ಎಲ್ಲರೂ ಮಕ್ಕಳನ್ನು ಶಾಲೆಗೆ ಕಳಿಸುವ ಮೂಲಕ ಶಿಕ್ಷಣವಂತರನ್ನಾಗಿ ಮಾಡಿ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್‌ ನಗರದಲ್ಲಿ ಶ್ರೀದುರ್ಗಾದೇವಿ 71ನೇ ಕಾರ್ತಿಕೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಅದ್ಧೂರಿ ಭಜನಾ ಪದಗಳ ಕಾರ್ಯಕ್ರಮವನ್ನು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಉದ್ಘಾಟಿಸಿದರು.

ಹಮ್ಮಿಗಿ ಅಂಬೇಡ್ಕರ್‌ ನಗರದಲ್ಲಿ ದುರ್ಗಾದೇವಿ ಕಾರ್ತಿಕೋತ್ಸವ

ಮುಂಡರಗಿ: ಶಿಕ್ಷಣ ಮನುಷ್ಯನ ಬದುಕಿನ ಮೌಲ್ಯವನ್ನು ಹೆಚ್ಚಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಎಲ್ಲರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ನಾವು ಅತ್ಯಂತ ಎತ್ತರಕ್ಕೇರಿ ಸಾಧನೆ ಮಾಡಬೇಕೆಂದರೆ ಅದಕ್ಕೆ ಶಿಕ್ಷಣವೊಂದೇ ದಾರಿ. ಆದ್ದರಿಂದ ಎಲ್ಲರೂ ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸುವ ಮೂಲಕ ಶಿಕ್ಷಣವಂತರನ್ನಾಗಿ ಮಾಡಿರಿ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಹೇಳಿದರು.

ಅವರು ಮಂಗಳವಾರ ಸಂಜೆ ತಾಲೂಕಿನ ಹಮ್ಮಿಗಿ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್‌ ನಗರದಲ್ಲಿ ಶ್ರೀದುರ್ಗಾದೇವಿ 71ನೇ ಕಾರ್ತಿಕೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಅದ್ಧೂರಿ ಭಜನಾ ಪದಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಜರುಗುವ ಹಬ್ಬ ಮತ್ತು ಜಾತ್ರಾ ಮಹೋತ್ಸವಗಳು ನಮ್ಮ ಸಂಪ್ರದಾಯದ ಮಹತ್ವವನ್ನು ಸಾರುತ್ತವೆ. ಪ್ರತಿಯೊಂದು ಜಾತಿ ಧರ್ಮದವರು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಪರಸ್ಪರ ಪ್ರೀತಿ ವಿಶ್ವಾಸದಿಂದ ಎಲ್ಲರೂ ಜೀವನ ನಡೆಸಬೇಕು, ಹಬ್ಬಗಳ ನೆಪದಲ್ಲಿ ಎಲ್ಲರೂ ಒಂದೆಡೆ ಸೇರುವುದು ಎಲ್ಲರಲ್ಲಿಯೂ ಪರಸ್ಪರ ಬಾಂಧವ್ಯ ಬೆಸೆಯುತ್ತದೆ ಎಂದರು. ಅತಿಥಿಯಾಗಿ ಪಾಲ್ಗೊಂಡಿದ್ದ ತಹಸೀಲ್ದಾರ್‌ ಧನಂಜಯ ಮಾಲಗಿತ್ತಿ ಮಾತನಾಡಿ, ಸರ್ಕಾರ ವಿವಿಧ ಯೋಜನೆಯಡಿ ದಲಿತ ಸಮುದಾಯದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿವಗಾಗಿ ಮುಖ್ಯವಾಹಿನಿಗೆ ಬರಬೇಕು. ಪ್ರತಿಯೊಂದು ಜಾತಿ ಧರ್ಮದವರೊಂದಿಗೆ ಸಹೋದರರಂತೆ ಪ್ರೀತಿ, ವಿಶ್ವಾಸದಿಂದ ಬಾಳಬೇಕು ಎಂದರು.ಮಹಾಂತೇಶಯ್ಯ ಕಲ್ಮಠ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷ ಅಬಾಸಾಹೇಬ ಬಹದ್ದೂರ ದೇಸಾಯಿ, ಉಪಾಧ್ಯಕ್ಷೆ ಕಸ್ತೂರೆವ್ವ ಗುಡದಪ್ಪ ತಳವಾರ, ಚನ್ನವೀರಪ್ಪ ಯಲಿಗಾರ, ಲಲಿತಮ್ಮ ಯಲಿಗಾರ, ಇಸ್ಮಾಯಿಲ್‌ಖಾನ ತಂಬ್ರಳಿ, ರಾಜು ಡಾವಣಗೆರಿ, ಸೋಮಣ್ಣ ಹೈತಾಪೂರ, ದುರಗಪ್ಪ ಹರಿಜನ, ದೇವಪ್ಪ ಹಮ್ಮಿಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article