ಪಾರ್ಕಿಂಗ್‌ ವ್ಯವಸ್ಥೆ ಮಾಡದ ಕಟ್ಟಡ ಮಾಲೀಕರಿಗೆ ದಂಡ ವಿಧಿಸಲು ಕಾರವಾರ ನಗರಸಭೆ ಸದಸ್ಯರ ಆಗ್ರಹ

KannadaprabhaNewsNetwork |  
Published : Feb 15, 2025, 12:31 AM IST
ಕಾರವಾರ ನಗರಸಭೆಯ ಸಾಮಾನ್ಯ ಸಭೆ ನಡೆಯಿತು. | Kannada Prabha

ಸಾರಾಂಶ

ಸರ್ವೆ ನಡೆಸಿ ವಾಣಿಜ್ಯ ಕಟ್ಟಡಕ್ಕೆ ಎಷ್ಟು ಗ್ರಾಹಕರು ಬರುತ್ತಾರೆ? ಎಷ್ಟು ವ್ಯಾಪಾರ ವಹಿವಾಟು ನಡೆಯುತ್ತದೆ ಎಂದು ತಿಳಿದು ತಿಂಗಳಿಗೆ ಕಟ್ಟಡದ ಮಾಲೀಕರು ಎಷ್ಟು ಮೊತ್ತ ನಗರಸಭೆಗೆ ಪಾವತಿಸಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ ಎಂದು ಪೌರಾಯುಕ್ತ ಜಗದೀಶ ಹುಲಗೆಜ್ಜಿ ತಿಳಿಸಿದರು.

ಕಾರವಾರ: ಬಹುಮಹಡಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ನಗರದಲ್ಲಿ ಪಾರ್ಕಿಂಗ್ ಇದೆ ಎಂದು ನಕ್ಷೆಯಲ್ಲಿ ತೋರಿಸುತ್ತಾರೆ. ಆದರೆ ನೈಜವಾಗಿ ಅಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಲು ಅವಕಾಶ ಇರುವುದಿಲ್ಲ. ಅಧಿಕಾರಿಗಳು ಇದನ್ನು ಗಮನಿಸದೇ ಪರವಾನಗಿ ನೀಡುತ್ತಾರೆ ಎಂದು ಸದಸ್ಯ ಸಂದೀಪ ತಳೇಕರ ಆಕ್ಷೇಪ ವ್ಯಕ್ತಪಡಿಸಿದರು.ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ರಸ್ತೆಯ ಮೇಲೆ ವಾಹನ ನಿಲ್ಲಿಸುತ್ತಾರೆ. ಕಟ್ಟಡದ ಒಳಗೆ ನಿಲ್ಲಿಸಲು ಅವಕಾಶವೇ ಇರುವುದಿಲ್ಲ ಎಂದರು. ಸದಸ್ಯ ಪ್ರೇಮಾನಂದ ಗುನಗಿ ಇದಕ್ಕೆ ಧ್ವನಿಗೂಡಿಸಿದರು.

ಪೌರಾಯುಕ್ತ ಜಗದೀಶ ಹುಲಗೆಜ್ಜಿ ಮಾತನಾಡಿ, ಸರ್ವೆ ನಡೆಸಿ ವಾಣಿಜ್ಯ ಕಟ್ಟಡಕ್ಕೆ ಎಷ್ಟು ಗ್ರಾಹಕರು ಬರುತ್ತಾರೆ? ಎಷ್ಟು ವ್ಯಾಪಾರ ವಹಿವಾಟು ನಡೆಯುತ್ತದೆ ಎಂದು ತಿಳಿದು ತಿಂಗಳಿಗೆ ಕಟ್ಟಡದ ಮಾಲೀಕರು ಎಷ್ಟು ಮೊತ್ತ ನಗರಸಭೆಗೆ ಪಾವತಿಸಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಸಿದ ಡಾ. ನಿತಿನ ಪಿಕಳೆ, ಆ ರೀತಿ ರಸ್ತೆಯ ಮೇಲೆ ನಿಲ್ಲಿಸುವ ದಂಡ ಪಡೆದರೆ ಅನಧಿಕೃತವಾಗಿ ಅವರಿಗೆ ಜಾಗವನ್ನು ನೀಡಿದಂತಾಗಬಹುದು. ₹೫, ₹೧೦ ಶುಲ್ಕ ಪಾವತಿಸಿದರೆ ಪ್ರಯೋಜನವಿಲ್ಲ. ಹೆಚ್ಚಿನ ಶುಲ್ಕ ವಿಧಿಸಬೇಕು. ಏನು ತಪ್ಪು ಮಾಡಿದ್ದಾರೆಂದು ತಿಳಿಯಬೇಕು ಎಂದರು.

