23ರಂದು ಕಟೀಲು ಆಸ್ರಣ್ಣ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಅಭಿನಂದನೆ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಯಕ್ಷಗಾನ ಪ್ರೋತ್ಸಾಹಕ ಉಡುಪಿ ಪುತ್ತೂರಿನ ಪ್ರವೀಣ್‌ ಶೆಟ್ಟಿ ಅವರಿಗೆ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಬಂಗಾರದ ಪದಕ ಒಳಗೊಂಡಿದೆ. ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡುವರು. ಸಂಸದ ನಳಿನ್‌ ಕುಮಾರ್‌ ಕಟೀಲು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸುವರು.

ಕನ್ನಡಪ್ರಭ ವಾರ್ತೆ ಮಂಗಳೂರು

ಯಕ್ಷ ಪ್ರತಿಭೆ ಮಂಗಳೂರು ವತಿಯಿಂದ 15ನೇ ವರ್ಷದ ಸಂಭ್ರಮ- ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಕಾರ್ಯಕ್ರಮ ಡಿ.23ರಂದು ಸಂಜೆ 5.30ರಿಂದ ನಗರದ ಮಂಗಳಾದೇವಿ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ.ಯಕ್ಷಪ್ರತಿಭೆ ಸಂಚಾಲಕ ಸಂಜಯ ಕುಮಾರ್‌ ಶೆಟ್ಟಿ ಗೋಣಿಬೀಡು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಕ್ಷಗಾನ ಪ್ರೋತ್ಸಾಹಕ ಉಡುಪಿ ಪುತ್ತೂರಿನ ಪ್ರವೀಣ್‌ ಶೆಟ್ಟಿ ಅವರಿಗೆ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಬಂಗಾರದ ಪದಕ ಒಳಗೊಂಡಿದೆ. ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡುವರು. ಸಂಸದ ನಳಿನ್‌ ಕುಮಾರ್‌ ಕಟೀಲು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸುವರು. ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಪ್ರಶಸ್ತಿ ಪ್ರದಾನ ಮಾಡುವರು. ಮಾಜಿ ಸಚಿವ ಕೃಷ್ಣ ಪಾಲೆಮಾರ್‌ ಸನ್ಮಾನ ನೆರವೇರಿಸುವರು. ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮತ್ತಿತರರು ಭಾಗವಹಿಸುವರು. ಕದ್ರಿ ನವನೀತ ಶೆಟ್ಟಿ ಸಂಸ್ಮರಣೆ ಹಾಗೂ ಅಭಿನಂದನಾ ಭಾಷಣ ಮಾಡುವರು ಎಂದು ತಿಳಿಸಿದರು.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಡಿತ್ತಾಯ, ಮಹಾತ್ಮಾ ಗಾಂಧಿ ಅಂತಾರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತರಾದ ಅದಾನಿ ಗ್ರೂಪ್‌ನ ಕಿಶೋರ್‌ ಆಳ್ವ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎ. ಸುರೇಶ್‌ ರೈ ಅವರನ್ನು ಈ ವೇಳೆ ಅಭಿನಂದಿಸಲಾಗುವುದು. ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್‌, ಸಮಾಜ ಸೇವಕ ಯಜ್ಞೇಶ್ವರ ಬರ್ಕೆ, ಯಕ್ಷಗಾನ ಪ್ರೋತ್ಸಾಹಕ ವೆಂಕಟೇಶ ನಾವಡ ಅವರಿಗೆ ಗೌರವ ಸನ್ಮಾನ ನೆರವೇರಲಿದೆ. ಬಳಿಕ ಪಾವಂಜೆ ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.

ಯಕ್ಷ ಪ್ರತಿಭೆ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಗೌರವ ಸಲಹೆಗಾರ ಮೋಹನ್‌ದಾಸ್‌ ರೈ, ಉಪಾಧ್ಯಕ್ಷರಾದ ಅಶೋಕ್‌ ಶೆಟ್ಟಿ, ಸುಜಾತಾ ಆಳ್ವ ಮೋರ್ಗನ್ಸ್‌ಗೇಟ್‌, ಸದಸ್ಯ ವಸಂತ ಕದ್ರಿ, ರವಿ ಅಲೆವೂರಾಯ ಇದ್ದರು.

Share this article