ವಿಧಾನಸಭೆಯಲ್ಲಿ ಅನಾಥವಾದ ಕಾರವಾರ ವಿಧಾನಸಭಾ ಕ್ಷೇತ್ರ

KannadaprabhaNewsNetwork | Published : Mar 29, 2025 12:30 AM

ಸಾರಾಂಶ

ವಿಧಾನಸಭೆಯ ಕಳೆದ ಎರಡು ಅಧಿವೇಶನಗಳಲ್ಲಿ ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರದ ಪ್ರಾತಿನಿಧ್ಯ ಇಲ್ಲದೇ ಕಲಾಪ ಮುಕ್ತಾಯವಾಗಿದೆ.

ಕಾರವಾರ: ವಿಧಾನಸಭೆಯ ಕಳೆದ ಎರಡು ಅಧಿವೇಶನಗಳಲ್ಲಿ ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರದ ಪ್ರಾತಿನಿಧ್ಯ ಇಲ್ಲದೇ ಕಲಾಪ ಮುಕ್ತಾಯವಾಗಿದೆ. ಕಾರವಾರ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಗಮನ ಸೆಳೆಯಲು ಸಾಧ್ಯವಾಗದಂತಾಗಿದೆ.

ಬೇಲೆಕೇರಿ ಬಂದರಿನಿಂದ ಅದಿರು ಅಕ್ರಮ ರಫ್ತು ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯ ಕಾರವಾರ ಶಾಸಕ ಸತೀಶ ಸೈಲ್ ಗೆ ಶಿಕ್ಷೆ ವಿಧಿಸಿತ್ತು. ನಂತರ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ ಶಿಕ್ಷೆಯನ್ನು ಅಮಾನತಿನಲ್ಲಿ ಇಟ್ಟರೂ ವಿಧಾನಸಭೆಯ ಕಲಾಪದಲ್ಲಿ ಪಾಲ್ಗೊಳ್ಳಲು, ಮತದಾನ, ಭತ್ಯೆ ಪಡೆಯಲು ನಿರ್ಬಂಧ ಹೇರಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಸತೀಶ ಸೈಲ್ ಗೆ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಾನೂನು ಸಮರ ಇತ್ಯರ್ಥವಾಗುವ ತನಕ ಕಾರವಾರ ಕ್ಷೇತ್ರ ವಿಧಾನಸಭೆಯಲ್ಲಿ ಅನಾಥವಾಗಿಯೆ ಉಳಿಯಲಿದೆ.

ಈಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಕುಮಟಾ ಶಾಸಕ ದಿನಕರ ಶೆಟ್ಟಿ ಪ್ರಶ್ನಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ. ಆದರೆ ಸರ್ಕಾರ ಪೂರಕವಾಗಿದೆ ಎಂದಷ್ಟೇ ಹೇಳಿದರು.

ಈ ಸಂದರ್ಭದಲ್ಲಿ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕೆಂದು ಬಲವಾಗಿ ಸಮರ್ಥಿಸಿಕೊಳ್ಳುವ ಅಗತ್ಯತೆ ಇತ್ತು. ಇನ್ನು ಬಜೆಟ್ ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರವಾರದಲ್ಲಿ ಆಗಬೇಕೆನ್ನುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನ ಸೆಳೆಯುವ ಅಗತ್ಯತೆ ಇತ್ತು. ಆದೂ ಆಗದೇ ಇರುವುದರಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಭವಿಷ್ಯ ಸದ್ಯಕ್ಕೆ ಡೋಲಾಯಮಾನವಾಗಿಯೇ ಉಳಿದಿದೆ.

ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅಂತಹ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಬಿಂಬಿಸಿ ರಾಜ್ಯ, ಸರ್ಕಾರದ ಗಮನ ಸೆಳೆಯುವ ಮೂಲಕ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಧಾನಸಭೆ ಸೂಕ್ತ ವೇದಿಕೆಯಾಗಿತ್ತು. ಸತೀಶ ಸೈಲ್ ಅಂತಹ ಅವಕಾಶವನ್ನು ಸದ್ಯಕ್ಕೆ ಕಳೆದುಕೊಂಡಂತಾಗಿದೆ. ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರ ವಿಧಾನಸಭೆಯಲ್ಲೂ ಅನಾಥವಾದಂತಾಗಿದೆ.

ಈ ಹಿಂದೆ ವಸಂತ ಅಸ್ನೋಟಿಕರ್ ಹತ್ಯೆಯಾದ ತರುವಾಯ ಕೆಲ ಸಮಯ ಶಾಸಕರು ಇರದ ಸ್ಥಿತಿ ನಿರ್ಮಾಣವಾಗಿತ್ತು. ಆನಂದ ಅಸ್ನೋಟಿಕರ್ ಕಾಂಗ್ರೆಸ್ ನಿಂದ ಗೆದ್ದು ಬಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದಾಗಲೂ ಕೆಲ ಕಾಲ ಶಾಸಕರಿಲ್ಲದಂತಾಗಿತ್ತು. ಸತೀಶ ಸೈಲ್ ಈ ಹಿಂದಿನ ಸಲ ಶಾಸಕರಾಗಿದ್ದ ಅವಧಿಯಲ್ಲಿ ಜೈಲಿಗೆ ಹೋದಾಗ ಸುಮಾರು ಒಂದೂವರೆ ವರ್ಷ ಶಾಸಕರು ಇಲ್ಲದಂತಾಯಿತು. ಈ ಬಾರಿ ಶಾಸಕರು ಇದ್ದರೂ ನಿರ್ಬಂಧದಿಂದ ವಿಧಾನಸಭಾ ಕಲಾಪದಲ್ಲಿ ಪಾಲ್ಗೊಳ್ಳದಂತಾಗಿದೆ. ಇನ್ನೆಷ್ಟು ಸಮಯ ಹೀಗೆ ಎನ್ನುವುದು ಪ್ರಶ್ನೆಯಾಗಿದೆ.

Share this article