ಕಾರವಾರದ ಕರಸೇವಕ ಗೋಪಾಲಕೃಷ್ಣ ಶೆಟ್ಟಿಯಲ್ಲಿ ಮೂಡಿದ ಧನ್ಯತಾಭಾವ

KannadaprabhaNewsNetwork |  
Published : Jan 22, 2024, 02:16 AM IST
ಗೋಪಾಲಕೃಷ್ಣ ಶೆಟ್ಟಿ  | Kannada Prabha

ಸಾರಾಂಶ

ಅಯೋಧ್ಯಾ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅಯೋಧ್ಯಾ ಕರಸೇವೆಯಲ್ಲಿ ಪಾಲ್ಗೊಂಡು ಕಾರವಾರದ ಗೋಪಾಲಕೃಷ್ಣ ಶೆಟ್ಟಿ ಧನ್ಯತಾಭಾವ ಹೊಂದಿದ್ದಾರೆ. ಶೆಟ್ಟಿ ಅವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವನ್ನು ಟಿವಿ ಮೂಲಕ ಕಣ್ತುಂಬಿಕೊಳ್ಳಲಿದ್ದಾರೆ.

ಜಿ.ಡಿ. ಹೆಗಡೆ

ಕಾರವಾರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯಾಗುವ ಹಿನ್ನೆಲೆಯಲ್ಲಿ ದಶಕಗಳ ಹಿಂದೆ ಕರಸೇವೆಗೆ ತೆರಳಿ ಪೊಲೀಸರ ಲಾಠಿ ಏಟು ತಿಂದು ಮರಳಿದ್ದ ೮೪ ವರ್ಷದ ವ್ಯಕ್ತಿಯಲ್ಲಿ ಧನ್ಯತಾ ಭಾವ ಮೂಡಿದೆ.

ಕರ ಸೇವಕರಾಗಿ ಕಾರವಾರದಿಂದ ಅಯೋಧ್ಯೆಗೆ ತೆರಳಿ ಗಲಭೆ ವೇಳೆ ಪೊಲೀಸರ ಲಾಠಿ ಏಟನ್ನು ತಿಂದು ಗಾಯಗಳೊಂದಿಗೆ ಮರಳಿದ್ದ, ಅಂದಿನ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ, ನಗರದ ರಾಮಕೃಷ್ಣ ಆಶ್ರಮ ರಸ್ತೆ ನಿವಾಸಿ ಗೋಪಾಲಕೃಷ್ಣ ಏಕನಾಥ‌ ಶೆಟ್ಟಿ ಇದೀಗ ಅಯೋಧ್ಯೆ ವೈಭವ ಕಂಡು ಖುಷಿಗೊಂಡಿದ್ದಾರೆ. ಅವರ ಹೋರಾಟ ಸಾರ್ಥಕವಾಗಿದೆ ಎನ್ನುವ ಧನ್ಯತಾ ಭಾವ ಮೂಡಿದೆ. ಶೆಟ್ಟಿ ಅವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವನ್ನು ಟಿವಿ ಮೂಲಕ ಕಣ್ತುಂಬಿಕೊಳ್ಳಲಿದ್ದಾರೆ.

