ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಕೃಷಿ ಮತ್ತು ಕೃಷಿಯೇತರ ಜೀವನೋಪಾಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಜಿಲ್ಲೆಯ ಕೆರಗೋಡು ಸಂಜೀವಿನಿ ಒಕ್ಕೂಟದ ಅರಸಮ್ಮ ಮಹಿಳಾ ಸ್ವ-ಸಹಾಯ ಸಂಘಕ್ಕೆ 2026ನೇ ಸಾಲಿನ ಪ್ರತಿಷ್ಠಿತ ಕೌಶಲ್ಯ ಕರ್ನಾಟಕ ಪ್ರಶಸ್ತಿ ಘೋಷಣೆಯಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಕೃಷಿ ಮತ್ತು ಕೃಷಿಯೇತರ ಜೀವನೋಪಾಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಜಿಲ್ಲೆಯ ಕೆರಗೋಡು ಸಂಜೀವಿನಿ ಒಕ್ಕೂಟದ ಅರಸಮ್ಮ ಮಹಿಳಾ ಸ್ವ-ಸಹಾಯ ಸಂಘಕ್ಕೆ 2026ನೇ ಸಾಲಿನ ಪ್ರತಿಷ್ಠಿತ ಕೌಶಲ್ಯ ಕರ್ನಾಟಕ ಪ್ರಶಸ್ತಿ ಘೋಷಣೆಯಾಗಿದೆ.
ರಾಜ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಕೃಷಿಯೇತರ ಜೀವನೋಪಾಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ರಾಜ್ಯದ ಒಟ್ಟು 8 ಸ್ವ-ಸಹಾಯ ಗುಂಪುಗಳನ್ನು ಈ ಗೌರವಕ್ಕೆ ಆಯ್ಕೆ ಮಾಡಿದ್ದು, ಇದರಲ್ಲಿ ಮಂಡ್ಯದ ಅರಸಮ್ಮ ಮಹಿಳಾ ಸ್ವ-ಸಹಾಯ ಸಂಘವು ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.
ಅರಸಮ್ಮ ಮಹಿಳಾ ಸ್ವ-ಸಹಾಯ ಸಂಘವು ಕಳೆದ ಒಂದು ವರ್ಷದಿಂದ ಜಿಪಂ ಕಚೇರಿ ಆವರಣದ ಪಕ್ಕದಲ್ಲಿ ಮತ್ಸ್ಯ ವಾಹಿನಿ - ಅಕ್ಕನ ಮನೆ ಮೀನೂಟ ಮೊಬೈಲ್ ಕ್ಯಾಂಟೀನ್ ಅನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ಮಹಿಳೆಯರ ಈ ಸ್ವಾವಲಂಬಿ ಉದ್ಯಮಶೀಲತೆ ಮತ್ತು ಶ್ರಮವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಇದು ಜಿಲ್ಲೆಯ ಹಾಗೂ ರಾಜ್ಯದ ಇತರೆ ಮಹಿಳಾ ಸ್ವ-ಸಹಾಯ ಸಂಘಗಳಿಗೆ ದೊಡ್ಡ ಪ್ರೇರಣೆಯಾಗಲಿದೆ.
ಜಿಪಂ ಮೀನುಗಾರಿಕಾ ಇಲಾಖೆ ಮತ್ತು ಕರ್ನಾಟಕ ಮತ್ಸ್ಯ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಜಿಲ್ಲೆಯ ಒಟ್ಟು 11 ಮಹಿಳಾ ಸ್ವ-ಸಹಾಯ ಸಂಘಗಳಿಗೆ ‘ಮತ್ಸ್ಯ ವಾಹಿನಿ - ಅಕ್ಕನ ಮನೆ ಮೀನೂಟ’ ಮೊಬೈಲ್ ಕ್ಯಾಂಟೀನ್ ವಿತರಿಸಿತ್ತು. ಈ ಯೋಜನೆಗೆ ಈಗ ರಾಜ್ಯ ಮಟ್ಟದ ಮನ್ನಣೆ ದೊರೆತಂತಾಗಿದೆ.
ಈ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸುವ ಮುನ್ನ ಆಯ್ಕೆಯಾದ ಮಹಿಳಾ ಸಂಘದ ಸದಸ್ಯರಿಗೆ ಹಲವು ಸುತ್ತುಗಳ ವೃತ್ತಿಪರ ತರಬೇತಿ ನೀಡಲಾಗಿತ್ತು. ತರಬೇತಿ ನಂತರ ಕೇವಲ ಒಂದೇ ಜಾಗಕ್ಕೆ ಸೀಮಿತವಾಗದೆ ಜಿಲ್ಲೆಯ ಪ್ರಮುಖ ಕೃಷಿ ಮೇಳಗಳು ಹಾಗೂ ಫಲಪುಷ್ಪ ಪ್ರದರ್ಶನಗಳಂತಹ ಸಾರ್ವಜನಿಕ ಪ್ರದರ್ಶನಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಜಿಲ್ಲಾಡಳಿತವು ಸೂಕ್ತ ಅವಕಾಶಗಳನ್ನು ಸೃಷ್ಟಿಸಿಕೊಟ್ಟಿತ್ತು. ಸೃಜನಾತ್ಮಕ ಅವಕಾಶಗಳು ಮತ್ತು ಮಹಿಳೆಯರ ಕಠಿಣ ಪರಿಶ್ರಮದ ಫಲವಾಗಿ ಇಂದು ಮಂಡ್ಯದ ಮತ್ಸ್ಯ ವಾಹಿನಿ ಕ್ಯಾಂಟೀನ್ಗೆ ಈ ಉನ್ನತ ಪ್ರಶಸ್ತಿ ಒಲಿದುಬಂದಿದೆ.
ಬೆಂಗಳೂರಿನ ಪ್ರತಿಷ್ಠಿತ ಅಶೋಕ ಹೋಟೆಲ್ನಲ್ಲಿ ನ.5 ರಂದು ಹಮ್ಮಿಕೊಳ್ಳಲಾಗಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಅಧಿಕೃತವಾಗಿ ಸಂಘಕ್ಕೆ ಪ್ರದಾನ ಮಾಡಲಾಗುವುದು. ಸಮಾರಂಭದಲ್ಲಿ ಭಾಗವಹಿಸಲು ಜಿಪಂ ಸಿಇಒ ನಂದಿನಿ ಕೆ.ಆರ್., ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ ಹಾಗೂ ಪ್ರಶಸ್ತಿಗೆ ಭಾಜನವಾಗಿರುವ ಅರಸಮ್ಮ ಮಹಿಳಾ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರಿಗೆ ಆಹ್ವಾನ ನೀಡಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.