ನಾಡು, ನುಡಿ ರಕ್ಷಣೆಯೇ ಕಸಾಪ ಉದ್ದೇಶ

KannadaprabhaNewsNetwork |  
Published : Jul 23, 2025, 01:46 AM IST
ಕಸಾಪ | Kannada Prabha

ಸಾರಾಂಶ

ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಮಕ್ಕಳು ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಓದಿ, ಈ ಸಾಧನೆ ಮಾಡಿರುವುದು ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ. ನಾವೆಲ್ಲರೂ ಕನ್ನಡವನ್ನು ಮಾತನಾಡುವುದರ ಜೊತೆಗೆ ಕನ್ನಡವನ್ನು ಉಳಿಸಿ ಬೆಳೆಸಲು ಅನೇಕ ಹೋರಾಟಗಳನ್ನು ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಭಾಷೆ, ಸಾಹಿತ್ಯ, ಕಲೆ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳಿಂದ ಕರ್ನಾಟಕದ ಹಿತ ಕಾಪಾಡುವುದೇ ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶ ಎಂದು ತಾಲೂಕು ಕಸಾಪ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್ ಹೇಳಿದರು.

ನಗರದ ಶ್ರೀ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ೨೦೨೪ - ೨೫ ನೇ ಸಾಲಿನಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ ಕ್ಕೆ ೧೨೫ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅ‍ವರು ಮಾತನಾಡಿದರು.

ಕಸಾಪಕ್ಕೆ 111 ವರ್ಷ:

ಮೈಸೂರು ಮಹಾರಾಜರಾದ ದಿವಂಗತ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯ ಘೋಷಣೆಯೊಂದಿಗೆ ಸರ್ ಎಂ.ವಿಶ್ವೇಶ್ವರಯ್ಯರವರು ೦೫-೦೫-೧೯೧೫ ರಂದು ಸ್ಥಾಪಿಸಲ್ಪಟ್ಟಿದ್ದು, ಕರ್ನಾಟಕ ಸಾಹಿತ್ಯ ಪರಿಷತ್ತು ಎಂದು ನಾಮಕರಣ ಮಾಡಿದರು. ನಂತರ ೧೯೩೮ ರಲ್ಲಿ ಬಿ.ಎಂ.ಶ್ರೀಕಂಠಯ್ಯನವರು ಕನ್ನಡ ಸಾಹಿತ್ಯ ಪರಿಷತ್ತು ಎಂದು ಮರುನಾಮಕರಣ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಮೇ ೦೫ , ೨೦೨೫ ಕ್ಕೆ ೧೧೧ ವಸಂತಗಳನ್ನು ಪೂರೈಸಿದ ಹೆಮ್ಮೆಯ ಸಂಸ್ಥೆಯಾಗಿದೆ ಎಂದು ಹೇಳಿದರು.

ಬಿಇಒ ಉಮಾದೇವಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಒಳ್ಳೆಯ ಕೆಲಸವಾಗಿದೆ. ಇಲಾಖೆಯ ನಿರ್ಬಂಧಗಳ ಮಧ್ಯೆ ಪಾರದರ್ಶಕವಾಗಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಪೂರ್ಣ ಅಂಕಗಳನ್ನು ತೆಗೆಯುವುದು ಕಡಿಮೆ ಸಾಧನೆಯಲ್ಲ. ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿತಾಗ ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ಇದು ಉದಾಹರಣೆ ಎಂದರು.

