ಕನ್ನಡಪ್ರಭ ವಾರ್ತೆ ಬಾಗಲಕೋಟೆಶಿಕ್ಷಕ ದಿನಾಚರಣೆಯಂದು ಮಾತ್ರ ಶಿಕ್ಷಕರಿಗೆ ಗೌರವ ಸಲ್ಲಿಸುವದಲ್ಲ, ಗುರು-ಶಿಷ್ಯ ಪರಂಪರೆಯ ಮಹತ್ವ ನೆನಪಿಸುವ ಹಾಗೂ ಶಿಕ್ಷಕರನ್ನು ಯಾವತ್ತೂ ಸ್ಮರಿಸಬೇಕು ಎಂದು ತಿಳಿ ಹೇಳುವ ಪವಿತ್ರ ದಿನವಾಗಿದೆ ಎಂದು ಹುನಗುಂದದ ವಿ.ಎಂ.ಎಸ್.ಆರ್.ವಸ್ತ್ರದ ಪದವಿ ಕಾಲೇಜಿನ ಕ್ರೀಡಾ ನಿರ್ದೇಶಕ ಪ್ರೊ.ಎಸ್.ಬಿ.ಚಳಗೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶಿಕ್ಷಕ ದಿನಾಚರಣೆಯಂದು ಮಾತ್ರ ಶಿಕ್ಷಕರಿಗೆ ಗೌರವ ಸಲ್ಲಿಸುವದಲ್ಲ, ಗುರು-ಶಿಷ್ಯ ಪರಂಪರೆಯ ಮಹತ್ವ ನೆನಪಿಸುವ ಹಾಗೂ ಶಿಕ್ಷಕರನ್ನು ಯಾವತ್ತೂ ಸ್ಮರಿಸಬೇಕು ಎಂದು ತಿಳಿ ಹೇಳುವ ಪವಿತ್ರ ದಿನವಾಗಿದೆ ಎಂದು ಹುನಗುಂದದ ವಿ.ಎಂ.ಎಸ್.ಆರ್.ವಸ್ತ್ರದ ಪದವಿ ಕಾಲೇಜಿನ ಕ್ರೀಡಾ ನಿರ್ದೇಶಕ ಪ್ರೊ.ಎಸ್.ಬಿ.ಚಳಗೇರಿ ಹೇಳಿದರು.

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಒಬ್ಬ ಉತ್ತಮ ಶಿಕ್ಷಕನು ಕೇವಲ ಪಠ್ಯಪುಸ್ತಕದ ಜ್ಞಾನವನ್ನು ಬೋಧಿಸುವವನಲ್ಲ. ವಿದ್ಯಾರ್ಥಿಯೊಳಗಿನ ಪ್ರತಿಭೆಯನ್ನು ಗುರುತಿಸಿ, ಆತ್ಮವಿಶ್ವಾಸವನ್ನು ಬೆಳೆಸಿ, ಉತ್ತಮ ಚಿಂತನೆಗೆ ಪ್ರೇರೇಪಿಸಿ, ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ನೀಡುವವನು. ಶಿಕ್ಷಕನು ಸಮಾಜದ ಭವಿಷ್ಯವನ್ನು ರೂಪಿಸುವ ಶಿಲ್ಪಿ. ಬುದ್ದಿವಂತ ಮಕ್ಕಳನ್ನು ಬೆಳೆಸುವುದು ಮುಖ್ಯವಲ್ಲ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಬೆಳೆಸುವುದು ಮುಖ್ಯ ಎಂದರು.

