16ರಂದು ಕಟೀಲು ದಶಾವತಾರ ಯಕ್ಷಗಾನ ಮಂಡಳಿಯ ತಿರುಗಾಟದ ಆರಂಭೋತ್ಸವ

KannadaprabhaNewsNetwork |  
Published : Nov 14, 2025, 03:45 AM IST
32 | Kannada Prabha

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಈ ವರ್ಷದ ತಿರುಗಾಟದ ಆರಂಭೋತ್ಸವದಂದು ಏಳನೇ ಮೇಳದ ಪಾದಾರ್ಪಣೆ ನ.16 ರಂದು ನಡೆಯಲಿದೆ.

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ನಡೆಸಲ್ಪಡುವ ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಈ ವರ್ಷದ ತಿರುಗಾಟದ ಆರಂಭೋತ್ಸವದಂದು ಏಳನೇ ಮೇಳದ ಪಾದಾರ್ಪಣೆ ನ.16 ರಂದು ನಡೆಯಲಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಮಾಹಿತಿ ನೀಡಿದರು.

ನ.15 ರಂದು ಸಂಜೆ 3 ಗಂಟೆಗೆ ಎಂಟು ಸ್ತಬ್ಧಚಿತ್ರಗಳಲ್ಲಿ ಕಟೀಲಿನ ಏಳೂ ಮೇಳಗಳ ದೇವರು, ತೊಟ್ಟಿಲು, ಚಿನ್ನ ಬೆಳ್ಳಿಗಳ ಕಿರೀಟ ಇತ್ಯಾದಿ ಪರಿಕರಗಳನ್ನು ವೈಭವದ ಮೆರವಣಿಗೆಯಲ್ಲಿ ಬಜಪೆಯಿಂದ ಕಟೀಲಿಗೆ ತಂದು ದೇವರಿಗೆ ಒಪ್ಪಿಸಲಾಗುವುದು. ಏಳನೇ ಮೇಳಕ್ಕೆ ಭಕ್ತರು ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ ನೀಡಿರುವ ದೇವರ ಕಿರೀಟಗಳು, ತೊಟ್ಟಿಲು. ಚಿನ್ನ ಬೆಳ್ಳಿಗಳ ಆಯುಧ, ಆಭರಣಗಳು ಸೇರಿವೆ ಎಂದರು.ಬಜಪೆಯಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮೆರವಣಿಗೆ ಉದ್ಘಾಟಿಸಲಿದ್ದು, ಮಾನವ ಹಕ್ಕು ಆಯೋಗದ ಅಧ್ಯಕ್ಷ ಶ್ಯಾಂ ಭಟ್‌, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾಜಿ ಸಚಿವರಾದ ಅಭಯಚಂದ್ರ ಜೈನ್‌, ಕೃಷ್ಣ ಪಾಲೇಮಾರ್‌, ಶಾಸಕ ಉಮಾನಾಥ ಕೋಟ್ಯಾನ್‌, ಮಿಥುನ್‌ ರೈ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಸ್ತಬ್ಧ ಚಿತ್ರಗಳಲ್ಲಿ ಮೇಳಗಳ ದೇವರು, ಪರಿಕರಗಳೊಂದಿಗೆ ವೇದಘೋಷ, ಮೂರು ಸಾವಿರದಷ್ಟು ಮಂದಿ ಭಜನೆಯಲ್ಲಿ, ನಾಲ್ಕಕ್ಕೂ ಹೆಚ್ಚು ಚೆಂಡೆ ತಂಡಗಳು, ವಾದ್ಯ, ಡೋಲು, ಕೊಂಬು, ಸ್ಯಾಕ್ಸೋಫೋನ್‌, ನಾಗಸ್ವರ, ಬೇತಾಳ, ಕೀಲುಕುದುರೆ, ಹುಲಿವೇಷ ಇತ್ಯಾದಿಗಳು ಇರಲಿವೆ. ಸುಮಾರು 15-20 ಸಾವಿರ ಮಂದಿ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಎಕ್ಕಾರಿನಿಂದ ಕಟೀಲುವರೆಗೆ ಕಾಲ್ನಡಿಗೆಯಲ್ಲಿ ಬಂದು ಮೇಳದ ಸ್ವತ್ತುಗಳನ್ನು ದೇವರಿಗೆ ಸಮರ್ಪಿಸಲಾಗುವುದು ಎಂದರು.

ಏಳು ರಂಗಸ್ಥಳಗಳಲ್ಲಿ ಪ್ರದರ್ಶನ: ಕಟೀಲು ಮೇಳಗಳ ಪ್ರದರ್ಶನ ಏಕಕಾಲಕ್ಕೆ ಏಳು ರಂಗಸ್ಥಳಗಳಲ್ಲಿ ನಡೆಯಲಿದೆ. ನ.14 ರಿಂದ 16ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ನ.16 ರಂದು ಏಳನೇ ಮೇಳದ ಉದ್ಘಾಟನೆ, ರಾತ್ರಿ 8.30ಕ್ಕೆ ಮೇಳಗಳ ದೇವರ ಪೂಜೆ, ಬಯಲಾಟ ಪಾಂಡವಾಶ್ವಮೇಧ ನಡೆಯಲಿದೆ ಎಂದವರು ಹೇಳಿದರು.

ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್‌ ಕುಮಾರ ಶೆಟ್ಟಿ, ಅನುವಂಶಿಕ ಮೊಕ್ತೇಸರ ಹಾಗೂ ಅನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ, ಅನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕೊಡೆತ್ತೂರುಗುತ್ತು ಬಿಪಿನ್‌ ಚಂದ್ರ ಶೆಟ್ಟಿ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