ಹೆಚ್ಚಿನ ರಾಸಾಯನಿಕ ಬಳಕೆಯಿಂದ ಪದಾರ್ಥ ವಿಷಮಯ

KannadaprabhaNewsNetwork |  
Published : Jun 16, 2025, 11:47 PM ISTUpdated : Jun 16, 2025, 11:48 PM IST
50 | Kannada Prabha

ಸಾರಾಂಶ

ನಾವು ಬಳಸುವ ಗೂಬ್ಬರ, ಬಿತ್ತನೆ ಬೀಜ, ಬೆಳೆಗಳಿಗೆ ಹಾಕುವ ಔಷಧಿ ಎಲ್ಲವು ವಿಷಮಯವಾಗಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡುಹೆಚ್ಚಿನ ರಾಸಾಯನಿಕ ಬಳಸುವುದರಿಂದಾಗಿ ಆಹಾರ ಧಾನ್ಯಗಳು ವಿಷಮಯವಾಗುತ್ತಿದ್ದು ನಾವು ರೈತರಾಗಿ ವಿಷದ ಬೆಳೆಗಳನ್ನು ಬೆಳೆಯುವ ಮೂಲಕ ನಮ್ಮ ಮಕ್ಕಳಿಗೆ, ನಮ್ಮ ಕುಟುಂಬಕ್ಕೆ ವಿಷ ನೀಡುತ್ತಿದ್ದೇವೆ ಎಂದು ಹಿರಿಯ ರೈತ ಸಂಘಟನೆ ಹೋರಾಟಗಾರ ಹೊನ್ನೂರು ಪ್ರಕಾಶ್ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ದೊಡ್ಡ ಕವಲಂದೆ ಹೋಬಳಿಯ ಕಾರ್ಯಸಿದ್ದೇಶ್ವರ ಬೆಟ್ಟದಲ್ಲಿ ಭಾನುವಾರ ನೂತನವಾಗಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವು ಬಳಸುವ ಗೂಬ್ಬರ, ಬಿತ್ತನೆ ಬೀಜ, ಬೆಳೆಗಳಿಗೆ ಹಾಕುವ ಔಷಧಿ ಎಲ್ಲವು ವಿಷಮಯವಾಗಿದೆ. ಇದರಿಂದಾಗಿ ಆಹಾರ ಪದಾರ್ಥಗಳು ಕಲುಷಿತಗೊಂಡು ಹಲವಾರು ಕಾಯಿಲೆಗೆ ತುತ್ತಾಗುತ್ತಿದ್ದೇವೆ. ಸುಮಾರು 10 ಜನರಲ್ಲಿ ಒಬ್ಬರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣ ಸರ್ವೆ ಸಾಮಾನ್ಯವಾಗಿದೆ. 5ನೇ ತರಗತಿಗೆ ಹೆಣ್ಣು ಮಕ್ಕಳು ಋತುಮತಿಯಾಗುತ್ತಿದ್ದಾರೆ. ದಂಪತಿಗಳಿಗೆ ಸರಿಯಾದ ಸಮಯದಲ್ಲಿ ಮಕ್ಕಳಾಗದೆ ಬಂಜೆತನದಿಂದ ಬಳಲುತ್ತಿದ್ದಾರೆ. ಆದ್ದರಿಂದ ರೈತರು ಮುಂದಿನ ತಲೆಮಾರನ್ನು ಆರೋಗ್ಯಕರ ಸಮಾಜವನ್ನಾಗಿ ರೂಪಿಸುವ ಸಲುವಾಗಿ ಈಗಿನಿಂದಲೇ ಎಚ್ಚೆತ್ತುಕೊಂಡು ಸಾವಯವ ಬೇಸಾಯ ಪದ್ಧತಿ ಅನುಸರಿಸಿ ರಾಸಾಯನಿಕ ಮುಕ್ತ ಕೃಷಿಯಲ್ಲಿ ತೊಡಗಬೇಕು ಎಂದರು.