ಸಹಕಾರ ಕ್ಷೇತ್ರವನ್ನು ಉಳಿಸಿ, ಚುನಾವಣೆ ನಡೆಸಿ ಎನ್ನುವ ಸ್ಪಷ್ಟ ಸಂದೇಶ ನೀಡಿದೆ

KannadaprabhaNewsNetwork | Published : Mar 24, 2025 12:35 AM

ಸಾರಾಂಶ

ರಾಜ್ಯಾದ್ಯಂತ ಸಹಕಾರ ಸಂಘಗಳ ಚುನಾವಣೆ ನಡೆಯದಂತೆ ಇಲ್ಲಸಲ್ಲದ ನೆಪವೊಡ್ಡಿ ತಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಹುಣಸೂರುಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಫಲಿತಾಂಶವು ರಾಜ್ಯ ಸರ್ಕಾರಕ್ಕೆ ಸಹಕಾರ ಕ್ಷೇತ್ರವನ್ನು ಉಳಿಸಿ, ಚುನಾವಣೆ ನಡೆಸಿ ಎನ್ನುವ ಸ್ಪಷ್ಟ ಸಂದೇಶ ನೀಡಿದೆ ಎಂದು ಶಾಸಕ ಜಿ.ಡಿ. ಹರೀಶ್‌ ಗೌಡ ಅಭಿಪ್ರಾಯಪಟ್ಟರು.ಶನಿವಾರ ನಡೆದ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಎಲ್ಲ 12 ಕ್ಷೇತ್ರಗಳಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ ನಂತರ ಮಾಧ್ಯಮದೊಂದಿಗೆ ಅವರು ಮಾತನಾಡಿದರು.ರಾಜ್ಯಾದ್ಯಂತ ಸಹಕಾರ ಸಂಘಗಳ ಚುನಾವಣೆ ನಡೆಯದಂತೆ ಇಲ್ಲಸಲ್ಲದ ನೆಪವೊಡ್ಡಿ ತಡೆಯುತ್ತಿದೆ. ಮೈಸೂರು ಜಿಲ್ಲೆಯ ಎಂಡಿಸಿಸಿ ಬ್ಯಾಂಕ್‌ ಗೆ ಅವಧಿ ಮುಗಿದು 13 ತಿಂಗಳಾದರೂ ಚುನಾವಣೆ ಮಾಡುತ್ತಿಲ್ಲ. ಹುಣಸೂರು ತಾಲೂಕಿನಲ್ಲಿ 27 ಸೊಸೈಟಿಗಳ ಪೈಕಿ 12 ಕ್ಕೂ ಹೆಚ್ಚು ಸೊಸೈಟಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಕುಳಿತಿದ್ದಾರೆ. ಎಂಡಿಸಿಸಿ ಬ್ಯಾಂಕ್‌ ನಲ್ಲಿ ಕೋಟ್ಯಂತರ ರು. ಭ್ರಷ್ಟಾಚಾರ ನಡೆಸಿರುವ ಅಧಿಕಾರಿಗಳನ್ನೇ ಮತ್ತೆ ತಂದು ಆಯಕಟ್ಟಿನ ಜಾಗದಲ್ಲಿ ಕೂರಿಸಿದ್ದಾರೆ. ನಮ್ಮ ಅವಧಿಯಲ್ಲಿ 300 ಕೋಟಿ ರು.ಇದ್ದ ಡಿಪಾಸಿಟ್ ಹಣ ಒಂದು ಸಾವಿರ ಕೋಟಿ ರು.