ಸಾಂಪ್ರದಾಯಕ ಉಡುಗೆ ತೊಟ್ಟು ರೈತರಿಂದ ಪ್ರತಿಭಟನೆ

KannadaprabhaNewsNetwork | Published : Oct 10, 2023 1:00 AM

ಸಾರಾಂಶ

ಸಾಂಪ್ರದಾಯಕ ಉಡುಗೆ ತೊಟ್ಟು ರೈತರಿಂದ ಪ್ರತಿಭಟನೆ
- ಕಾವೇರಿ ಹೋರಾಟಕ್ಕೆ 50 ದಿನ... ಗಮನ ಸೆಳೆದ ವಿಭಿನ್ನ ಪ್ರತಿಭಟನೆ ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ರೈತರು ಕೈಯಲ್ಲಿ ನೇಣಿನ ಕುಣಿಕೆ, ಒನಕೆ, ಬಾರುಕೋಲು ಹಿಡಿದು ಗಂಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು. ಭೂಮಿತಾಯಿ ಹೋರಾಟ ಸಮಿತಿಯಿಂದ ಕೆ.ಎಸ್.ನಂಜುಂಡೇಗೌಡ ಹಾಗೂ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ನೂರಾರು ರೈತರು ಸತತವಾಗಿ 50 ದಿನಗಳಿಂದ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೂ ಸೋಮವಾರವೂ ಸಹ ವಿಶೇಷ ರೀತಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ಬಿಳಿ ಷರ್ಟು ಮತ್ತು ಬಿಳಿ ಪಂಚೆ ಧರಿಸಿ ಪಟ್ಟಣದ ಕುವೆಂಪು ವೃತ್ತದಿಂದ ಮುಖ್ಯರಸ್ತೆ ಮಾರ್ಗವಾಗಿ ತಾಲೂಕು ಕಚೇರಿ ವರೆಗೂ ಪ್ರತಿಭಟನಾ ಧರಣಿ ನಡೆಸಿ ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಪ್ರಾಧಿಕಾರದ ವಿರುದ್ದ ಘೋಷಣೆ ಕೂಗಿದರು. ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ, ಇದೀಗ ರೈತರಿಗೆ ನಾಲೆಗಳಿಗೆ ನೀರು ಹರಿಸೋದಿಲ್ಲ ಎನ್ನುತ್ತಿದೆ. ಆದರೆ ತಮಿಳುನಾಡಿಗೆ ಮೂರನೇ ಬೆಳೆಗೆ ನೀರು ಬಿಡುವ ಮೂಲಕ ನಮ್ಮ ರೈತರಿಗೆ ನೇಣಿನ ಭಾಗ್ಯ ನೀಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಕಚೇರಿ ಎದುರು ಸುಮಾರು ಒಂದು ಗಂಟೆಗೂ ಅಧಿಕ ಸಮಯ ಪ್ರತಿಭಟನೆ ನಡೆಸಿದ ರೈತರು 50 ದಿನಗಳಲ್ಲಿ ನಿರಂತರವಾಗಿ ಮಾಡುತ್ತಾ ಬಂದಿರುವ ಹೋರಾಟಗಳ ತುಣುಕನ್ನು ನೆನಪಿಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ಬೆಳೆಗಳಿಗೆ ನೀರು ಬಿಡಬೇಕು ಎಂದು ಕೆ.ಎಸ್.ನಂಜುಂಡೇಗೌಡ ಒತ್ತಾಯಿಸಿದರು. 9ಕೆಎಂಎನ್ ಡಿ25 ಶ್ರೀರಂಗಪಟ್ಟಣದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

Share this article