ರಾಜ್ಯದಲ್ಲಿ ರೈತ ಮಹಿಳೆಯರು ನಮ್ಮ ಹಕ್ಕುಗಳನ್ನು, ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ರಾಜಕಾರಣಿಗಳ ಮುಂದೆ ಅಧಿಕಾರಿಗಳ ಮುಂದೆ ಕೈಕಟ್ಟಿ ನಿಲ್ಲಬೇಕಿಲ್ಲ, ಪೊರಕೆ ಚಳುವಳಿ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರೈತರು ಪ್ರಜ್ಞಾವಂತರಾಗಿ ಮತವನ್ನು ಹಣಕ್ಕಾಗಿ ಮಾರಿಕೊಳ್ಳದೆ ಉತ್ತಮ ರಾಜಕಾರಣಿಗಳನ್ನು ಆರಿಸಬೇಕು ಎಂದು ಕರೆ ನೀಡಿದರು.ಈ ವೇಳೆ ಸಂಘಟನೆಯ ಗೌರವಾಧ್ಯಕ್ಷ ದೇವಿರಮ್ಮನಹಳ್ಳಿ ನಂದೀಶ್, ರಾಜ್ಯಾಧ್ಯಕ್ಷ ಹಾಡ್ಯ ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸೌಮ್ಯಾ ರಾಜ್, ರಾಜ್ಯ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಯ್ಯ, ತಾಲೂಕು ಅಧ್ಯಕ್ಷರಾಗಿ ಅಂಬಳೆ ಮಹದೇವಸ್ವಾಮಿ, ಮುದ್ದಳ್ಳಿ ಚಿಕ್ಕಸ್ವಾಮಿ, ಜಿಲ್ಲಾಧ್ಯಕ್ಷರಾಗಿ ಕಸುವಿನಹಳ್ಳಿ ಮಂಜೇಶ್, ಹುಂಡಿ ಮಹೇಶ್, ದೇವರಮ್ಮನಹಳ್ಳಿ ಕುಮಾರ್, ಏಚಗುಂಡ್ಲ ಮಹೇಶ್, ದೊರೆಸ್ವಾಮಿ, ಹಂಡುವಿನಹಳ್ಳಿ ಮರಿಸ್ವಾಮಿ, ಮಲ್ಲೂರು ವರ್ಷ, ಅರಳಿಕಟ್ಟೆ ಕುಮಾರ್, ಪ್ರವೀಣ್ ಮಾಲೂರು ಕುಮಾರ್, ರವಿಕುಮಾರ್, ಸ್ವಾಮಿ ಸೇರಿದಂತೆ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ಪದಾಧಿಕಾರಿಗಳು ಇದ್ದರು.

-- ಬಾಕ್ಸ್-- -- ರೈತ ಸೇವೆಗೆ ಸಂಘಟನೆ--ಸಂಘದ ನೂತನ ರಾಜ್ಯಾಧ್ಯಕ್ಷ ಹಾಡ್ಯರವಿ ಮಾತನಾಡಿ, ಕಬ್ಬು ಬೆಳೆಗಾರರ ಸಂಘದ ಹಿರಿಯ ಹೋರಾಟಗಾರರ ಭ್ರಷ್ಟಾಚಾರ ಮತ್ತು ಮೋಸದಿಂದಾಗಿ ಬೇಸತ್ತು, ರೈತರಿಗೆ ಸೇವೆ ಮಾಡುವ ಸಲುವಾಗಿ ಈ ಹೊಸ ಸಂಘಟನೆಯನ್ನು ಸ್ಥಾಪನೆ ಮಾಡಲಾಗುತ್ತಿದೆ. ನಮ್ಮ ಸಂಘಟನೆಯು ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಪ್ರಾಮಾಣಿಕವಾಗಿ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲಿದೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