ಗಳಿಗೆ ಏರಿಸಿದ್ದೆ. ಸಾಲ ಸೌಲಭ್ಯ ಮೊತ್ತ 600 ಕೋಟಿ ರು. ಗಳಿದ್ದದ್ದು, 1,600 ಕೋಟಿ ರು.ಗಳಿಗೆ ಏರಿಸಿದ್ದೆ. 40 ಸಾವಿರ ರೈತರಿಗೆ ದೊರಕುತ್ತಿದ್ದ ಸಾಲ ಸೌಲಭ್ಯವನ್ನು 1.50 ಲಕ್ಷ ರೈತರಿಗೆ ದೊರೆಯುವಂತೆ ಮಾಡಿದ್ದೆ. ಇದೀಗ ಎಂಡಿಸಿಸಿ ಅಧಃಪತನದತ್ತ ಸಾಗುತ್ತಿದೆ. ಡಿಪಾಸಿಟ್ 800 ಕೋಟಿ ರು. ಗಳಿಗೆ ಇಳಿದಿದೆ. ನಬಾರ್ಡ್ ಕೇವಲ 125 ಕೋಟಿ ರು.ಗಳ ಸಾಲ ನೀಡುತ್ತಿದೆ. ಸಾಲ ಮರುಪಾವತಿ ಮಾಡಿದವರಿಗೆ ಮರು ಸಾಲ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಎಲ್ಲವೂ ಪಕ್ಷಪಾತ, ದ್ವೇಷ, ಅಸೂಯೆಸಹಕಾರ ಕ್ಷೇತ್ರದ ಅವ್ಯವಸ್ಥೆ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಒಟ್ಟು 5 ಬಾರಿ ಪ್ರಶ್ನೆಗಳನ್ನು ಕೇಳಿದ್ದೇನೆ. ಈವರೆಗೆ ಸಹಕಾರ ಮಂತ್ರಿ ಉತ್ತರಿಸಿಲ್ಲ. ಎಲ್ಲವೂ ಪಕ್ಷಪಾತ, ದ್ವೇಷ, ಅಸೂಯೆ, ಪ್ರಜಾಪ್ರಭುತ್ವ ವಿರೋಧಿ ನಡೆಗಳೇ ತುಂಬಿದರೆ ಯಾವ ಸಾಧನೆ ಸಾಧ್ಯ. ಸಂವಿಧಾನವನ್ನು ಪಠಿಸುವ ಈ ನಾಯಕರು ಎಲ್ಲವನ್ನು ಪ್ರಜಾತಂತ್ರ ವಿರೋಧಿ ನಡೆಯನ್ನೇ ಅನುಸರಿಸುತ್ತಿದ್ದಾರೆ. ಅದೆಲ್ಲದಕ್ಕೂ ಇಂದಿನ ಕಸಬಾ ಚುನಾವಣೆಯಲ್ಲಿ ಸಹಕಾರಿಗಳು ಸ್ಪಷ್ಟ ಉತ್ತರ ನೀಡಿದ್ದಾರೆ. ಸಹಕಾರಿಗಳಿಗೆ ಜಾತಿ, ಮತವಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಪಕ್ಷ ಬೆಂಬಲಿತ ಎಲ್ಲ ಸದಸ್ಯರು ಗೆದ್ದಿರುವುದು ನನಗೆ ಹೆಮ್ಮೆ ತಂದಿದ್ದು, ಗೆಲುವಿಗಾಗಿ ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದರು. ಸಾಕಪ್ಪ ಹುಣಸೂರಿನ ಸಹವಾಸ ಹುಣಸೂರಿನಲ್ಲಿ ಕಳೆದ 15 ವರ್ಷಗಳಿಂದ ಆಡಳಿತ ನಡೆಸಿದ ಪಕ್ಷದ ನಾಯಕರು ಇದೀಗ ಹುಣಸೂರು