ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಕಸ್ತೂರು ದೊಡ್ಡಮ್ಜತಾಯಿ ಬಂಡಿ ಜಾತ್ರೆ ಸಾವಿರಾರು ಭಕ್ತರ ಸಂಭ್ರಮ ಮತ್ತು ವಿವಿಧ ಗ್ರಾಮಗಳ ಬಂಡಿಗಳು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವುದರೊಂದಿಗೆ ವಿಜೃಂಭಣೆಯಿಂದ ಭಾನುವಾರ ನಡೆಯಿತು. ನೂತನ ವರ್ಷದ ಮೊದಲ ಜಾತ್ರೆ ಇದಾಗಿದ್ದು, ಹದಿನಾರು ಹಳ್ಳಿಗಳ ಬಂಡಿಗಳು ಈ ಕಸ್ತೂರು ಬಂಡಿ ಜಾತ್ರೆಯಲ್ಲಿ ಸಮಾಗಮಗೊಂಡವು. ನೂತನ ವರ್ಷದ ಮೊದಲ ಜಾತ್ರೆ ಆದ್ದರಿಂದ ಭಾನುವಾರ ಬೆಳಗ್ಗೆಯೇ ಭಕ್ತರು ದೊಡ್ಡಮ್ಮ ತಾಯಿ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ್ದರಿಂದ ಎಲ್ಲೆಲ್ಲೂ ಜನರೇ ಕಾಣತೊಡಗಿದರು. ಮಧ್ಯಾಹ್ನ ಆಗುತ್ತಿದ್ದಂತೆಯೇ ಒಂದೊಂದಾಗಿ ಬಂಡಿಗಳು ಜಾತ್ರೆಯಂಗಳಕ್ಕೆ ಆಗಮಿಸುತ್ತಿದ್ದಂತೆ ಭಕ್ತರು ಜಯಘೋಷ ಹಾಕಿ ಸಂಭ್ರಮಿಸಿದರು.ಶಾಸಕ ಸಿ. ಪುಟ್ಟರಂಗಶೆಟ್ಟಿ ಬೆಳಗ್ಗೆಯೇ ಕಸ್ತೂರು ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಚಳಿಗಾಲದಲ್ಲೂ ಮಧ್ಯಾಹ್ನದ ಸುಡುವ ಬಿಸಿಲಿದ್ದರೂ, ಜಾತ್ರೆಯ ಸಂಭ್ರಮಕ್ಕೆ ತಡೆವೊಡ್ಡಲಿಲ್ಲ. ವ್ಯಾಪಾರ, ವಹಿವಾಟು ಸಹ ಜೋರಾಗಿಯೇ ಸಾಗಿತ್ತು. ಕಸ್ತೂರು, ಮರಿಯಾಲ, ಮರಿಯಾಲದ ಹುಂಡಿ, ಕೆಲ್ಲಂಬಳ್ಳಿ, ಭೋಗಾಪುರ, ಕಿರಗಸೂರು, ದಾಸನೂರು, ಸಪ್ಪಯ್ಯನಪುರ, ಹನಹಳ್ಳಿ, ಮೂಕಹಳ್ಳಿ, ಚಿಕ್ಕಹೊಮ್ಮ, ದೊಡ್ಡಹೊಮ್ಮ, ಅಂಕುಶರಾಯನಪುರ, ತೊರವಳ್ಳಿ, ಪುಟ್ಟಯ್ಯನಹುಂಡಿ, ಹೊನ್ನೇಗೌಡನಹುಂಡಿ, ಬಸವನಪುರ ಸೇರಿದಂತೆ ೨೩ ಗ್ರಾಮಗಳಲ್ಲೂ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ೧೬ ಗ್ರಾಮಗಳ ಬಂಡಿಗಳನ್ನು ಬಾಳೆಹಣ್ಣುಗೊನೆ, ಬೃಹತ್ ಗಾತ್ರದ ಹೂವಿನಹಾರ, ತಳಿರುತೋರಣ ಕಟ್ಟಿ, ಸಿಂಗರಿಸಿಲಾಗಿತ್ತು. ಭಾನುವಾರ ಮಧ್ಯಾಹ್ನ ೧೨.೩೦ರ ಹೊತ್ತಿಗೆ ಜಾತ್ರೆ ನಡೆಯುವ ಕಸ್ತೂರು ಗ್ರಾಮದ ಬಳಿಯಿರುವ ಜಾತ್ರೆಯಂಗಳಕ್ಕೆ ತೆರಳಿದ ಬಂಡಿಗಳು, ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕಿ, ತೀರ್ಥ ಸಂಪ್ರೋಕ್ಷಣೆ ಮಾಡಿಸಿಕೊಂಡವು. ನೆರೆದಿದ್ದ ಭಕ್ತಾದಿಗಳು ಬಂಡಿಗೆ ಕಾಯಿ ಒಡೆದು ಭಕ್ತಿ ಸಮರ್ಪಿಸಿದರು.ಕಸ್ತೂರು ಬಂಡಿಯ ನಂತರ ಕಿರಗಸೂರು, ಭೋಗಾಪುರ, ಕೆಲ್ಲಂಬಳ್ಳಿ, ತೊರವಳ್ಳಿ, ದಾಸನೂರು, ಮರಿಯಾಲ ಸೇರಿದಂತೆ ೧೬ ಗ್ರಾಮಗಳ ಬಂಡಿಗಳು ಜಾತ್ರೆಯಂಗಳದಲ್ಲಿ ಸಮಾವೇಶಗೊಂಡವು. ಎತ್ತುಗಳ ಕೊಂಬುಗಳಿಗೆ ಬಣ್ಣತುಂಬಿ, ಕೊರಳಿಗೆ ಗೆಜ್ಜೆಹಾರವನ್ನು ಕಟ್ಟಿ ದೇವಸ್ಥಾನ ಸುತ್ತ ದೀವಟಿಗೆ ಸೇವೆ ಮಾಡಿದರು. ಹರಕೆ ಹೊತ್ತ ಭಕ್ತರು ಪಂಜಿನ ಸೇವೆ ನೆರವೇರಿಸಿದರು. ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು.ದೇವರ ದರ್ಶನಕ್ಕೆ ತೆರಳುವ ಭಕ್ತರಿಗೆ ಸರತಿ ಸಾಲಿನಲ್ಲಿ ನಿಲ್ಲಲು ಬ್ಯಾರಿಕೇಡ್ ಅಳವಡಿಸಿದ್ದರಿಂದ ನೂಕುನುಗ್ಗಲು ಉಂಟಾಗಲಿಲ್ಲ. ಪಕ್ಕದಲ್ಲೇ ಇರುವ ಮಹದೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ಜರುಗಿದವು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು.ಜಾತ್ರೆಗೆ ಆಗಮಿಸುವ ಭಕ್ತರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ದ್ವಿಚಕ್ರ ವಾಹನ ಹಾಗೂ ಬಸ್ ನಿಲುಗಡೆಗೆ ಜಾತ್ರಾವರಣ ಸಮೀಪದಲ್ಲೇ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ಝಳ ಹೆಚ್ಚಿದ್ದರಿಂದ ತಂಪು ಪಾನೀಯಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಪೊಲೀಸರು ಸಂಚಾರ ವ್ಯವಸ್ಥೆ ಸರಿಪಡಿಸಲು ಹರಸಾಹಸ ಪಡಬೇಕಾಯಿತು.