ವಿದ್ಯಾರ್ಥಿಯ ಜೀವನದಲ್ಲಿ ತಂದೆ-ತಾಯಿಯ ನಂತರ ಅತ್ಯಂತ ಮಹತ್ವದ ಸ್ಥಾನ ಶಿಕ್ಷಕರದ್ದು. ಶಿಕ್ಷಕರ ಮಾತು, ನಡೆ-ನುಡಿ ಮತ್ತು ಆದರ್ಶಗಳು ವಿದ್ಯಾರ್ಥಿಗಳ ವ್ಯಕ್ತಿತ್ವದ ಮೇಲೆ ಶಾಶ್ವತವಾದ ಪ್ರಭಾವ ಬೀರುತ್ತವೆ. ಆದ್ದರಿಂದ ಶಿಕ್ಷಕರು ಜ್ಞಾನವನ್ನು ನೀಡುವುದರ ಜತೆಗೆ ಮೌಲ್ಯಗಳು, ಮಾನವೀಯತೆ, ಪ್ರಾಮಾಣಿಕತೆ, ಶಿಸ್ತು, ದೇಶಪ್ರೇಮ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಬೇಕು ಎಂದು ಕರೆ ನೀಡಿದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣ ಕ್ಷೇತ್ರವು ವೇಗವಾಗಿ ಬದಲಾಗುತ್ತಿದೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ ಮತ್ತು ಆನ್ಲೈನ್ ಶಿಕ್ಷಣದಂತಹ ಹೊಸ ಸಾಧ್ಯತೆಗಳು ನಮ್ಮ ಮುಂದಿವೆ. ಆದರೆ ಯಾವುದೇ ತಂತ್ರಜ್ಞಾನವೂ ಒಬ್ಬ ಉತ್ತಮ ಶಿಕ್ಷಕನ ಪ್ರೀತಿ, ಕಾಳಜಿ, ಮಾರ್ಗದರ್ಶನ ಮತ್ತು ಮಾನವೀಯ ಸ್ಪರ್ಶವನ್ನು ಸಂಪೂರ್ಣವಾಗಿ ಬದಲಿಸಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಕರು ಕಾಲಕ್ಕೆ ತಕ್ಕಂತೆ ತಮ್ಮ ಜ್ಞಾನವನ್ನು ನವೀಕರಿಸಿಕೊಂಡು, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಸಂಶೋಧನಾ ಮನೋಭಾವ ಬೆಳೆಸಬೇಕು. ಗುರುವಿನ ಜ್ಞಾನದಿಂದ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ವಿಶ್ವವಿದ್ಯಾಲಯದ ಶಿಕ್ಷಣ ನಿಏರ್ಶಕ ಡಾ.ತಮ್ಮಯ್ಯ ಎನ್ ಮಾತನಾಡಿ, ಶಿಕ್ಷಕರ ದಿನಾಚರಣೆ ಶಿಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನೆನಪಿಸಿ, ನಿರಂತರ ಪ್ರೇರಣೆ ನೀಡುವ ದಿನವಾಗಿದೆ. ಶಿಕ್ಷಣ ಸಂಸ್ಥೆಯ ಸಮಗ್ರ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಈ ದಿನ ನಮ್ಮ ದೈನಂದಿನ ಕಾರ್ಯಚಟುವಟಿಕೆಗಳ ನಡುವೆ ಆತ್ಮಾವಲೋಕನಕ್ಕೆ ಅವಕಾಶ ನೀಡುತ್ತದೆ. ವಿಶೇಷವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಪರಸ್ಪರ ಸಹಕಾರ ಮತ್ತು ಸಕಾರಾತ್ಮಕ ವಾತಾವರಣ ಬೆಳೆಸುವುದರಿಂದ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಬಲ ದೊರೆಯುತ್ತದೆ'''''''' ಎಂದರು. ವಿದ್ಯಾರ್ಥಿ ಕಲ್ಯಾಣ ವಿಭಾಗದ ಉಪನಿರ್ದೇಶಕ ಡಾ.ರಾಜಶೇಖರ ಹಿರೇಮಠ ಮಾತನಾಡಿ, ಅಜ್ಞಾನದ ಕತ್ತಲೆಯನ್ನು ಓಡಿಸಿ, ಜ್ಞಾನದ ಬೆಳಕನ್ನು ನೀಡುವ ಶಿಕ್ಷಕರ ಮಹತ್ವವನ್ನು ಸಾರಿ ಹೇಳುವ ಈ ದಿನ ಅತ್ಯಂತ ಪವಿತ್ರವಾದುದು. ಶಿಕ್ಷಕರ ಯಶಸ್ಸು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸುವುದರಲ್ಲಿ ಮಾತ್ರವಲ್ಲ, ಅವರು ಉತ್ತಮ ವ್ಯಕ್ತಿಗಳಾಗಿ, ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುವುದರಲ್ಲಿ ಅಡಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಸಾಮಥ್ರ್ಯವಿದೆ. ಆ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಶಿಕ್ಷಕರು ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ವಿದ್ಯಾರ್ಥಿಗಳು ಸಹ ತಮ್ಮ ಶಿಕ್ಷಕರ ಮಾರ್ಗದರ್ಶನವನ್ನು ಗೌರವದಿಂದ ಸ್ವೀಕರಿಸಿ, ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗುರುಗಳಿಗೆ ಕೃತಜ್ಞತೆ ಸಲ್ಲಿಸಬೇಕು ಎಂದರು.ಸ್ನಾತಕೋತ್ತರ ವಿಭಾಗದ ಡೀನ್ ಆದ ಡಾ.ಬಾಲಾಜಿ ಕುಲಕರ್ಣಿ ಮಾತನಾಡಿ, ಶಿಕ್ಷಕರು ತಮ್ಮ ವೃತ್ತಿಯನ್ನು ಕೇವಲ ಕರ್ತವ್ಯವೆಂದು ಪರಿಗಣಿಸದೇ, ಸಾಮಾಜಿಕ ಜವಾಬ್ದಾರಿ ಎಂದು ಭಾವಿಸಬೇಕು. ತರಗತಿಯ ನಾಲ್ಕು ಗೋಡೆಗಳೊಳಗೆ ಮಾತ್ರ ಸೀಮಿತವಾಗದೆ, ಸಮಾಜದಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಂಡು ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧಗೊಳಿಸಬೇಕು. ಶಿಕ್ಷಕರು ನಿರಂತರವಾಗಿ ಅಧ್ಯಯನ, ಸಂಶೋಧನೆ ಮತ್ತು ಆತ್ಮಾವಲೋಕನದಲ್ಲಿ ತೊಡಗಿಸಿಕೊಂಡಾಗ ಮಾತ್ರ ಶಿಕ್ಷಣದ ಗುಣಮಟ್ಟ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದರು.

ಡಾ.ಐ.ಬಿ.ಬಿರಾದಾರ, ಪ್ರೊ.ಭುವನೇಶ್ವರಿ ಗಾಣಿಗೇರ, ಡಾ.ದಾದಾಪೀರ್, ಡಾ.ರಾಜೇಶ್ವರಿ ಪಾಟೀಲ ಉಪಸ್ಥಿತರಿದ್ದರು. ಸ್ನೇಹಾ ಬಿರಾದಾರ ಸ್ವಾಗತಿಸಿದರು. ಪಾಟೀಲ ವಂದಿಸಿದರು, ಎಂ.ಸಿಪಾ ನಿರೂಪಿಸಿದರು.