ಮುಂದಿನ ತಿರುಗಾಟದಲ್ಲಿ ಕಟೀಲು ಯಕ್ಷಗಾನ ಮಂಡಳಿ 7ನೇ ಮೇಳ ಆರಂಭ

KannadaprabhaNewsNetwork |  
Published : May 27, 2025, 01:13 AM IST
ಕಟೀಲು ದೇವಳದ ಯಕ್ಷಗಾನ ಮಂಡಳಿಯ 7ನೇ ಮೇಳ 2025-26 ರ ಸಾಲಿನಲ್ಲಿ ಆರಂಭ | Kannada Prabha

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಯಕ್ಷಗಾನ ಮಂಡಳಿಗೆ ಪ್ರದರ್ಶನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ದೇವಿಯ ಅಪ್ಪಣೆಯಂತೆ 2025-26ರ ಸಾಲಿನ ತಿರುಗಾಟದಲ್ಲಿ 7ನೇ ಮೇಳವನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಯಕ್ಷಗಾನ ಮಂಡಳಿಗೆ ಪ್ರದರ್ಶನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ದೇವಿಯ ಅಪ್ಪಣೆಯಂತೆ 2025-26ರ ಸಾಲಿನ ತಿರುಗಾಟದಲ್ಲಿ 7ನೇ ಮೇಳವನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣರು ಹೇಳಿದ್ದಾರೆ.

ಕಟೀಲಿನ 7ನೇ ಮೇಳದ ಆರಂಭದ ಬಗ್ಗೆ ಕಟೀಲು ದೇವಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 7ನೇ ಮೇಳ ಆರಂಭಿಸುವ ಬಗ್ಗೆ ದುರ್ಗೆಯ ಸನ್ನಿಧಿಯಲ್ಲಿ ಭಾನುವಾರ ಆಡಳಿತ ಮಂಡಳಿ, ಅರ್ಚಕ ವರ್ಗ, ಮೇಳದ ಆಡಳಿತ ಮತ್ತು ಪ್ರಮುಖರ ಉಪಸ್ಥಿತಿಯಲ್ಲಿ ಮಹಾಪೂಜೆ ಬಳಿಕ ವಿಶೇಷ ಪ್ರಾರ್ಥನೆ ಮೂಲಕ ಅರಿಕೆ ಮಾಡಿದ್ದು, ದೇವಿಯು ಒಪ್ಪಿಗೆ ನೀಡಿದ್ದರಿಂದ 7ನೇ ಮೇಳವನ್ನು ಆರಂಭಿಸುವ ನಿರ್ಧಾರ ಮಾಡಲಾಗಿದೆ ಎಂದರು.

ದೇವಳದಲ್ಲಿ 1ನೇ ಮೇಳ ಆರಂಭದ ಬಗ್ಗೆ ನಿಖರ ಮಾಹಿತಿಯಿಲ್ಲ, 2ನೇ ಮೇಳವು 1965ರಲ್ಲಿ, 3ನೇ ಮೇಳ 82-83ರಲ್ಲಿ, 4ನೇ ಮೇಳ 93-94ರಲ್ಲಿ, 5ನೇ ಮೇಳ 2010-11ರಲ್ಲಿ, 6ನೇ ಮೇಳವು 2013-14ರಲ್ಲಿ ಆರಂಭಗೊಂಡಿದ್ದು, ಇದೀಗ 7ನೇ ಮೇಳವು ನ.16ರಂದು ಕಟೀಲು ಯಕ್ಷಗಾನ ಮೇಳದ 2025-26ರ ತಿರುಗಾಟದ ಸಂದರ್ಭದಲ್ಲಿ ಆರಂಭಗೊಳ್ಳಲಿದೆ ಎಂದರು.

7ನೇ ಮೇಳಕ್ಕೆ ಬೇಕಾದ ಚಿನ್ನದ ಕಿರೀಟ ಈಗಾಗಲೇ ಇದೆ. ತೊಟ್ಟಿಲು ಸೇರಿದಂತೆ ಮೇಳದ ಪರಿಕರಗಳಿಗೆ ಈಗಾಗಲೇ ಭಕ್ತರು ಆಸಕ್ತಿ ವಹಿಸಿದ್ದು, ದೇವಳಕ್ಕೆ ಯಾವುದೇ ಖರ್ಚು ಬಾರದ ರೀತಿಯಲ್ಲಿ 7ನೇ ಮೇಳ ಆರಂಭಗೊಳ್ಳಲಿದೆ. 7ನೇ ಮೇಳಕ್ಕೆ ಕಲಾವಿದರ ಕೊರತೆಯಿಲ್ಲ. ದೇವಳದ 6 ಮೇಳದಲ್ಲಿ ಪ್ರಬುದ್ಧ ಕಲಾವಿದರಿದ್ದು ಜೊತೆಗೆ ಉತ್ತಮ ಅನುಭವವನ್ನು ಹೊಂದಿರುವ ಹವ್ಯಾಸಿ ಕಲಾವಿದರಿದ್ದಾರೆ. 7ನೇ ಮೇಳಕ್ಕೆ ಬೇಕಾದ ಬಸ್‌ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು ತಿಳಿಸಿದರು.

