ಕೆಎಎಸ್‌ ಅಧಿಕಾರಿಯಿಂದ 283 ಸರ್ಕಾರಿ ಶಾಲೆಗಳಿಗೆ ಬಣ್ಣ

KannadaprabhaNewsNetwork |  
Published : Aug 17, 2026, 02:30 AM IST
ಧಾರವಾಡದ ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ಮಲ್ಲಿಕಾರ್ಜುನ ತೊದಲಬಾಗಿ ಅವರ ಬಣ್ಣದ ದರ್ಪಣ ಕಾರ್ಯ. | Kannada Prabha

ಸಾರಾಂಶ

ಬಣ್ಣ ಮಾಸಿದ ಸರ್ಕಾರಿ ಶಾಲೆಗಳು, ಅಂಗನವಾಡಿ ಕಟ್ಟಡಗಳು ಗಮನಕ್ಕೆ ಬಂದರೆ ಸಾಕು, ಇಲ್ಲೊಬ್ಬ ಕೆಎಎಸ್‌ ಅಧಿಕಾರಿ ತಮ್ಮ "ಪರಿಸರ ಪ್ರೇಮ ತಂಡ " ಕಟ್ಟಿಕೊಂಡು ಸ್ವತಃ ನಿಂತು, ಬಣ್ಣ ಬಳಿದು ಆ ಕಟ್ಟಡವನ್ನು ಸುಂದರಗೊಳಿಸುತ್ತಾರೆ.

ಧಾರವಾಡ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿಯ ಬಣ್ಣದ ಪ್ರೇಮಕನ್ನಡಪ್ರಭ ವಾರ್ತೆ ಧಾರವಾಡ

ಬಣ್ಣ ಮಾಸಿದ ಸರ್ಕಾರಿ ಶಾಲೆಗಳು, ಅಂಗನವಾಡಿ ಕಟ್ಟಡಗಳು ಗಮನಕ್ಕೆ ಬಂದರೆ ಸಾಕು, ಇಲ್ಲೊಬ್ಬ ಕೆಎಎಸ್‌ ಅಧಿಕಾರಿ ತಮ್ಮ "ಪರಿಸರ ಪ್ರೇಮ ತಂಡ " ಕಟ್ಟಿಕೊಂಡು ಸ್ವತಃ ನಿಂತು, ಬಣ್ಣ ಬಳಿದು ಆ ಕಟ್ಟಡವನ್ನು ಸುಂದರಗೊಳಿಸುತ್ತಾರೆ.

ಹೌದು, ಸರ್ಕಾರಿ ಶಾಲೆಯಲ್ಲಿ ಕಲಿತಿರುವ ಪ್ರೀತಿ, ಗೌರವ ಹಾಗೂ ಪರಿಸರ ಪ್ರೇಮಕ್ಕಾಗಿ ಧಾರವಾಡ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆಗಿರುವ ಮಲ್ಲಿಕಾರ್ಜುನ ತೊದಲಬಾಗಿ ಅವರು ಬಣ್ಣ ಮಾಸಿದ ಸರ್ಕಾರಿ ಶಾಲೆ, ಅಂಗನವಾಡಿ ಕಟ್ಟಡಗಳಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಬಣ್ಣ ಬಳಿಯುವ ಮಹತ್‌ ಕಾರ್ಯ ಕೈಗೊಂಡಿದ್ದಾರೆ.

ಪರಿಸರ ಪ್ರೇಮ ಎಂಬ 45 ಜನ ಸಮಾನ ಮನಸ್ಕ ತಂಡವನ್ನು ಕಟ್ಟಿಕೊಂಡು ಇಲ್ಲಿಯ ವರೆಗೆ ಬರೋಬ್ಬರಿ 283 ಕಟ್ಟಡಗಳಿಗೆ ಬಣ್ಣದ ದರ್ಪಣ ಮಾಡಿದ್ದಾರೆ. ಬರೀ ಬಣ್ಣ ಬಳಿಯುವುದು ಮಾತ್ರವಲ್ಲದೇ ಸುಂದರ ಚಿತ್ರ ಬಿಡಿಸಿ, ಕಟ್ಟಡದ ಸುತ್ತ ಸಸಿ ನೆಟ್ಟು ಜನರ ಮನ ಗೆದ್ದಿದ್ದಾರೆ.

ಬಾಗಲಕೋಟಿ ಜಿಲ್ಲೆಯ ಬೀಳಗಿಯಿಂದ ಅವರ ಶಾಲಾ ಸುಧಾರಣಾ ಕನಸು ಆರಂಭವಾಯಿತು. ಅಲ್ಲಿನ 50-60 ಶಾಲಾ ಕಟ್ಟಡಗಳು, ಅಂಗನವಾಡಿಗಳ ಭೌತಿಕ ಸೌಂದರ್ಯದ ಮೆರಗಿಗೆ ಕಾರಣರಾಗಿದ್ದರು. ತದನಂತರ ಸಮಾನ ಮನಸ್ಕರ ತಂಡ ಕಟ್ಟಿಕೊಂಡು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಶಿಕಾರಿಪುರ, ಹೊಸನಗರ, ಭದ್ರಾವತಿ ತಾಲೂಕುಗಳಲ್ಲಿ ತಮ್ಮ ಸ್ವಂತ ಹಣದಿಂದ 75 ಶಾಲಾ ಕಟ್ಟಡಗಳಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲಿಂದ ಕೊಪ್ಪಳ, ಇದೀಗ ಧಾರವಾಡದಲ್ಲಿ ಈ ಸೇವೆ ಮುಂದುವರಿಸಿದ್ದಾರೆ.

