ಕನ್ನಡಪ್ರಭ ವಾರ್ತೆ ಮಡಿಕೇರಿ
ಕಟ್ಟೆಮಾಡು ಪಾಪಳಕೇರಿ ಮಾದೇವ ದೇವರ ಸ್ಥಾನಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದೆ. ಕೊಡಗಿನಲ್ಲಿ ಪಾಲೇರಿ ರಾಜವಂಶ ಸ್ಥಾಪನೆಯಾಗುವ ಮೊದಲೇ ಈ ದೇವಾಲಯವಿದ್ದು, ಕೆಲವು ಕೊಡವ ಭಾಷಿಕ ಕುಟುಂಬಗಳು ವರ್ಷಾವಧಿ ಪೂಜೆ ನಡೆಸುತ್ತಾ ಬಂದಿದೆ. ಆದರೆ ಕೆಲವು ಪ್ರಭಾವಿ ಜಾತಿವಾದಿಗಳು ಜನರ ದಿಕ್ಕು ತಪ್ಪಿಸಿ ಮಾದೇವ ದೇವರ ಸ್ಥಾನದ ಹೆಸರನ್ನು ಮೃತ್ಯುಂಜಯವೆಂದು ಮರುನಾಮಕರಣ ಮಾಡಿ ಹೊರನಾಡಿನ ಸಂಪ್ರದಾಯವನ್ನು ಮೂಲನಿವಾಸಿಗಳ ಮೇಲೆ ಹೇರುವ ಪ್ರಯತ್ನಗಳು ನಡೆದಿದೆ ಎಂದು ಪರದಂಡ ಸುಬ್ರಮಣಿ ಆರೋಪಿಸಿದರು.
ಜಂಟಿ ಕಾರ್ಯದರ್ಶಿ ನಂದೇಟಿರ ರಾಜಾ ಮಾದಪ್ಪ ಮಾತನಾಡಿ, ದೇವಾಲಯದಲ್ಲಿ ಸಂಘರ್ಷ ನಡೆದಿದ್ದು, ಹಲ್ಲೆ ಕೂಡ ಆಗಿದೆ. ದೇವಾಲಯಗಳ ಉತ್ಸವದ ಸಂದರ್ಭ ಕೊಡವ ಸಾಂಪ್ರದಾಯಿಕ ಉಡುಪು ತೊಡಲು ಅವಕಾಶವಿದೆ, ಕೇರಳದ ದೇವಾಲಯಗಳಿಗೂ ಕೊಡವ ಉಡುಪು ತೊಡುತ್ತೇವೆ. ಎಲ್ಲೂ ಇಲ್ಲದ ಅಡ್ಡಿ ಇಲ್ಲಿ ಯಾಕೆ ಎಂದು ಪ್ರಶ್ನಿಸಿದರು. ಕೊಡವ ಉಡುಪು ತೊಟ್ಟರೆ ಯಾವುದೇ ಭಕ್ತರಿಗೆ ತೊಂದರೆಯಾಗುವುದಿಲ್ಲ, ನಮ್ಮ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ ಅಷ್ಟೆ. ದೇವಾಲಯದ ಕಾರ್ಯಗಳು ಸುಸೂತ್ರವಾಗಿ ಒಗ್ಗಟ್ಟನಿಂದ ನಡೆಯಬೇಕೆನ್ನುವುದು ನಮ್ಮೆಲ್ಲರ ಅಪೇಕ್ಷೆಯಾಗಿದೆ. ಆದರೆ ಕೊಡವ ಸಾಂಪ್ರದಾಯಿಕ ಉಡುಪಿಗೆ ಅಡ್ಡಿಯಾಗಬಾರದು ಎಂದರು.ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ, ಕಾರ್ಯದರ್ಶಿ ಕೀತಿಯಂಡ ವಿಜಯ್ ಕುಮಾರ್ ಹಾಗೂ ಜಂಟಿ ಕಾರ್ಯದರ್ಶಿ ಮೂವೇರ ರೇಖಾ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.