ಮೀನು ಮಾರುಕಟ್ಟೆಯಲ್ಲಿನ ಶಿಥಲೀಕರಣ ಘಟಕ ನಿರ್ವಹಣೆ, ವಿದ್ಯುತ್ ಬಿಲ್ ಯಾರು ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಯಿತು. ಕೆಲವರು ನಗರಸಭೆಯಿಂದ ಪಾವತಿಸಬೇಕು ಎಂದರು. ಇನ್ನು ಕೆಲವರು ಮೀನು ಮಾರುಕಟ್ಟೆ ಗುತ್ತಿಗೆ ಪಡೆದವರು ಪಾವತಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಸದಸ್ಯ ಮಕಬುಲ್ ಶೇಖ್, ಮೀನು ಮಾರುಕಟ್ಟೆಯ ನಿರ್ವಹಣೆ ಟೆಂಡರ್ ಪಡೆದ ಗುತ್ತಿಗೆದಾರರು ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ ಎಂದು ಫ್ಯಾನ್ ಹಾಕುತ್ತಿಲ್ಲ. ಇನ್ನು ಶಿಥಲೀಕರಣ ಘಟಕವನ್ನು ನಿರ್ವಹಣೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು. ಬಳಿಕ ಮಹಿಳಾ ಮೀನುಗಾರರ ಅಭಿವೃದ್ಧಿ ಸಂಘದೊಂದಿಗೆ ಪ್ರತ್ಯೇಕ ಸಭೆ ನಡೆಸಿ ಘಟಕ ನಿರ್ವಹಣೆ, ವಿದ್ಯುತ್ ಬಿಲ್ ಪಾವತಿ ಯಾರು ಮಾಡಬೇಕು ಎನ್ನುವ ನಿರ್ಧಾರಕ್ಕೆ ಬರಲು ಠರಾವು ಮಾಡಲಾಯಿತು.ಸದಸ್ಯ ಸಂದೀಪ ತಳೇಕರ ಮಾತನಾಡಿ, ರವೀಂದ್ರನಾಥ ಟಾಗೋರ ಕಡಲ ತೀರಕ್ಕೆ ವಿದ್ಯುತ್ ಅಳವಡಿಕೆ ಮಾಡಲು ನಗರಸಭೆಯಿಂದ ಹಣ ವೆಚ್ಚ ಮಾಡಿರುವುದಕ್ಕೆ ಆಕ್ಷೇಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಪ್ರೇಮಾನಂದ ಗುನಗಿ, ನಮ್ಮ ವಾರ್ಡ್‌ಗಳಲ್ಲಿ ಯಾವುದೇ ಕೆಲಸ ಆಗಿಲ್ಲ. ತೀರದಲ್ಲಿ ನಡೆಯುವ ಕಾರ್ಯಕ್ರಮಗಳ ಶುಲ್ಕ ಪ್ರವಾಸೋದ್ಯಮ ಇಲಾಖೆಗೆ ಹೋಗುತ್ತದೆ. ನಗರಸಭೆಗೆ ಬರುವುದಿಲ್ಲ. ಹೀಗಿರುವಾಗ ಅಲ್ಲಿ ಏಕೆ ಅಭಿವೃದ್ಧಿ ಕೆಲಸ ಮಾಡಬೇಕು. ಅದೇ ಹಣವನ್ನು ವಾರ್ಡ್‌ಗಳಿಗೆ ಹಂಚಿಕೆ ಮಾಡಿ ಎಂದರು.

ಪೌರಾಯುಕ್ತ ಜಗದೀಶ, ಈ ಹಿಂದೆ ಜಿಲ್ಲಾಧಿಕಾರಿಯವರು ಆಡಳಿತಾಧಿಕಾರಿ ಇರುವಾಗ ಅವರ ಆದೇಶದಂತೆ ಕೆಲಸ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ನಗರಸಭೆಗೆ ಕಡಲ ತೀರದ ಆದಾಯ ಬರುವವರೆಗೆ ಯಾವುದೇ ಅಭಿವೃದ್ಧಿ ಕೆಲಸ ಮಾಡದಂತೆ ಸದಸ್ಯರು ತಾಕೀತು ಮಾಡಿದರು. ಉಪಾಧ್ಯಕ್ಷೆ ಪ್ರೀತಿ ಜೋಶಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!