ತುಡಿತದ ಮನ:

ಅವರು ಸದಾ ಸಕಾರಾತ್ಮಕ ಆಲೋಚನೆ ಹೊಂದಿರುವ ಅಧಿಕಾರಿ. ಜಮಖಂಡಿ ಕವಟಗಿಯಲ್ಲಿ ತಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಮಳೆಯಿಂದ ಸರ್ಕಾರಿ ಶಾಲೆಗಳು ಸೋರಿ ಪುಸ್ತಕಗಳು ಹಾಳಾಗಿದ್ದು ಮನಸ್ಸಿನ ಮೇಲೆ ಗಾಢ ಪರಿಣಾಮ ಉಂಟುಮಾಡಿತ್ತು. ಮುಂದೊಂದು ದಿನ ಸರ್ಕಾರಿ ಶಾಲೆಗಳ ಸುಧಾರಣೆಗೆ ಏನಾದರೂ ಮಾಡಬೇಕು ಎಂಬುದಕ್ಕೆ ಆ ಘಟನೆ ಪ್ರೇರಣೆಯಾಯಿತು. ಈ ಹಿನ್ನೆಲೆಯಲ್ಲಿ ಈಗ ಸಿಕ್ಕ ಅವಕಾಶ ಬಳಸಿಕೊಂಡು ಸರ್ಕಾರಿ ಶಾಲಾ ಕಟ್ಟಡಗಳಿಗೆ ಬಣ್ಣದ ಅರ್ಪಣೆ ಮಾಡುತ್ತಿದ್ದಾರೆ ಮಲ್ಲಿಕಾರ್ಜುನ.

ತಂಡದ ಸಹಕಾರ:

ತೊದಲಬಾಗಿ ಅವರು ಶಿವಮೊಗ್ಗದಲ್ಲಿ ಬಣ್ಣದ ದರ್ಪಣ ಮಾಡುತ್ತಿರುವ ಮಾಹಿತಿ ಇತ್ತು. ಜತೆಗೆ ಸಾಮಾಜಿಕ ಜಾಲತಾಣದ ಮೂಲಕ ಅವರು ಪರಿಚಯವಾದರು. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಅವರ ಬಣ್ಣದ ದರ್ಪಣ ಕಾರ್ಯಕ್ಕೆ ಸಂಚಾಲಕರಾಗಿ ನಾನು, ವೀರೇಶ ಹಿರೇಮಠ ಹಾಗೂ ಇನ್ನಿತರರು ಕೈ ಜೋಡಿಸಿದ್ದೇವೆ. ವನಹಳ್ಳಿ, ಹೆಬ್ಬಳ್ಳಿ ಸೇರಿದಂತೆ ಧಾರವಾಡದ 15ಕ್ಕೂ ಹೆಚ್ಚು ಶಾಲೆಗಳಿಗೆ ಬಣ್ಣ ಹಚ್ಚಿದ್ದೇವೆ. ಓರ್ವ ಅಧಿಕಾರಿಯಾಗಿ ಅವರ ಕಾರ್ಯ ಶ್ಲಾಘನೀಯ ಎಂದು ಪರಿಸರ ಪ್ರೇಮ ತಂಡದ ಸಂಚಾಲಕ ಎಲ್‌.ಐ. ಲಕ್ಕಮ್ಮನವರ ಹೇಳುತ್ತಾರೆ.

ಸೋಮವಾರದಿಂದ ಶನಿವಾರದ ವರೆಗೆ ಕರ್ತವ್ಯ ನಿರ್ವಹಿಸುವುದು, ಭಾನುವಾರ ಮಾತ್ರ ಪರಿಸರ ಪ್ರೇಮ ತಂಡದೊಂದಿಗೆ ಸಮಾಜದ ಋಣ ತೀರುವ ಕಾರ್ಯ ಮಾಡುತ್ತಿದ್ದೇನೆ. ಈ ಕಾರ್ಯ ನನಗೆ ಹೆಮ್ಮೆ, ಸಮಾಧಾನ ತಂದಿದೆ ಎನ್ನುತ್ತಾರೆ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಪಾಯಿ ದಂಗೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಜನಸಾಮಾನ್ಯರಿಗೂ ಶಿಕ್ಷಣ ಸಿಗುತ್ತಿರುವುದೇ ದೊಡ್ಡ ಬದಲಾವಣೆ: ಶಾಸಕ ಮಾನೆ