ಕನ್ನಡಪ್ರಭ ವಾರ್ತೆ ಜಮಖಂಡಿ

ಬಿಎಲ್‌ಡಿಇ ಶಿಕ್ಷಣ ಸಂಸ್ಥೆ ರಾಜಸ್ಥಾನ, ಕೋಟಾದ ಮೂಲದ ಅಲೆನ್‌ ಕರಿಯರ್‌ ಅಕಾಡೆಮಿ ತರಬೇತಿ ಸಂಸ್ಥೆಯೊಂದಿಗೆ ಶೈಕ್ಷಣಿಕ ಒಪ್ಪಂದ ಮಾಡಿ ಕೊಂಡಿದ್ದು 2027-28ನೇ ಶೈಕ್ಷಣಿಕ ವರ್ಷದಿಂದ ಜಮಖಂಡಿಯಲ್ಲಿ ತರಬೇತಿ ಪ್ರಾರಂಭವಾಗಲಿದೆ. ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಟ್‌, ಜೆಇಇ, ಮುಂತಾದ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಸೂಕ್ತ ತರಬೇತಿ ನೀಡುವ ಉದ್ದೇಶದಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ. ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿಎಲ್‌ಡಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದರು. ನಗರದ ಬಿಎಲ್‌ಡಿಇ ಡಿಗ್ರಿ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು. ಅನೇಕ ತರಬೇತಿ ಸಂಸ್ಥೆಗಳಿವೆ. ಬೆಂಗಳೂರು, ಮಂಗಳೂರುಗಳಿಗೆ ಹೋಗಿ ವಿದ್ಯಾರ್ಥಿಗಳು ತರಬೇತಿ ಪಡೆಯಬೇಕಾಗುತ್ತದೆ. ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ನೀಟ್‌ ಜೆಇಇ ತರಬೇತಿ ಪಡೆಯಲು ಸಾಕಷ್ಟು ಕಷ್ಟ ಪಡಬೇಕಾದ ಪರಿಸ್ಥಿತಿ ಇತ್ತು. ಈ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಲೆನ್‌ ಕರಿಯರ್‌ ಅಕಾಡೆಮಿ ತರಬೇತಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಾಯೋಗಿಕವಾಗಿ ವಿಜಯಪುರದಲ್ಲಿ ಪ್ರಸಕ್ತ ಸಾಲಿನಿಂದ ತರಬೇತಿ ಪ್ರಾರಂಭವಾಗಿತ್ತು, ಸದ್ಯ ಸಾಕಷ್ಟು ಬೇಡಿಕೆ ಹೆಚ್ಚಿದ್ದು 800ರಿಂದ ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ವಿವರಿಸಿದರು.

