ಮಾನವನ ಬದುಕು ಸದಾ ಉತ್ಸಾಹದಿಂದ ತುಂಬಿರಲಿ: ಗವಿಸಿದ್ದೇಶ್ವರ ಶ್ರೀ

KannadaprabhaNewsNetwork |  
Published : Aug 17, 2026, 02:30 AM IST
ಹುಬ್ಬಳ್ಳಿ ಗೋಕುಲ ರಸ್ತೆಯ ಅರ್ಜುನ ವಿಹಾರದಲ್ಲಿ ನೂತನವಾಗಿ ನಿರ್ಮಿಸಿದ ಮಂಜುನಾಥೇಶ್ವರ ದೇವಸ್ಥಾನ ಉದ್ಘಾಟಿಸಿದ ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಮಾನವನ ಬದುಕು ನಿರುತ್ಸಾಹದಿಂದ ಕೂಡಿರಬಾರದು. ಅದು ಉತ್ಸವವಾಬೇಕು, ಸಂತೋಷ ನೆಮ್ಮದಿಗಳು ತುಂಬಿರಬೇಕು.

ಹುಬ್ಬಳ್ಳಿ: ಮಾನವನ ಬದುಕು ನಿರುತ್ಸಾಹದಿಂದ ಕೂಡಿರಬಾರದು. ಅದು ಉತ್ಸವವಾಬೇಕು, ಸಂತೋಷ ನೆಮ್ಮದಿಗಳು ತುಂಬಿರಬೇಕು. ಅಂದಾಗಲೇ ಸಾರ್ಥಕ ಎಂದು ಕೊಪ್ಪಳ ಗವಿಮಠದ ಅಭಿನವ ಸಿದ್ದೇಶ್ವರ ಶ್ರೀಗಳು ಹೇಳಿದರು.

ಅವರು ಭಾನುವಾರ ಇಲ್ಲಿಯ ಗೋಕುಲ ರಸ್ತೆಯ ಅರ್ಜುನ ವಿಹಾರದಲ್ಲಿ ನೂತನವಾಗಿ ನಿರ್ಮಿಸಿದ ಮಂಜುನಾಥೇಶ್ವರ ದೇವಸ್ಥಾನ ಉದ್ಘಾಟನೆ, ಈಶ್ವರ, ನಂದಿಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ದೇವರು ಯಾವುದೇ ಗ್ಯಾರಂಟಿಯಿಲ್ಲದೇ ಅನುಗ್ರಹಿಸಿರುವ ಮನುಷ್ಯ ಜೀವನವನ್ನು ವ್ಯರ್ಥವಾಗಿ ಕಳೆಯದೇ ದೀಪದ ಹಾಗೆ ಜೀವನ ನಡೆಸಬೇಕು. ಅರುಣೋದಯ ಕಾಲದಲ್ಲಿ ಇಬ್ಬನಿ ಬಿದ್ದಾಗ ಹುಲ್ಲುಗರಿಕೆಯ ಮೇಲಿನ ಮಳೆ ಹನಿ ಬಂಗಾರದ ಹಾಗೆ ಹೊಳೆಯುವುದು. ಆದರೆ, ಗಾಳಿ ಬೀಸಿದಾಗ ಮಣ್ಣಿಗೆ ಬೀಳುವುದು. ದೀಪವು ಹೊತ್ತಿದಾಗ ಬೆಳಕು ಬೀರುವುದು. ಗಾಳಿ ಬೀಸಿದರೆ ಆರಿ ಹೋಗುವುದು. ಯಾವಾಗ ಗಾಳಿ ಬೀಸುವುದೋ ಬಲ್ಲವರಾರು. ಮಾನವನ ಬದುಕು ಕೂಡ ಹೀಗೆಯೇ ಎಂದು ಜೀವ ಹೋಗುವುದೋ ಯಾರಿಗೂ ತಿಳಿದಿಲ್ಲ. ದೀಪವು ಆರುವ ಮುನ್ನ ಇತರ ನೂರಾರು ದೀಪಗಳನ್ನು ಬೆಳಗಿಸುವುದು. ಹಾಗೆ ಮನುಷ್ಯರು ತಮ್ಮ ಜೀವ ಹೋಗುವ ಮುನ್ನ ಇತರರಿಗೆ ನೆರವಾಗಿ ನಿಲ್ಲಬೇಕು ಎಂದರು.

ಮಾನವರು ಬದುಕಿನಲ್ಲಿ ಸನ್ನಡತೆಯನ್ನು ರೂಢಿಸಿಕೊಳ್ಳಬೇಕು. ಮನಸ್ಸು ತಾಪಕ್ಕೆ ಒಳಗಾಗದೇ ತಣ್ಣಗಿರಬೇಕು. ಹೆಚ್ಚಾಗಿ ಹೃದಯದಲ್ಲಿ ಪ್ರೀತಿಯಿರಬೇಕು. ಇದೇ ಜೀವನ ಎಂದವರು ಬಣ್ಣಿಸಿದರು.

ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ಮುಖ್ಯಸ್ಥ ಗೋವಿಂದರಡ್ಡಿ ಅಳವಂಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅರವಿಂದ ಬೆಲ್ಲದ, ಸಮಿತಿ ಉಪಾಧ್ಯಕ್ಷ ರುದ್ರಪ್ಪ ಚಿನ್ನಶೆಟ್ಟಿ, ಅರ್ಜುನ ವಿಹಾರ ಅಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಟಿ. ಜೋಗಳೇಕರ ಸೇರಿದಂತೆ ಹಲವರಿದ್ದರು.

ಇದೇ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಮಕ್ಕಳು ಭಕ್ತಿಗೀತೆ ಹಾಡಿ, ಭರತನಾಟ್ಯ ಪ್ರಸ್ತುತಪಡಿಸಿದರು. ಸರಸ್ವತಿ ಹೆಗಡೆ ಪ್ರಾರ್ಥಿಸಿದರು. ಕವಿತಾ ಪೂಜಾರಿ, ಮಂಗಳಾ ನಾಯಕ ಸ್ವಾಗತ ಗೀತೆ ಹಾಡಿದರು. ವಿಠ್ಠಲ ಪರಂಗಿ ಸ್ವಾಗತಿಸಿದರು. ಡಾ. ಸಾಬಣ್ಣವರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಪಾಯಿ ದಂಗೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಜನಸಾಮಾನ್ಯರಿಗೂ ಶಿಕ್ಷಣ ಸಿಗುತ್ತಿರುವುದೇ ದೊಡ್ಡ ಬದಲಾವಣೆ: ಶಾಸಕ ಮಾನೆ