ಗಾಂಜಾ ಸೇವನೆ ತಡೆಗೆ ಕರುನಾಡ ವಿಜಯಸೇನೆ ಒತ್ತಾಯ

KannadaprabhaNewsNetwork | Published : Aug 8, 2024 1:31 AM

ಸಾರಾಂಶ

Karunada Vijaya Sena urges ban on consumption of ganja

-ಕರುನಾಡ ವಿಜಯಸೇನೆಯ ತಾಲೂಕು ಘಟಕದಿಂದ ಪ್ರತಿಭಟನೆ, ತಹಸೀಲ್ದಾರ್‌ ಗೆ ಮನವಿ

---------

ಕನ್ನಡಪ್ರಭ ವಾರ್ತೆ ಹಿರಿಯೂರು: ಗಾಂಜಾ ಸೇವನೆ ಮತ್ತು ಪಾರ್ಕ್‌ಗಳ ಕೊಳಚೆ ತಡೆಗಟ್ಟಿ ಎಂದು ಕರುನಾಡ ವಿಜಯಸೇನೆಯ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು. ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿಗೆ ಮನವಿ ನೀಡಿದ ನಂತರ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆಟಿ ಶಿವಕುಮಾರ್, ನಗರದ ಬಹುತೇಕ ಪಾರ್ಕ್‌ಗಳನ್ನು ಅಕ್ಕಪಕ್ಕದ ಮನೆಯವರು, ಶಾಲೆಗಳವರು ಒತ್ತುವರಿ ಮಾಡಿಕೊಂಡಿದ್ದಾರೆ. ಕೆಲವು ಪುಂಡರು, ಗಾಂಜಾ ವ್ಯಸನಿಗಳು ಪಾರ್ಕ್‌ಗಳನ್ನೇ ಗಾಂಜಾ ಸೇವನೆಗೆ, ಜೂಜಿಗೆ ಅಡ್ಡೆಗಳನ್ನಾಗಿಸಿಕೊಂಡಿದ್ದಾರೆ. ಗಾಂಜಾ ಪ್ರಕರಣಗಳು ಹಿರಿಯೂರಿನಿಂದ ವರದಿಯಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಗಮನಹರಿಸಬೇಕಿದೆ. ವಯೋ ವೃದ್ಧರು, ಸಾರ್ವಜನಿಕರು ವಿಶ್ರಾಂತಿಗೆ, ವಾಯುವಿಹಾರಕ್ಕೆ ಬಳಸಬೇಕಾದ ಪಾರ್ಕ್‌ಗಳು ಮದ್ಯವ್ಯಸನಿಗಳ, ಗಾಂಜಾ ಗಿರಾಕಿಗಳ ತಾಣವಾಗಿರುವುದು ದುರಂತದ ಸಂಗತಿ. ನಗರದ ಬಹುತೇಕ ವ್ಯಾಪಾರಸ್ಥರು ತಮ್ಮ ಅಂಗಡಿಗಳಿಗೆ ಆಂಗ್ಲ ನಾಮಫಲಕ ಬಳಸುತ್ತಿದ್ದು, ಶೇ.60ರಷ್ಟು ಕನ್ನಡ ನಾಮಫಲಕದಲ್ಲಿರಬೇಕು ಎಂಬ ನಿಯಮವನ್ನು ಗಾಳಿಗೆ ತೂರಲಾಗಿದೆ. ಕೂಡಲೇ ಜಿಲ್ಲಾಡಳಿತ, ತಾಲೂಕು ಆಡಳಿತ ವ್ಯಾಪಾರಸ್ಥರ ಅಂಗಡಿಗಳ ನಾಮಫಲಕವನ್ನು ಕನ್ನಡೀಕರಿಸಲು ಕಟ್ಟುನಿಟ್ಟಿನ ಆದೇಶ ಮಾಡಬೇಕು. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ತಾಲೂಕು ಆಡಳಿತ ಈ ಎಲ್ಲಾ ಸಮಸ್ಯೆಗಳ ತುರ್ತು ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕು ಗೌರವಾಧ್ಯಕ್ಷ ಮಂಜುನಾಥ್ ಹೆಗ್ಗೆರೆ, ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಮಹಿಳಾ ಜಿಲ್ಲಾಧ್ಯಕ್ಷೆ ವೀಣಾ ಗೌರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಜಿಲ್ಲಾ ಉಪಾಧ್ಯಕ್ಷ ಮುಜಾಯಿದ್, ಜಿಲ್ಲಾ ಕಾರ್ಯದರ್ಶಿ ಜಗದೀಶ್, ನಿಸಾರ್ ಅಹಮದ್, ಹರೀಶ್ ಕುಮಾರ್, ಅವಿನಾಶ್, ಪಾಂಡು, ಭರತ್, ಮಂಜುನಾಥ್, ಕೆ.ರತ್ನಮ್ಮ, ದೀಪು ಇದ್ದರು.

--------

ಪೋಟೊ: 1,2 ನಗರದ ಉದ್ಯಾನವನಗಳಲ್ಲಿ ನಡೆಯುತ್ತಿರುವ ಗಾಂಜಾ ಸೇವನೆ ಮತ್ತು ಪಾರ್ಕ್‌ಗಳ ಕೊಳಚೆ ತಡೆಗಟ್ಟಿ ಎಂದು ಕರುನಾಡ ವಿಜಯಸೇನೆಯ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು.

Share this article