ಪಿಯುಸಿ, ಪ್ರಥಮ ಹಾಗೂ ದ್ವಿತಿಯ ವರ್ಷದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ, ಜೊತೆಗೆ 6 ರಿಂದ 10ನೇ ತರಗತಿಯ ಮಕ್ಕಳಿ ವಾರಕ್ಕೊಂದು ಕ್ಲಾಸ್‌ ನಡೆಸುವ ಮೂಲಕ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಸಿದ್ಧಪಡಿಸ ಲಾಗುತ್ತದೆ ಎಂದು ಹೇಳಿದರು. ಉಳಿದೆಲ್ಲ ತರಬೇತಿ ಸಂಸ್ಥೆಗಳಿಗಿಂತ ಕಡಿಮೆ ಶುಲ್ಕ ನಿಗದಿಪಡಿಸಲು ಉದ್ದೇಶಿಸಲಾಗಿದೆ. ಆಫ್‌ಲೈನ್‌ ಕ್ಲಾಸ್‌ಗಳು ಮಾತ್ರ ನಡೆಯಲಿವೆ. ರಾಜಸ್ಥಾನದ ನುರಿತ ತರಬೇತುದಾರರು ತರಬೇತಿ ನೀಡಲಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯ ಹಾಗೂ ಕಟ್ಟಡದ ವ್ಯವಸ್ಥೆಗಳು ಜಮಖಂಡಿಯಲ್ಲಿರುವುದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಅಲೆನ್‌ ಅಕಾಡೆಮಿಯ ಪ್ರೇಮ ಕಿಶೋರ ಮಾತನಾಡಿ ,1988ರಲ್ಲಿ ಸಂಸ್ಥೆ ಪ್ರಾರಂಭವಾಗಿದೆ. 2015ರಲ್ಲಿ ಬೆಂಗಳೂರಲ್ಲಿ ಶಾಖೆ ಪ್ರಾರಂಭಿಸಿದೆ. 25 ಸಾವಿರ ಮಕ್ಕಳು ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಜಮಖಂಡಿಯಲ್ಲಿ 6ನೇ ತರಗತಿಯಿಂದ ದ್ವಿತಿಯ ಪಿಯುಸಿವರೆಗಿನ ವಿದ್ಯಾರ್ಥಿಗಳನ್ನು ತರಬೇತಿ ನೀಡಿ ನೀಟ್‌, ಜೆಇಇ ಮುಂತಾದ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಸಿದ್ಧಪಡಿಸುತ್ತೇವೆ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ತರಬೇತಿ ನೀಡುವ ಉದ್ದೇಶದಿಂದ ಬಿಎಲ್‌ಡಿಇ ಸಂಸ್ಥೆ ಮಹತ್ವದ ಒಪ್ಪಂದ ಮಾಡಿ ಕೊಂಡಿದೆ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಪ್ರೋ.ಎಸ್‌.ಎಚ್‌.ಲಗಳಿ ಮಾತನಾಡಿ, ದೇಶದ ಪ್ರಸಿದ್ಧ ಕರಿಯರ್ ಅರ್ಡೆಮಿಗಳಲ್ಲೊಂದಾದ ಅಲೆನ್‌ ಸಂಸ್ಥೆಯೊಂದಿಗೆ ಬಿಎಲ್‌ಡಿಇ ಸಂಸ್ಥೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿರುವುದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ತರಬೇತಿ ಒದಗಿಸಲು ಸಾಧ್ಯವಾಗುತ್ತದೆ. ಇದರಿಂದ ಮಕ್ಕಳ ಶೈಕ್ಷಣಿಕ ಕ್ಷಮತೆ ಹೆಚ್ಚುತ್ತದೆ ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಅನುಕೂಲವಾಗುತ್ತದೆ. 1963ರಲ್ಲಿ ಬಿಎಲ್‌ಡಿಇ ಪ್ರಾರಂಭವಾಗಿದೆ. 80 ಕಾಲೇಜುಗಳು ಅದರಡಿಯಲ್ಲಿದ್ದು 8000 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ಹೇಳಿದರು.


ಕಾಲೇಜು ಅಭಿವೃದ್ಧಿ ಮಂಡಲಿ ಅಧ್ಯಕ್ಷ ಅರುಣಕುಮಾರ ಶಾ ಮಾತನಾಡಿ, ಬಿಎಲ್‌ಡಿಇ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ವಾಸಿಯಾಗಿದೆ. ಶೈಕ್ಷಣಿಕ ಒಪ್ಪಂದದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಪಾಲಕರು ಹಾಗೂ ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ಮಾಹಿತಿಗೆ 9513397419 ಅಥವಾ 9036052638 ದೂ.ಸಂ. ಸಂಪರ್ಕಿಸಬಹುದು ಎಂದು ತಿಳಿಸಿದರು. ಶ್ರೀನಿವಾಸ ಕಟ್ಟಿಮನಿ ಸ್ವಾಗತಿಸಿದರು. ಸಂಸ್ಥೆಯ ವಿವಿಧ ಕಾಲೇಜುಗಳ ಮುಖ್ಯಸ್ಥರು ಇದ್ದರು.