ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ. ವರದಿಯ ವ್ಯಾಪ್ತಿಗೆ ಹುಲ್ಲುಬನ, ಗೋಮಾಳ ಸೇರಿದಂತೆ ವಸತಿ ಪ್ರದೇಶಗಳೂ ಒಳಪಡುವ ಸಾಧ್ಯತೆ ಇದೆ. ಮನೆಗಳ ದುರಸ್ತಿ ಸಹಿತ ರೈತರ ದೈನಂದಿನ ಚಟುವಟಿಕೆಗಳಿಗೂ ನಿರ್ಬಂಧ ಎದುರಾಗಲಿದೆ. ಆದ್ದರಿಂದ ರೈತ ವಿರೋಧಿ ವರದಿಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 102 ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದ್ದು, ಬರದ ತೀವ್ರತೆ ಇನ್ನಷ್ಟು ಹೆಚ್ಚಿದೆ. ಹೆಚ್ಚಿನ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಬೇಕು. ಎನ್‌ಡಿಆರ್‌ಎಫ್ ನಿಧಿಯನ್ನೂ ಹೆಚ್ಚಿಸಬೇಕು ಎಂದು ಒತ್ತಾಯಿಸಿದ ಅವರು, ರೈತಪರ ನಿಲುವು ತಳೆಯದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಖೇಣಿದಾರರಿಂದ ರೈತರಿಗೆ ಸಂಕಷ್ಟ: ರಾಜ್ಯದಲ್ಲಿ ಗುಟ್ಕಾ ನಿಷೇಧದ ಬದಲು ಗುಣಮಟ್ಟದ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೆಲವು ಅಡಕೆ ಖೇಣಿದಾರರು ಹಾಗೂ ವರ್ತಕರಿಂದ ಅಡಕೆಗೆ ರಾಸಾಯನಿಕ ಬಣ್ಣ ಹಚ್ಚುತ್ತಿರುವುದರಿಂದ ಇಡೀ ರೈತ ಸಮೂಹ ಸಂಕಷ್ಟಕ್ಕೆ ಸಿಲುಕಿದೆ. ನಕಲಿ ಬಣ್ಣ ಬಳಸುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಗುಟ್ಕಾದಲ್ಲಿ ಆರೋಗ್ಯಕ್ಕೆ ಹಾನಿಕರ ಅಂಶಗಳಿದ್ದರೆ ಅವುಗಳನ್ನು ತೆಗೆದುಹಾಕುವ ಕ್ರಮ ಕೈಗೊಳ್ಳಬೇಕು. ಆದರೆ ಸಂಪೂರ್ಣ ನಿಷೇಧದಿಂದ ಲಕ್ಷಾಂತರ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಕೃಷಿಕ ಸಮಾಜದ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಎನ್. ನಾಗರಾಜ್ ಆತಂಕ ವ್ಯಕ್ತಪಡಿಸಿದರು.