ಕನ್ನಡ ಶಾಲೆಗಳಿಗೆ ಮೂಲಸೌಕರ್ಯ ಒತ್ತಾಯಿಸಿ ಸರ್ಕಾರದ ವಿರುದ್ಧ ಪಿಎಲ್‌ಗೆ ಕಸಾಪ ನಿರ್ಧಾರ: ಡಾ.ಮಹೇಶ್‌ ಜೋಶಿ

KannadaprabhaNewsNetwork | Published : Dec 6, 2023 1:15 AM

ಸಾರಾಂಶ

ಕನ್ನಡ ಮಾಧ್ಯಮ ಶಾಲೆಗಳಿಗೆ ಮೂಲ ಸೌಕರ್ಯ ಬೇಡಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಪಿಲ್ಲ್‌ ಸಲ್ಲಿಸಲು ಕಸಾಪ ನಿರ್ಧಾರ

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದಲ್ಲಿ ಸರ್ಕಾರ ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಆಗ್ರಹಿಸಿ ಸರ್ಕಾರಕ್ಕೆ ನಿರ್ದೇಶನ ನೀಡುವ ಸಲುವಾಗಿ ರಾಜ್ಯ ಹೈಕೋರ್ಟ್‌ಗೆ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸಾರ್ವಜನಿಕ ಹಿತಾಸಕ್ತಿ(ಪಿಎಲ್‌) ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ. ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ, ನಾಡೋಜ ಡಾ.ಮಹೇಶ್‌ ಜೋಶಿ, ಈ ಬಗ್ಗೆ ಡಿ.13ರಂದು ಬೆಂಗಳೂರಿನಲ್ಲಿ ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು, ಕನ್ನಡ ಪರ ಸಂಘಟನೆಗಳು, ಹೋರಾಟಗಾರರನ್ನು ಒಳಗೊಂಡಂತೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಪ್ರಸಕ್ತ 27 ಸಾವಿರ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯದ ಕೊರತೆ ಇದೆ. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯವೇ ಇಲ್ಲ ಎಂದಾದರೆ ಮತ್ತೆ ಮಕ್ಕಳು ಬರುವುದನ್ನು ಹೇಗೆ ನಿರೀಕ್ಷಿಸಲು ಸಾಧ್ಯ. ಹಾಗಾಗಿ ಕನ್ನಡ ಪರ ಚಿಂತಕರೊಂದಿಗೆ ಚರ್ಚಿಸಿ ತ್ವರಿತ ಮೂಲಸೌಕರ್ಯಕ್ಕೆ ಒತ್ತಾಯಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ವಿಧೇಯಕ ಜಾರಿಗೊಳಿಸಿ: ಹಿಂದಿನ ಸರ್ಕಾರ ಸಮಗ್ರ ಕನ್ನಡ ಅಭಿವೃದ್ಧಿ ವಿಧೇಯಕವನ್ನು ರಚಿಸಿತ್ತು. ಅದಕ್ಕೆ ರಾಜ್ಯಪಾಲರ ಅನುಮೋದನೆಯೂ ಸಿಕ್ಕಿತ್ತು. ಆದರೆ ಸರ್ಕಾರ ಬದಲಾದರೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದರು. ಈ ವಿಧೇಯಕದಲ್ಲಿ ಕನ್ನಡ ಕಡ್ಡಾಯ ಅನುಷ್ಠಾನಗೊಳ್ಳದಿದ್ದರೆ ಶಿಸ್ತು ಹಾಗೂ ದಂಡ ವಿಧಿಸಲು ಅವಕಾಶ ಇದೆ. ಇದು ಜಾರಿಯಾದರೆ ವಾಣಿಜ್ಯ, ಔದ್ಯೋಗಿಕ, ನ್ಯಾಯಾಂಗ ಮತ್ತಿತರ ಕ್ಷೇತ್ರದಲ್ಲಿ ಕನ್ನಡ ಬಳಕೆ ಕಡ್ಡಾಯವಾಗಿ ಅನುಷ್ಠಾನಗೊಳ್ಳಲಿದ್ದರೆ, ದಂಡನೆಗೆ ಒಳಪಡಿಸುವ ಅವಕಾಶ ನೀಡಲಾಗಿದೆ. ಇದನ್ನು ಕೂಡಲೇ ಜಾರಿಗೆ ತರುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಗಿದೆ ಎಂದರು.ಸರ್ಕಾರಕ್ಕೆ ಕಸಾಪ ಪತ್ರ ಬರೆದರೂ ಉತ್ತರ ಇಲ್ಲ: ಡಾ.ಜೋಶಿ ಅಸಮಾಧಾನಮಂಡ್ಯದಲ್ಲಿ ಈ ಬಾರಿ ನಡೆಯಬೇಕಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರ ಕಾರಣಕ್ಕೆ 2024ಕ್ಕೆ ಮುಂದೂಡಲಾಗಿದೆ. ಅಲ್ಲದೆ ಕನ್ನಡ ಚಟುವಟಿಕೆಗಳಿಗೆ ಪೂರಕವಾಗಿ ಬಜೆಟ್‌ನಲ್ಲಿ ಅನುದಾನ ಒದಗಿಸಿಲ್ಲ. ಸಮ್ಮೇಳನ ವಿಚಾರದಲ್ಲೂ ಕನ್ನಡ ಸಾಹಿತ್ಯ ಪರಿಷತ್‌ ಜತೆ ಸರ್ಕಾರ ಚರ್ಚೆ ನಡೆಸಿಲ್ಲ. ಈ ಕುರಿತಂತೆ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಪತ್ರ ಬರೆದರೂ ಉತ್ತರ ಇಲ್ಲ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. ಕಸಾಪ ಅಧ್ಯಕ್ಷನಾದ ನಾನು ಸಿಎಂ ಮನೆ ಬಾಗಿಲು ಕಾಯುವವನಲ್ಲ. ಈ ಹಿಂದಿನ ಎಲ್ಲ ಸಿಎಂಗಳು ಕಸಾಪಕ್ಕೆ ಗೌರವ ನೀಡುತ್ತಿದ್ದರು. ಸೂಕ್ತ ಸಮಯದಲ್ಲಿ ಅನುದಾನ ಕೂಡ ನೀಡುತ್ತಿದ್ದರು. ಈಗಿನ ಸಿಎಂ ಅವರು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದರು. ಹಾಗಾಗಿ ಅವರ ಕನ್ನಡಪ್ರೇಮದ ಬಗ್ಗೆ ಅಪಾರ ಗೌರವವಿದೆ. ಆದರೂ ಅವರು ಸಾಹಿತ್ಯ ಪರಿಷತ್‌ಗೆ ಇದುವರೆಗೆ ಭೇಟಿ ನೀಡಿಲ್ಲ. ನಾನು ಆಹ್ವಾನಿಸಿದರೂ ಬರುತ್ತಿಲ್ಲ ಎಂದರು.

Share this article