ವೀಳ್ಯದ ಹೆಚ್ಚಳ, ಕಲಾವಿದರ ಸಂಭಾವನೆ ಏರಿಕೆ ಮತ್ತಿತರ ವಿಷಯಗಳ ಬಗ್ಗೆ ನ.16ರಂದು ನಿರ್ಧರಿಸಲಾಗುವುದು. ಪ್ರತಿವರ್ಷ ಸುಮಾರು 180 ದಿನಗಳಲ್ಲಿ 1080 ಪ್ರದರ್ಶನ ಸಿಗಲಿದ್ದು, ಅದರಲ್ಲಿ 450 ಶಾಶ್ವತ ಪ್ರದರ್ಶನವಿದೆ. 2013-14ರಲ್ಲಿ ತತ್ಕಾಲ್‌ ವ್ಯವಸ್ಥೆ ಆರಂಭಿಸಿದ್ದು, ಸುಮಾರು 240 ಪ್ರದರ್ಶನ ತತ್ಕಾಲ್‌ ಮೂಲಕ ನೀಡಲಾಗುತ್ತದೆ. ಈ ವರ್ಷ ಸುಮಾರು 844 ಹೆಚ್ಚುವರಿ ಬುಕ್ಕಿಂಗ್‌ ಆಗಿದ್ದು, ಈಗಾಗಲೇ ಸುಮಾರು 7000 ಪ್ರದರ್ಶನ ಬುಕ್ಕಿಂಗ್‌ ಆಗಿದೆ ಎಮದು ಹೇಳಿದರು.

7ನೇ ಮೇಳ ಆರಂಭದಿಂದ ಯಕ್ಷಗಾನ ಪ್ರದರ್ಶನದ ಭಕ್ತರ ಒತ್ತಡವನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ ನಿಭಾಯಿಸುವ ಪ್ರಯತ್ನ ಮಾಡಬಹುದು. ಕಾನೂನಿನ ತೊಡಕಿನಿಂದ ಈಗಿರುವ ರೀತಿಯಲ್ಲಿ ಕಾಲಮಿತಿಯಲ್ಲಿ ಯಕ್ಷಗಾನ ಪ್ರದರ್ಶನ ಮುಂದುವರಿಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಟೀಲು ದೇವಳದ ಅಡಳಿತ ಮಂಡಳಿ ಅಧ್ಯಕ್ಷ ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರು ಗುತ್ತು, ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ, ಬಿಪಿನ್‌ ಪ್ರಸಾದ್‌ ಕೊಡೆತ್ತೂರು ಗುತ್ತು, ಪ್ರವೀಣ್‌ ಭಂಡಾರಿ, ಐಕಳ ಗಣೇಶ್‌ ಶೆಟ್ಟಿ ಉಪಸ್ಥಿತರಿದ್ದರು.

ಕಟೀಲು 6 ಮೇಳಗಳ ತಿರುಗಾಟ ಸಂಪನ್ನ

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಪ್ರಸ್ತುತ ಸಾಲಿನ ಕೊನೆಯ ಪ್ರದರ್ಶನ ಭಾನುವಾರ ಮಳೆಯ ನಡುವೆ ದೇವಳ ರಥಬೀದಿಯಲ್ಲಿ ನಡೆಯಿತು. ಸಂಜೆ ಚೌಕಿ ಪೂಜೆಯಾಗಿ ರಾತ್ರಿ ಪಂಚಕಲ್ಯಾಣ; ಹೈಮವತೀ-ಶ್ರೀಮತಿ-ವಿದ್ಯುನ್ಮತಿ-ಜಾಂಬವತಿ-ಪದ್ಮಾವತಿ ಯಕ್ಷಗಾನ ಪ್ರದರ್ಶನ ನಡೆದು, ಸೋಮವಾರ ಬೆಳಗ್ಗೆ ಗೆಜ್ಜೆ ಬಿಚ್ಚುವ ಮೂಲಕ ಈ ಸಾಲಿನ ತಿರುಗಾಟ ಸಂಪನ್ನಗೊಂಡಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...