ಅಭಿವೃದ್ಧಿಗೆ ತಡೆಯೊಡ್ಡುತ್ತಿರುವುದು ವಿಷಾದನೀಯ ಸಂಗತಿ. ಅವರನ್ನು ಜನರು ಯಾವ ಸ್ಥಾನದಲ್ಲಿಟ್ಟಿದ್ದರು ಎನ್ನುವುದನ್ನು ಅರಿತುಕೊಳ್ಳಬೇಕು. ಕಾಲೇಜು ಅಭಿವೃದ್ಧಿ ಸಮಿತಿ ರಚನೆ ವಿಚಾರದಲ್ಲೂ ಸಣ್ಣತನದ ರಾಜಕಾರಣ ಮಾಡುತ್ತಾರೆಂದರೆ ಏನು ಹೇಳೋಣ? ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಸಚಿವರನ್ನು ಅಧಿಕಾರಿಗಳನ್ನು ಭೇಟಿ ಮಾಡಿದಾಗ, ಸಾಕಪ್ಪ ನಿಮ್ಮ ಹುಣಸೂರು ಸಹವಾಸ ಎನ್ನುತ್ತಾರೆ. ಏಕೆಂದು ಕೇಳಿದರೆ ಯಾವುದೆ ಅಭಿವೃದ್ಧಿ ಕಾರ್ಯ ಹುಣಸೂರಿನಲ್ಲಿ ಆಗಬಾರದು ಎಂದು ತಡೆಯೊಡ್ಡುವ, ಒತ್ತಡ ಹೇರುವವರು ಇದ್ದಾರಪ್ಪ ಎಂದು ನಿಟ್ಟುಸಿರು ಬಿಡುತ್ತಾರೆ. ಇದು ಸರಿನಾ ಎಂದು ಬೇಸರ ವ್ಯಕ್ತಪಡಿಸಿ, ಇದು ಹೀಗೆ ಮುಂದುವರೆದರೆ ಇಂದಿನ ಕಸಬಾ ಸೊಸೈಟಿ ಚುನಾವಣೆಯ ಫಲಿತಾಂಶವೇ ಮುಂದಿನ ದಿನಗಳಲ್ಲಿ ಅವರಿಗೂ ತಟ್ಟಲಿದೆ ಎನ್ನುವುದನ್ನು ಅರಿತರೆ ಒಳ್ಳೆಯದು ಎಂದು ಎಚ್ಚರಿಸಿದರು. ಭ್ರಷ್ಟಾಚಾರಿ ಅಧಿಕಾರಿಗಳನ್ನು ಬಯಲಿಗೆಳೆಯಲಿದ್ದೇನೆ ಹುಣಸೂರು ತಾಲೂಕಿನ ಸಹಕಾರಿ ಕ್ಷೇತ್ರದಲ್ಲಿ ಭಷ್ಟ ಅಧಿಕಾರಿಗಳ ಭ್ರಷ್ಟತನದ ಕುರಿತು ದಾಖಲೆಗಳು ನನ್ನಲ್ಲಿವೆ. ಅವರ ಭ್ರಷ್ಟಾಚಾರದ ಕರ್ಮಕಾಂಡವನ್ನು ಶೀಘ್ರದಲ್ಲಿ ದಾಖಲೆ ಸಮೇತ ಬಿಡುಗಡೆಗೊಳಿಸಲಿದ್ದೇನೆ. ಈ ಕುರಿತು ವಿಧಾನಸಭೆಯಲ್ಲೇ ಮಾತನಾಡಬೇಕೆಂದಿದ್ದೆ. ಆದರೆ ಸಭೆಯಲ್ಲಿ ಕೋಲಾಹಲ ಎದ್ದ ಕಾರಣ ಅವಕಾಶ ಸಿಗಲಿಲ್ಲ ಎಂದು ಅವರು ತಿಳಿಸಿದರು. ತಾಲೂಕಿನ ಅಭಿವೃದ್ಧಿಯೊಂದೇ ನನ್ನ ಗುರಿಯಾಗಿದ್ದು, ಇದಕ್ಕಾಗಿ ಯಾವ ಮಟ್ಟದ ಹೋರಾಟಕ್ಕೂ ಸಿದ್ಧನಿದ್ದೇನೆ ಎಂದು ವಿರೋಧಿಗಳಿಗೆ ಅವರು ಚಾಟಿ ಬೀಸಿದರು.

Share this article