ ಸಾಮರ್ಥ್ಯದ ಶಿಕ್ಷಕರು ನಮ್ಮಲ್ಲಿ ಇದ್ದಾರೆ ಎಂಬುದನ್ನು ಸರ್ಕಾರಕ್ಕೆ ಈ ಹಿಂದೆಯೇ ತೋರಿಸಿಕೊಟ್ಟಿದ್ದೇವೆ. ತುಳು ಕಲಿಕೆಗೆ ಸಂಬಂಧಿಸಿದಂತೆ ಈಗ ಇರುವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕುಎಂದು ಹೇಳಿದರು.ಸಂಪನ್ಮೂಲ ವ್ಯಕ್ತಿಯಾಗಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾಲಯದ ನಿವೃತ್ತ ಸಹಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಮಾತನಾಡಿ, ಎಐ ಸಹಿತ ಡಿಜಿಟಲ್ ವೇದಿಕೆಗಳಲ್ಲಿಯೂ ತುಳುವಿಗೆ ಸಂಬಂಧಿಸಿದ ಸಾಕಷ್ಟು ವಿಷಯಗಳು ಪಠ್ಯ ರೂಪದಲ್ಲಿ ಲಭ್ಯವಿದ್ದು ಶಿಕ್ಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಅಕಾಡೆಮಿ ಸದಸ್ಯರಾದ ಬಾಬು ಕೊರಗ ಪಾಂಗಾಳ, ಬೂಬ ಪೂಜಾರಿ ಮಳಲಿ ಇದ್ದರು. ಸದಸ್ಯೆ ಅಕ್ಷಯ ಆರ್. ಶೆಟ್ಟಿ ಗೋಷ್ಠಿ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಕ್ತಿ ಕಡಲಿನಲ್ಲಿ ಮಿಂದೆದ್ದ ಉಡುಪಿ ಕೃಷ್ಣನಗರಿ...
ಜನಸಾಮಾನ್ಯರಿಗೆ ತೊಂದರೆ ಕೊಡುವ ಯೋಜನೆ ಕೈಬಿಡಿ: ಜಿ.ಜಿ. ಶಂಕರ್