ಆರೋಗ್ಯದ ಕಡೆಗೂ ಕಾಳಜಿ ವಹಿಸಿ: ಕುಂಬಾರ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸರ್ಕಾರದ ಅನುಮೋದನೆಯಂತೆ ಸಂಸ್ಥೆಯಲ್ಲಿ ಹಂತ ಹಂತವಾಗಿ ವಿವಿಧ ರೀತಿಯ ಸುಮಾರು 800ಕ್ಕೂ ಹೆಚ್ಚು ಹೊಸ ಬಸ್‌ ಸೇರ್ಪಡೆಯಾಗಲಿವೆ: ಬಸವರಾಜ್

ಹುಬ್ಬಳ್ಳಿ: ನಿರಂತರ ಕರ್ತವ್ಯದ ಒತ್ತಡದ ನಡುವೆಯೂ ಸಾರಿಗೆ ಸಿಬ್ಬಂದಿ ತಮ್ಮ ಹಾಗೂ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಶಶಿಧರ ಕುಂಬಾರ ಸಲಹೆ ನೀಡಿದ್ದಾರೆ.

ವಿಹಾನ ಹಾರ್ಟ್ ಸೆಂಟರ್ ಹಾಗೂ ವಾಸನ್ ಐ ಕೇರ್ ಸಹಯೋಗದಲ್ಲಿ ಹುಬ್ಬಳ್ಳಿ ಗ್ರಾಮಾಂತರ 2 ನೇ ಘಟಕದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ವಿವಿಧ ಪ್ರತಿಷ್ಟಿತ ಆಸ್ಪತ್ರೆಗಳ ಸಹಯೋಗದಲ್ಲಿ ಘಟಕಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುತ್ತಿದೆ. ಅವುಗಳ ಸದುಪಯೋಗಪಡಿಸಿಕೊಳ್ಳಬೇಕು. ತಮ್ಮ ಹಾಗೂ ಕುಟುಂಬದ ಸದಸ್ಯರ ಹಿತದೃಷ್ಟಿಯಿಂದ ಸ್ವ ಇಚ್ಚೆಯಿಂದ ಗುಂಪು ವಿಮಾ ಯೋಜನೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಯಾಂತ್ರಿಕ ಶಿಲ್ಪಿ ಬಸವರಾಜ್ ಅಮ್ಮನವರ ಮಾತನಾಡಿ, ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸರ್ಕಾರದ ಅನುಮೋದನೆಯಂತೆ ಸಂಸ್ಥೆಯಲ್ಲಿ ಹಂತ ಹಂತವಾಗಿ ವಿವಿಧ ರೀತಿಯ ಸುಮಾರು 800ಕ್ಕೂ ಹೆಚ್ಚು ಹೊಸ ಬಸ್‌ ಸೇರ್ಪಡೆಯಾಗಲಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ, ಸಂಸ್ಥೆಯಲ್ಲಿ ಹಲವಾರು ಪ್ರಯಾಣಿಕ ಸ್ನೇಹಿ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಸಾರ್ವಜನಿಕರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ವಿಭಾಗೀಯ ಸಂಚಾರ ಅಧಿಕಾರಿ ಕೆ.ಎಲ್. ಗುಡೆನ್ನವರ, ಕಾರ್ಮಿಕ ಕಲ್ಯಾಣ ಅಧಿಕಾರಿ ರಾಜೇಂದ್ರ, ಘಟಕ ವ್ಯವಸ್ಥಾಪಕಿ ರೋಹಿಣಿ, ವಿಹಾನ ಹಾರ್ಟ್ ಕೇರ್ ಸೆಂಟರ್ ಹಾಗೂ ವಾಸನ್ ಐ ಕೇರ್ ಆಸ್ಪತ್ರೆಯ ಪಿ.ಆರ್.ಓ.ಗಳು, ತಜ್ಞ ವೈದ್ಯರು ಮತ್ತು ಸಾರಿಗೆ ಸಂಸ್ಥೆಯ ಚಾಲಕರು,ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿ ಮತ್ತಿತರರು ಇದ್ದರು.

Share this article