ಸರಿಸುಮಾರು ಎರಡು ದಶಕಗಳ ಹಿಂದೆ ಕಾರವಾರದಲ್ಲಿ ವಿಶ್ವ ಹಿಂದೂ ಪರಿಷತ್‌ನ ಕಾರ್ಯದರ್ಶಿಯಾಗಿದ್ದ ನಗರದ ಗೋಪಾಲಕೃಷ್ಣ ಶೆಟ್ಟಿ ಪರಿಷತ್‌ನಲ್ಲಿ ಮುಂಚೂಣಿಯಲ್ಲಿದ್ದವರು. ಸಂಘದ ಯಾವುದೇ ಕಾರ್ಯ ಚಟುವಟಿಕೆ ಇದ್ದರೂ ಮುಂದೆ ನಿಂತು ಮಾಡುತ್ತಿದ್ದರು. 2002ರ ವೇಳೆಗೆ ಅಯೋಧ್ಯೆಗೆ ಕರ ಸೇವಕರನ್ನು ಕೊಂಡೊಯ್ಯಲು ತೀರ್ಮಾನಿಸಿದಾಗ ಮುಂದೆ ನಿಂತು ಸಜ್ಜಾಗಿದ್ದರು. ಅಲ್ಲದೆ ಗೋಪಾಲಕೃಷ್ಣ ಅವರ ಜತೆಗೆ ಮೋಹನದಾಸ ಶಾನಭಾಗ, ಶ್ರೀಮತಿ ಠಾಣೇಕರ್ ಮತ್ತಿಬ್ಬರು ತೆರಳಿದ್ದರು. ಈ ವೇಳೆ ಗಲಭೆ ಉಂಟಾದಾಗ ಲಾಠಿ ಏಟನ್ನು ತಿಂದು ಹೊಲಗದ್ದೆಗಳಲ್ಲಿ ಕಾಲಿಗೆ ಬುದ್ಧಿ ಹೇಳಿದ್ದರು. ಅಲ್ಲಿಂದ 40 ಕಿಮೀ ಮೂರು-ನಾಲ್ಕು ಊರುಗಳನ್ನು ಕಾಲ್ನಡಿಗೆಯಲ್ಲಿ ಸಾಗಿದ್ದರು.

ಇತ್ತ ಮನೆಯಲ್ಲಿ ಇದ್ದವರು ಟಿವಿಯಲ್ಲಿ ಗಲಭೆ ಆಗುತ್ತಿರುವುದನ್ನು ವೀಕ್ಷಿಸಿ ಆತಂಕಕ್ಕೆ ಒಳಗಾಗಿದ್ದರು. ಆದರೆ ತಮ್ಮ ಪತಿ ಗಾಯಗಳೊಂದಿಗೆ ಮನೆಗೆ ಆಗಮಿಸಿದ್ದರು ಎಂದು ಅಂದಿನ ಸನ್ನಿವೇಶನವನ್ನು ಗೋಪಾಲಕೃಷ್ಣ ಅವರ ಪತ್ನಿ ರಾಧಾ ಶೆಟ್ಟಿ ಮೆಲಕು ಹಾಕಿದರು.

ವಯೋಸಹಜ ಅನಾರೋಗ್ಯದಿಂದ ಮನೆಯಲ್ಲಿರುವ ಗೋಪಾಲಕೃಷ್ಣ ಶೆಟ್ಟಿ ಟಿವಿ ಮುಂದೆ ಕುಳಿತು ಅಯೋಧ್ಯೆಯಲ್ಲಿನ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ತಾನೂ ಗಟ್ಟಿ ಇದ್ದರೆ ಇಷ್ಟೊತ್ತಿಗಾಗಲೇ ಅಯೋಧ್ಯೆಯಲ್ಲಿ ಇರುತ್ತಿದ್ದೆ ಎನ್ನುವ ಅವರು, ಟಿವಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ಪ್ರಾಣ ಪ್ರತಿಷ್ಠಾಪನೆ ಕಂಡು ಸಂತಸಗೊಂಡಿದ್ದಾರೆ.ನಮ್ಮ ತಂದೆ ಅವರು ವಿಶ್ವ ಹಿಂದೂ ಪರಿಷತ್‌ನಲ್ಲಿ 8-10 ವರ್ಷ ಕಾರ್ಯದರ್ಶಿಯಾಗಿದ್ದರು. ಕರ ಸೇವಕರಾಗಿಯೂ ತೆರಳಿದ್ದರು. ಇಂದಿನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಟಿವಿ ಮೂಲಕ ವೀಕ್ಷಣೆ ಮಾಡುತ್ತಿದ್ದಾರೆ. ಮುಂದೊಂದು ದಿನ ಮಂದಿರದ ದರ್ಶನ ಮಾಡಿಸುವ ಇಚ್ಛೆಯಿದೆ ಎಂದು ಕರಸೇವಕ ಗೋಪಾಲಕೃಷ್ಣ ಪುತ್ರ ರಾಘವೇಂದ್ರ ಶೆಟ್ಟಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!