ಕಸ್ತೂರಿ ರಂಗನ್ ವರದಿ: ಹೋರಾಟ ತೀವ್ರಗೊಳಿಸಲು ತೀರ್ಮಾನ

KannadaprabhaNewsNetwork |  
Published : Sep 07, 2026, 03:15 AM IST
ಚಿತ್ರ : 4ಎಂಡಿಕೆ3 : ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಸಭೆ ನಡೆಯಿತು.  | Kannada Prabha

ಸಾರಾಂಶ

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ರಾಜಕೀಯ ಭೇದ ಮರೆತು ಹೋರಾಟ ತೀವ್ರಗೊಳಿಸಲು ನಗರದ ಕ್ರಿಸ್ಟಲ್ ಕೋರ್ಟ ಹೋಟೆಲ್‌ನಲ್ಲಿ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಶುಕ್ರವಾರ ನಡೆದ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಡಿಕೇರಿ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ರಾಜಕೀಯ ಭೇದ ಮರೆತು ಹೋರಾಟ ತೀವ್ರಗೊಳಿಸಲು ನಗರದ ಕ್ರಿಸ್ಟಲ್ ಕೋರ್ಟ ಹೋಟೆಲ್‌ನಲ್ಲಿ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಶುಕ್ರವಾರ ನಡೆದ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.ವರದಿಯಿಂದ ಪ್ರಭಾವಿತವಾಗಲಿರುವ ಹಳ್ಳಿಗಳಲ್ಲಿ ಹಂತ ಹಂತವಾಗಿ ಗ್ರಾಮಸಭೆ ಆಯೋಜಿಸಿ, ರೈತರು ಮತ್ತು ಸ್ಥಳೀಯ ನಿವಾಸಿಗಳಿಂದ ಲಿಖಿತ ಆಕ್ಷೇಪಣೆ ಪಡೆಯುವುದು ಹಾಗೂ ಅವುಗಳನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ರವಾನಿಸಿ ಜಿಲ್ಲೆಯ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡುವುದು ಸಭೆಯ ಪ್ರಮುಖ ತೀರ್ಮಾನವಾಗಿದೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ. ಎಸ್.ಪೊನ್ನಣ್ಣ ಮಾತನಾಡಿ, ೨೦೧೪ರಿಂದ ಇಲ್ಲಿಯವರೆಗೆ ಏಳು ಬಾರಿ ಕರಡು ಅಧಿಸೂಚನೆ ಬಂದಿದ್ದರೂ ಅಂಶಗಳು ಬದಲಾಗಿಲ್ಲ. ಈ ವಿಚಾರದಲ್ಲಿ ಪಕ್ಷಾತೀತ ನಿಲುವು ಅಗತ್ಯವಿದ್ದು, ಅರಣ್ಯ ಸಚಿವರನ್ನು ಭೇಟಿ ಮಾಡುವ ನಿಯೋಗಕ್ಕೆ ನೇತೃತ್ವ ವಹಿಸುವುದಾಗಿ ತಿಳಿಸಿದರು.

ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ವರದಿ ಬಾಧಿತ ೫೩ ಹಳ್ಳಿಗಳಲ್ಲಿ ವಿಶೇಷ ಗ್ರಾಮಸಭೆ ನಡೆಸುವಂತೆ ಆಡಳಿತಕ್ಕೆ ಸೂಚಿಸಲಾಗುವುದು. ವರದಿಯನ್ನು ಸಂಪೂರ್ಣ ತಿರಸ್ಕರಿಸಬೇಕೆಂಬುದೇ ತಮ್ಮ ನಿಲುವು ಎಂದರು.

ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೇರಳ ಮಾದರಿಯಲ್ಲಿ ಕೊಡಗಿನಲ್ಲೂ ವೈಜ್ಞಾನಿಕವಾಗಿ ಭೌತಿಕ ಸರ್ವೆ ನಡೆಸಿದರೆ ಸೂಕ್ಷ್ಮ ವಲಯದ ವ್ಯಾಪ್ತಿ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಬಲವಾಗಿ ಪ್ರಸ್ತಾಪಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ಸಮಿತಿ ಅಧ್ಯಕ್ಷ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರ ಭೇಟಿಗೆ ದಿನಾಂಕ ನಿಗದಿಪಡಿಸಲಾಗುವುದು. ಸಿ ಮತ್ತು ಡಿ ಜಮೀನು ಹಾಗೂ ಸೆಕ್ಷನ್ ೪ ಸಮಸ್ಯೆಗಳನ್ನೂ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಲಾಗುವುದು. ಅರಣ್ಯ ಇಲಾಖೆಗಿಂತ ಪರಿಸರವಾದಿಗಳ ಹಸ್ತಕ್ಷೇಪದಿಂದಲೇ ರೈತರಿಗೆ ಹೆಚ್ಚಿನ ತೊಂದರೆ ಆಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಭೆಯಲ್ಲಿ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಹೋರಾಟ ಸಮಿತಿ ಕಾರ್ಯಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾನು ಶಾಲೆಯಲ್ಲಿ ಮುಖ್ಯಮಂತ್ರಿ ಆಗಿದ್ದೆ
ಶಿಕ್ಷಕನು ಸಮಾಜದ ಭವಿಷ್ಯ ರೂಪಿಸುವ ಶಿಲ್ಪಿ