ಬಸವಕಲ್ಯಾಣ (ಹುಲಸೂರ): ಕನ್ನಡ ಸಾಹಿತ್ಯ ಪರಿಷತ್ತು ದೇಶದಲ್ಲಿಯೇ ಅತಿ ಹೆಚ್ಚು ಸದಸ್ಯರು ಹೊಂದಿರುವ ಏಕೈಕ ಸಂಘಟನೆ ಆಗಿದೆ. ಇನ್ನೂ ಹೆಚ್ಚಿನ ಸದಸ್ಯರನ್ನು ನೋಂದಣಿ ಮಾಡಿಸಿಕೊಳ್ಳು ಕೆಲಸ ನಡೆಯಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ ತಿಳಿಸಿದರು. ಪಟ್ಟಣದ ಗುರು ಬಸವೇಶ್ವರ ಸಂಸ್ಥಾನ ಮಠ ಆವರಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಸಾಪ ತಾಲೂಕು ಘಟಕದಿಂದ ನಿರಂತರ ಚಟುವಟಿಕೆಗಳು ನಡೆಯಬೇಕು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡ ಭಾಷೆಯ ಮಹತ್ವ ಅರಿಯುವಂತೆ ಅವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಪದಾಧಿಕಾರಿಗಳು, ಸದಸ್ಯರು ಶ್ರಮವಹಿಸಿಬೇಕು ಎಂದು ತಿಳಿಸಿದರು. ತಾಲ್ಲೂಕು ಸಮ್ಮೇಳನ, ವಲಯ ಸಮ್ಮೇಳನ ಯಾವ ರೀತಿ ನಡೆಯಬೇಕು ಎಂದು ಚರ್ಚೆ ನಡೆಸಿದ ಅವರು, ಸ್ಥಳೀಯ ಸಂಸ್ಥೆ ನೆರವಿನೊಂದಿಗೆ ಪ್ರತಿಯೊಂದು ತಾಲೂಕಿನಲ್ಲಿ ಕಸಾಪ ಸ್ವಂತ ಭವನ ನಿರ್ಮಾಣ ಕಾರ್ಯ ಆರಂಭ ಆಗಬೇಕು ಎಂದರು. ಈ ಹಿಂದಿನ ಕಸಾಪ ಸದಸ್ಯರ ಪಟ್ಟಿ ಪರಿಷ್ಕರಣೆಗೊಳ್ಳಲಿದ್ದು ಮರಣ ಹೊಂದಿದ ಸದಸ್ಯರ ಹೆಸರು ಕಡಿತ, ಸದಸ್ಯರ ಹೆಸರು, ವಿಳಾಸ ಪಟ್ಟಿ ವರ್ಗಾವಣೆ, ಸದಸ್ಯರ ಹೆಸರು ತಿದ್ದುಪಡಿ ಸೇರಿದಂತೆ ಅನೇಕ ರೀತಿಯ ಇರುವ ದೋಷಗಳನ್ನು ಸರಿಪಡಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದರು. ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ, ಉಪಾಧ್ಯಕ್ಷ ಬಸವಕುಮಾರ ಕವಟೆ ಮಾತನಾಡಿ, ರಾಜ್ಯೋತ್ಸವ ವಿಶೇಷವಾಗಿ ಆಚರಿಸಲಾಗುತ್ತದೆ ಹಾಗೂ ಸದಸ್ಯತ್ವವನ್ನು ಹೆಚ್ಚಿಗೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮನೋಹರ ಮಾಳಗೆ, ದೀಪಕ ಪಾಟೀಲ,ನಾಗೇಶ ಮೇತ್ರೆ, ರೇಖಾ ಕಾಡಾದಿ,ರಾಜಶೇಖರ ಪಾಟೀಲ, ಮಲ್ಲಿಕಾರ್ಜುನ ದೇವಪ್ಪ, ದತ್ತಾತ್ರೆಯ ಪಾಟೀಲ, ಇಸ್ಮಾಯಿಲ್, ರೇವಣ ಚಿಲ್ಲಬಟ್ಟೆ, ಯುವರಾಜ ಬಿರಾದರ, ಧರ್ಮೇಂದ್ರ ಭೋಸ್ಲೆ ಮುಂತಾದವರು ಉಪಸ್ಥಿತರಿದ್ದರು.