ಕನ್ನಡಪ್ರಭ ವಾರ್ತೆ ಬೆಳಗಾವಿ ಚಳಿಗಾಲ ಅಧಿವೇಶನದ ಸಿದ್ಧತೆ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆಯಾಗುತ್ತಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದು, ಹೋಟೆಲ್ ಕೊಠಡಿಗಳ ಹಂಚಿಕೆ, ಪೊಲೀಸ್ ಸಿಬ್ಬಂದಿ ವಸತಿ ಮತ್ತು ಸಿಸಿ ಕ್ಯಾಮೆರಾ ಬಾಡಿಗೆ ವೆಚ್ಚದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಉಭಯ ಸದನಗಳ ಪೀಠಾಧ್ಯಕ್ಷರಿಗೆ ದಾಖಲೆಗಳ ಸಹಿತ ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಚಳಿಗಾಲ ಅಧಿವೇಶನದ ಸಿದ್ಧತೆ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆಯಾಗುತ್ತಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದು, ಹೋಟೆಲ್ ಕೊಠಡಿಗಳ ಹಂಚಿಕೆ, ಪೊಲೀಸ್ ಸಿಬ್ಬಂದಿ ವಸತಿ ಮತ್ತು ಸಿಸಿ ಕ್ಯಾಮೆರಾ ಬಾಡಿಗೆ ವೆಚ್ಚದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಉಭಯ ಸದನಗಳ ಪೀಠಾಧ್ಯಕ್ಷರಿಗೆ ದಾಖಲೆಗಳ ಸಹಿತ ಪತ್ರ ಬರೆದಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025ರ ಚಳಿಗಾಲದ ಅಧಿವೇಶನದ ವೇಳೆ ಸಚಿವರು, ಶಾಸಕರ ಹಿಂಬಾಲಕರು, ರಾಜಕೀಯ ಮುಖಂಡರು ಹಾಗೂ ರೈತ ಸಂಘಟನೆಗಳ ಅಧ್ಯಕ್ಷರಿಗೆ ಸರ್ಕಾರದ ವೆಚ್ಚದಲ್ಲಿ ಹವಾನಿಯಂತ್ರಿತ ವಿಐಪಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಕೊಠಡಿ ಪಡೆದವರು ನಿಜವಾಗಿಯೂ ವಾಸ್ತವ್ಯ ಮಾಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆಯಾಗಬೇಕು. ಸಾರ್ವಜನಿಕರ ತೆರಿಗೆ ಹಣದ ದುರ್ಬಳಕೆ ತಡೆಯಲು ಪೀಠಾಧ್ಯಕ್ಷರು ತನಿಖೆಗೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಲೋಕಾಯುಕ್ತ ಹಾಗೂ ನ್ಯಾಯಾಲಯದ ಮೊರೆ ಹೋಗಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಗರದ ವಿವಿಧ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿರುವ ಪಟ್ಟಿಯನ್ನು ಪತ್ರದೊಂದಿಗೆ ಸಲ್ಲಿಸಿದ್ದಾರೆ. ಇದರಲ್ಲಿ ಸಚಿವರ ಆಪ್ತರು, ಶಾಸಕರ ಸಂಬಂಧಿಕರು, ಆಪ್ತ ಸಹಾಯಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ಕೊಠಡಿ ನೀಡಿರುವ ವಿವರಗಳಿವೆ. ಸ್ಥಳೀಯ ಶಾಸಕರಿಗೆ ಹಂಚಿಕೆಯಾದ ಕೊಠಡಿಗಳಲ್ಲಿ ಅವರೇ ವಾಸ್ತವ್ಯ ಮಾಡಿದ್ದಾರೆಯೇ ಎಂಬುದನ್ನೂ ಪರಿಶೀಲಿಸಬೇಕು. ಜನಪ್ರತಿನಿಧಿಗಳಲ್ಲದವರಿಗೆ ಸರಕಾರಿ ವೆಚ್ಚದಲ್ಲಿ ಕೊಠಡಿ ನೀಡಲು ಅನುಸರಿಸಿದ ಮಾನದಂಡಗಳೇನು ಎಂಬುದನ್ನು ಬಹಿರಂಗಪಡಿಸಬೇಕು ಒತ್ತಾಯಿಸಿದ್ದಾರೆ.

ಜರ್ಮನ್ ಟೆಂಟ್‌ಗೆ ₹ 4.74 ಕೋಟಿ,ಸಿಸಿ ಕ್ಯಾಮೆರಾಗೆ ₹ 4.25 ಕೋಟಿ ಬಾಡಿಗೆ

2024ರ ಅಧಿವೇಶನದ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಸತಿಗಾಗಿ ಜಲ ನಿರೋಧಕ ಜರ್ಮನ್ ಟೆಂಟ್ ನಿರ್ಮಾಣಕ್ಕೆ ₹ 4.74 ಕೋಟಿ ವೆಚ್ಚ ಮಾಡಲಾಗಿದೆ. 1,900 ಮತ್ತು 400 ಜನರ ವಸತಿ ವ್ಯವಸ್ಥೆ, ಶೌಚಾಲಯ, ಸ್ನಾನಗೃಹ, ಸ್ವಚ್ಛತೆ, ಆಸ್ಪತ್ರೆ, ಕುಡಿಯುವ ನೀರಿನ ಘಟಕ ಹಾಗೂ ಲಾಂಡ್ರಿ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಈ ಹಣ ಖರ್ಚಾಗಿದೆ. ಅಧಿವೇಶನದ ಭದ್ರತೆಗಾಗಿ ಸಿಸಿ ಕ್ಯಾಮರಾಗಳನ್ನು ಬಾಡಿಗೆ ಪಡೆಯಲು 2016ರಿಂದ 2025ರವರೆಗೆ ಒಟ್ಟು ₹ 4.25 ಕೋಟಿ ವೆಚ್ಚ ಮಾಡಲಾಗಿದೆ. 2024ರಲ್ಲಿ ₹ 91.89 ಲಕ್ಷ ಹಾಗೂ 2025ರಲ್ಲಿ ₹ 84.99 ಲಕ್ಷ ಬಾಡಿಗೆ ಪಾವತಿಸಲಾಗಿದೆ. ಇಷ್ಟೊಂದು ಮೊತ್ತವನ್ನು ಬಾಡಿಗೆಗೆ ನೀಡುವ ಬದಲು ಕ್ಯಾಮರಾಗಳನ್ನು ಶಾಶ್ವತವಾಗಿ ಖರೀದಿಸಿದ್ದರೆ ಆಗುತ್ತಿದ್ದ ವೆಚ್ಚವೆಷ್ಟು? ನಿಗದಿಪಡಿಸಿರುವ ಬಾಡಿಗೆ ದರ ಸಮಂಜಸವಾಗಿದೆಯೇ ಎಂಬುದರ ಬಗ್ಗೆಯೂ ತನಿಖೆಯಾಗಬೇಕು ಎಂದು ಭೀಮಪ್ಪ ಗಾಡದ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿದ್ದಪ್ಪ ಬಳೆಗಾರ, ಸಂಗಯ್ಯ ಹಿರೇಮಠ ಉಪಸ್ಥಿತರಿದ್ದರು.