ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ ಎನ್‌ಡಿಎ ಜತೆ ಮೈತ್ರಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಮೊದಲಾಗಿ ಜೆಡಿಎಸ್‌ನ ೧೯ ಎಂಎಲ್‌ಎ, ೮ ಎಂಎಲ್‌ಸಿಗಳು, ಪಕ್ಷದ ಅಧ್ಯಕ್ಷ ಇಬ್ರಾಹಿಂ ಅವರ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿದ್ದು, ಬಳಿಕ ಅವರು ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ, ರಾಜ್ಯ ಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು. ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಅಮಿತ್ ಷಾ ಜೊತೆ ಮಾತುಕತೆಯಲ್ಲಿ ಹಿಂದಿನ ನಾಲ್ಕು ಚುನಾವಣೆಯ ಮತಗಳಿಕೆ ಒಟ್ಟುಗೂಡಿಸಿ ಒಂದು ನಿರ್ಧಾರಕ್ಕೆ ಬರಲಾಗಿದೆ. ಸೀಟು ಹಂಚಿಕೆ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಷ್ಟೆ. ದಸರಾ ಕಳೆದು ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ. ನನ್ನ ಆರೋಗ್ಯ ಸುಧಾರಿಸಿದರೆ ನಾನು ಅಥವಾ ಕುಮಾರಸ್ವಾಮಿ, ಅಮಿತ್ ಷಾ ಜೊತೆ ಚರ್ಚಿಸಲಿದ್ದೇವೆ ಎಂದರು. ಮಂಡ್ಯ ಸೇರಿದಂತೆ ಯಾವುದೇ ಕ್ಷೇತ್ರಗಳ ಬಗ್ಗೆ ಅಂತಿಮಗೊಂಡಿಲ್ಲ. ಸದ್ಯ ಹಾಸನ ಜೆಡಿಎಸ್, ರಾಮನಗರ ಕಾಂಗ್ರೆಸ್ ಕೈಯಲ್ಲಿದೆ. ಉಳಿದೆಡೆ ಬಿಜೆಪಿಯೇ ಇದೆ. ಕಾಂಗ್ರೆಸ್ ೨೮ ಕ್ಷೇತ್ರ ಗೆಲ್ಲುವ ವಿಶ್ವಾಸದಲ್ಲಿದ್ದಾರೆ, ಆ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಒಂದುಗೂಡಿ ಹೋಗುವ ನಿರ್ಧಾರಕ್ಕೆ ಬಂದಿದ್ದೇವೆ. ಜಾತಿ ಆಧಾರದ ಮೇಲೆ ಮತಗಳು ಹೇಗೆ ವಿಭಜನೆ ಆಗುತ್ತದೆ ಎನ್ನುವ ಬಗ್ಗೆ ನಾನು ಇವತ್ತು ವಾದ ಮಾಡಲ್ಲ. ಮತದಾರರ ತೀರ್ಮಾನ ಹೇಗಿದರಲಿದೆ ನೋಡಬೇಕಷ್ಟೆ ಎಂದರು. * ಸರ್ಕಾರ ಮುಂಜಾಗ್ರತೆ ವಹಿಸಬೇಕಾಗಿತ್ತು ಶಿವಮೊಗ್ಗ ಘಟನೆ ಬಗ್ಗೆ ಈಗಾಗಲೇ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಘಟನೆ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಾರೆ. ಮಾಧ್ಯಮದಲ್ಲಿ ಬಂದಿರುವುದನ್ನು ಕೇಳಿದ್ದೇನೆ ಹೊರತು ವಾಸ್ತವಾಂಶ ತಿಳಿದಿಲ್ಲ. ಶಿವಮೊಗ್ಗ ಸೆನ್ಸಿಟಿವ್ ಏರಿಯಾ. ಶಿವಮೊಗ್ಗದಲ್ಲಿ ಹಿಂದಿನ ಹಲವಾರು ಘಟನೆಗಳನ್ನು ಗಮನಿಸಿದಾಗ ಇಂತಹ ವಿಷಯಗಳಲ್ಲಿ ಸರ್ಕಾರ ಮುಂಜಾಗ್ರತೆ ವಹಿಸಬೇಕು ಎಂದರು. ಈ ಸಂದರ್ಭ ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ ಸೇರಿದಂತೆ ಪ್ರಮುಖರು ಜತೆಗಿದ್ದರು.