ಮೂಲ್ಕಿ: ಕನ್ನಡ ಹಾಗೂ ಸಾಹಿತ್ಯದ ಬೆಳವಣಿಗೆಯ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದ್ದು, ಮೂಲ್ಕಿ ತಾಲೂಕು ಘಟಕ ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದೆ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ಆಯೋಜನೆಯಲ್ಲಿ ಕಟೀಲು ಸರಸ್ವತೀ ಸದನದಲ್ಲಿ ಜರುಗಿದ ಕುಮಾರವ್ಯಾಸ ರಚಿತ ಕರ್ಣಾಟಕ ಭಾರತ ಕಥಾಮಂಜರಿ ಕಾವ್ಯದ ಕರ್ಣಬೇಧನ ಭಾಗದ ಗಮಕ ವಾಚನ ವ್ಯಾಖ್ಯಾನ ಹಾಗೂ ಕುಮಾರವ್ಯಾಸ ಭಾರತ ಗ್ರಂಥಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟೀಲು ದೇವಳದ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಮಾತನಾಡಿ, ಸಾಹಿತ್ಯ ಬರೆಯಬೇಕಾದರೆ ಓದಬೇಕು. ಓದಿದಷ್ಟೂ ಮತ್ತು ಬರೆದಷ್ಟೋ ನಮ್ಮಲ್ಲಿನ ಅಧ್ಯಯನದ ಗುಣ, ಜ್ಞಾನದ ಆಳ ಹೆಚ್ಚುತ್ತ ನಮ್ಮ ವ್ಯಕ್ತಿತ್ವ ಎತ್ತರಕ್ಕೇರುತ್ತದೆ ಎಂದು ಹೇಳಿದರು.
ಸಾಹಿತಿ ಡಾ. ಬಿ. ಜನಾರ್ದನ ಭಟ್ ಮಾತನಾಡಿ, ಹಿಂದೆ ತಾಳೆಗರಿಯಲ್ಲಿ ಬರೆಯಿಸಿ, ಒಂದು ಸಾವಿರ ಗ್ರಂಥಗಳನ್ನು ದಾನ ಮಾಡಿ ದಾನಚಿಂತಾಮಣಿ ಅತ್ತಿಮಬ್ಬೆ ಎಂದು ಖ್ಯಾತಿ ಪಡೆದಂತೆ ಪುಸ್ತಕ ದಾನ ಒಳ್ಳೆಯ ಬೆಳವಣಿಗೆ. ಮೂಲ್ಕಿ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮಗಳಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿದೆಯೆಂದು ತಿಳಿಸಿದರು. ವಿದ್ವಾಂಸ ಅಜಾರು ನಾಗರಾಜ ರಾಯ, ಹಾಗೂ ಅನಂತ ಚೈತನ್ಯ ಪತ್ರಿಕೆಯ ಸಂಪಾದಕ ಕಟೀಲು ನಾರಾಯಣ ರಾವ್ ಅವರನ್ನು ಗೌರವಿಸಲಾಯಿತು. ಕಟೀಲಿನ ಏಳು ಮೇಳಗಳು, ಸ್ಥಳೀಯ ಗ್ರಂಥಾಲಯ, ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ಕಲಾವಿದರು, ವಿದ್ಯಾರ್ಥಿಗಳು ಹೀಗೆ ಐವತ್ತಕ್ಕೂ ಹೆಚ್ಚು ಸಾಹಿತ್ಯಾಸಕ್ತರಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ 2131 ಪುಟಗಳ ಕುಮಾರವ್ಯಾಸ ಭಾರತದ ಎರಡು ಸಂಪುಟಗಳನ್ನು ವಿತರಿಸಲಾಯಿತು. ಮಂಗಳೂರು ತಾಲೂಕು ಗಮಕ ಕಲಾ ಪರಿಷತ್ತು ಅಧ್ಯಕ್ಷ ಸುರೇಶ್ ರಾವ್ ಅತ್ತೂರು ಕರ್ಣಬೇಧನ ಭಾಗವನ್ನು ವಾಚಿಸಿದರೆ, ಸಾಹಿತಿ ಶ್ರೀಧರ ಡಿ.ಎಸ್. ಸುಂದರವಾಗಿ ವ್ಯಾಖ್ಯಾನ ಮಾಡಿದರು. ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಸಾಹಿತ್ಯ ಪರಿಷತ್ತು ಚಟುವಟಿಕೆಗಳಿಗೆ, ಮೂರು ತಾಲೂಕು ಸಾಹಿತ್ಯ ಸಮ್ಮೇಳನಗಳಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.ಅಭಾಸಾಪ ಮೂಲ್ಕಿ ಅಧ್ಯಕ್ಷ ಸರ್ವೋತ್ತಮ ಅಂಚನ್, ಕಸಾಪ ಮೂಲ್ಕಿ ಕಾರ್ಯದರ್ಶಿಗಳಾದ ವೀಣಾ ಶಶಿಧರ್, ಹೆರಿಕ್ ಪಾಯಸ್, ಪ್ರಕಾಶ್ ಆಚಾರ್ ಮತ್ತಿತರರಿದ್ದರು.