ಕನ್ನಡಪ್ರಭ ವಾರ್ತೆ ಕೋಲಾರನಗರದ ೧೪ ಕೇಂದ್ರಗಳಲ್ಲಿ ಭಾನುವಾರ ನಡೆದ ೨೦೨೩-೨೪ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆ ಎರಡು ಕೇಂದ್ರಗಳಲ್ಲಿ ಪರೀಕ್ಷೆ ಬೆಳಗ್ಗೆ ೧೦ರಿಂದ ೧೨ ರವರೆಗೂ ಮಧ್ಯಾಹ್ನದ ಅವಧಿಯ ಪರೀಕ್ಷೆ ಮಧ್ಯಾಹ್ನ ೨ ಗಂಟೆಯಿಂದ ೪ ಗಂಟೆವರೆಗೂ ನಡೆಯಬೇಕಿದ್ದು, ಓಎಂಆರ್‌ನಲ್ಲಿ ಮುದ್ರಣ ದೋಷದಿಂದಾಗಿ ೧ ಗಂಟೆ ತಡವಾಗಿ ಆರಂಭವಾಯಿತಲ್ಲದೇ ಶೇ.೫೦ಕ್ಕಿಂತಲೂ ಹೆಚ್ಚು ಅಂದರೆ ೨೯೨೩ ಮಂದಿ ಗೈರಾಗಿದ್ದರು. ಪರೀಕ್ಷೆಗೆ ಒಟ್ಟು ೫೭೧೮ ಮಂದಿ ಕುಳಿತಿದ್ದು, ಎಲ್ಲಾ ೧೪ ಕೇಂದ್ರಗಳ ಪೈಕಿ ನಗರದ ಬಾಲಕರ ಪ್ರಥಮ ದರ್ಜೆ ಕಾಲೇಜು, ಮಹಿಳಾ ಪ್ರಥಮ ದರ್ಜೆ ಕಾಲೇಜು ಕೇಂದ್ರಗಳಲ್ಲಿ ಓಎಂಆರ್‌ನಲ್ಲಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆಯಲ್ಲೇ ಮುದ್ರಣ ದೋಷವುಂಟಾಗಿ ಪರೀಕ್ಷೆ ೧ ಗಂಟೆ ತಡವಾಗಿ ಆರಂಭಗೊಂಡಿತು.ಕೆಪಿಎಸ್ಸಿ ಎಡವಟ್ಟು: ಆಕ್ರೋಶ
ಓಎಂಆರ್‌ನಲ್ಲಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಬದಲಾಗಿದ್ದು, ಈ ಅವ್ಯವಸ್ಥೆ ಸರಿಪಡಿಸಲು ಪರೀಕ್ಷೆ ಒಂದು ಗಂಟೆ ತಡವಾಯಿತು. ಕೊನೆಗೆ ಮ್ಯಾನ್ಯುಯಲ್ ಆಗಿಯೇ ಅಭ್ಯರ್ಥಿಗಳಿಂದ ಅವರವರ ನೋಂದಣಿ ಸಂಖ್ಯೆ ಬರೆಸಿ ಪರೀಕ್ಷೆ ನಡೆಸಲಾಯಿತು. ಕಳೆದ ಬಾರಿಯೂ ಕೆಪಿಎಸ್ಸಿ ಎಡವಟ್ಟಿನಿಂದ ಪರೀಕ್ಷೆ ಮುಂದೂಡಲಾಗಿತ್ತು. ಇದೀಗ ಮತ್ತೆ ಸಮಸ್ಯೆ ಎದುರಾಗಿರುವ ಕುರಿತು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ರವಿ, ಎಸ್ಪಿ ನಿಖಿಲ್, ಅಪರ ಜಿಲ್ಲಾಧಿಕಾರಿ ಮಂಗಳಾ, ಎಸಿ ಡಾ.ಮೈತ್ರಿ, ಡಿಡಿಪಿಐ ಕೃಷ್ಣಮೂರ್ತಿ, ಕೈಗಾರಿಕಾ ಇಲಾಖೆ ಉಪನಿರ್ದೇಶಕ ರವಿಚಂದ್ರ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.೨೯೦೫ ಅಭ್ಯರ್ಥಿಗಳು ಗೈರು
ಪರೀಕ್ಷೆಗೆ ಗೈರಾದವರ ಕುರಿತು ಮಾಹಿತಿ ನೀಡಿರುವ ಪರೀಕ್ಷಾ ನೋಡಲ್ ಅಧಿಕಾರಿ ಶಂಕರೇಗೌಡ, ಬೆಳಗಿನ ಅವಧಿಯಲ್ಲಿ ನಡೆದ ಸಾಮಾನ್ಯ ಜ್ಞಾನ ಪೇಪರ್-೧ ರ ಪರೀಕ್ಷೆಗೆ ೫೭೧೮ ಮಂದಿ ನೋಂದಣಿ ಮಾಡಿಸಿದ್ದು, ಅವರಲ್ಲಿ ೨೮೧೩ ಮಂದಿ ಹಾಜರಾಗಿ ೨೯೦೫ ಮಂದಿ ಗೈರಾದರು.ಮಧ್ಯಾಹ್ನದ ಅವಧಿಯಲ್ಲಿ ನಡೆದ ಪೇಪರ್-೨ ಪರೀಕ್ಷೆಗೆ ನೋಂದಾಯಿಸಿದ್ದ ೨೭೧೮ ಮಂದಿ ಪೈಕಿ ೨೭೯೫ ಮಂದಿ ಹಾಜರಾಗಿದ್ದು, ೨೯೨೩ ಮಂದಿ ಗೈರಾದರು. ಶೇ.೫೦ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಗೈರಾಗಿರುವುದು ಆಶ್ಚರ್ಯಕರ ಸಂಗತಿಯಾಗಿತ್ತು. ಬಿಗಿ ಬಂದೋಬಸ್ತ್ಸುಗಮ ಪರೀಕ್ಷೆಗಾಗಿ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರೀಕ್ಷೆಗೆ ಆಗಮಿಸಿದ್ದ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿದ ನಂತರವೇ ಕೇಂದ್ರದೊಳಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ ಉಳಿದ ಅಭರಣಗಳ ಧರಿಸಲು ನಿಷೇಧವಿತ್ತು. ಪೂರ್ಣ ತೋಳಿನ ಶರ್ಟ್, ಶೂ ಹಾಕಿದ್ದರೂ ಪ್ರವೇಶವಿರಲಿಲ್ಲ. ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಬಂದ್ ಮಾಡಲು ಸೂಚಿಸಲಾಗಿತ್ತು.