ಕನ್ನಡವನ್ನು ಪ್ರಥಮ ಭಾಷೆ

ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಮಕ್ಕಳು ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಓದಿ, ಈ ಸಾಧನೆ ಮಾಡಿರುವುದು ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ. ನಾವೆಲ್ಲರೂ ಕನ್ನಡವನ್ನು ಮಾತನಾಡುವುದರ ಜೊತೆಗೆ ಕನ್ನಡವನ್ನು ಉಳಿಸಿ ಬೆಳೆಸಲು ಅನೇಕ ಹೋರಾಟಗಳನ್ನು ಮಾಡಬೇಕಾದ ಪರಿಸ್ಥಿತಿ ಇಂದು ಬಂದಿದೆ. ಭಾಷಣಗಳು ಹೋರಾಟಗಳು ನವಂಬರ್ ತಿಂಗಳಿಗೆ ಮೀಸಲಾಗದೆ ನಮ್ಮ ಭಾಷೆಯ ಮೇಲಿನ ಅಭಿಮಾನದಿಂದ ಕನ್ನಡ ಭಾಷೆಯ ಅಳಿವು ಉಳಿವಿಗೆ ಹೋರಾಡುವಂತಹ ಕನ್ನಡಿಗರು ನಾವಾಗಬೇಕೆಂದು ಹೇಳಿದರು.

ತಾಪಂ ಇಒ ಎಸ್.ಆನಂದ್ ಮಾತನಾಡಿ, ಪ್ರತಿಭಾ ಪುರಸ್ಕಾರಗಳು ಮತ್ತೊಬ್ಬರ ಸಾಧನೆಗೆ ಪ್ರೇರಕವಾಗಬೇಕು. ಕಸಾಪ ಉತ್ತಮವಾದ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನೆಗೆ ಅರ್ಹ. ಸಾಧನೆ ಮಾಡದೆ ಸತ್ತರೆ ಸಾವಿಗೆ ಅವಮಾನ, ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ, ಹಾಗಾಗಿ ನೀವುಗಳು ಎಲ್ಲರೂ ಮೆಚ್ಚುವ ಸಾಧನೆ ಮಾಡಬೇಕು. ವಿದ್ಯೆಯಿಂದ ವಿನಯವು, ವಿನಯದಿಂದ ಸತ್ ಚಾರಿತ್ರ‍್ಯವು, ಸತ್ ಚಾರಿತ್ರ‍್ಯದಿಂದ ಉದ್ಯೋಗ,ಒಳ್ಳೆಯ ಉದ್ಯೋಗದಿಂದ ಒಳ್ಳೆಯ ಫಲ ಬರಬೇಕು.ಆ ಫಲ ಒಳ್ಳೆಯದಕ್ಕೆ ವಿನಿಯೋಗವಾಗಬೇಕು ಎಂದು ಕರೆ ನೀಡಿದರು.

ಎಲ್ಲರಿಗೂ ಮಾದರಿಯಾಗಲಿ

ಕಾಲೇಜಿನ ಪ್ರಾಂಶುಪಾಲ ಎನ್.ವಿ.ವೆಂಕಟಶಿವಾರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ನಮ್ಮ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿದ್ಯಾರ್ಥಿಗಳು ತಮ್ಮ ಸಾಧನೆಗಾಗಿ ಪ್ರತಿಭಾ ಪುರಸ್ಕಾರವನ್ನು ಪಡೆದಿದ್ದು ನೀವು ಎಲ್ಲರಿಗೂ ಮಾದರಿಯಾಗಿರಬೇಕು. ನಿಮ್ಮ ಭವಿಷ್ಯ ಉಜ್ವಲವಾಗಲಿ, ಎಲ್ಲಾ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲೆಂದು ಕರೆ ನೀಡಿದರು. ಹಿರಿಯ ಸಾಹಿತಿ ಕಾಗತಿ ವೆಂಕಟರತ್ನಂ, ಟಿ.ಸಿ.ಲಕ್ಷ್ಮೀಪತಿ, ಎನ್.ವಿ. ಶ್ರೀನಿವಾಸನ್ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎನ್.ವಿ.ವೆಂಕಟಶಿವಾರೆಡ್ಡಿ ಮತ್ತು ಉಪನ್ಯಾಸಕ ನಾಗರಾಜ್, ವೆಂಕಟೇಶ್‌ಮೂರ್ತಿ ಎಲ್ಲಾ ಸಿಬ್ಬಂದಿ ವರ್ಗದವರು ಕಸಾಪ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿದ್ಯಾರ್ಥಿಗಳು ಪೋಷಕರು, ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