ಕೌಟಿಲ್ಯ-ಪಾಟೀಲ ಜಯಕ್ಕೆ ಪಟಾಕಿ ಸಿಡಿಸಿ ವಿಜಯೋತ್ಸವ

KannadaprabhaNewsNetwork |  
Published : Jun 20, 2026, 01:30 AM IST
19ಕೆಡಿವಿಜಿ1, 2-ವಿಧಾನ ಪರಿಷತ್ ಗೆ ರಘು ಕೌಟಿಲ್ಯ, ಲಿಂಗರಾಜ ಪಾಟೀಲ್ ಆಯ್ಕೆಯಾದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಶುಕ್ರವಾರ ಬಿಜೆಪಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು. | Kannada Prabha

ಸಾರಾಂಶ

ವಿಧಾನ ಪರಿಷತ್ ಚುನಾವಣೆಯಲ್ಲಿ ರಘು ಕೌಟಿಲ್ಯ ಹಾಗೂ ಲಿಂಗರಾಜ ಪಾಟೀಲ್ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪಟಾಕಿ ಸಿಡಿಸಿ, ಪರಸ್ಪರರಿಗೆ ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.

- ಮೇಲ್ಮನೆಯಲ್ಲಿ ಕಾಂಗ್ರೆಸ್ ಸರ್ಕಾರದ ಕಿವಿ ಹಿಂಡುವ ಕೆಲಸ ಆಗಲಿದೆ: ರಾಜನಹಳ್ಳಿ ಶಿವಕುಮಾರ ಹೇಳಿಕ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಧಾನ ಪರಿಷತ್ ಚುನಾವಣೆಯಲ್ಲಿ ರಘು ಕೌಟಿಲ್ಯ ಹಾಗೂ ಲಿಂಗರಾಜ ಪಾಟೀಲ್ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪಟಾಕಿ ಸಿಡಿಸಿ, ಪರಸ್ಪರರಿಗೆ ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.

ನಗರದ ಬಿಜೆಪಿ ಜಿಲ್ಲಾ ಕಚೇರಿ ಎದುರು ಹಾಗೂ ಮಹಾತ್ಮ ಗಾಂಧಿ ವೃತ್ತದಲ್ಲಿ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ರಘು ಕೌಟಿಲ್ಯ ಹಾಗೂ ಲಿಂಗರಾಜ ಪಾಟೀಲ್‌ ಜಯ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಭಯರಿಗೆ ಜಯಕಾರ ಹಾಕುವ ಮೂಲಕ ಪಕ್ಷದ ಮುಖಂಡರು, ಕಾರ್ಯಕರ್ತರು ಸಂಭ್ರಮಸಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ವಿಧಾನ ಪರಿಷತ್‌ಗೆ ಆಯ್ಕೆಯಾದ ರಘು ಕೌಟಿಲ್ಯ ಹಾಗೂ ಲಿಂಗರಾಜ ಪಾಟೀಲ ಆಯ್ಕೆಯಾಗುವುದರೊಂದಿಗೆ ಮೇಲ್ಮನೆಯಲ್ಲಿ ಕಾಂಗ್ರೆಸ್‌ ಪಕ್ಷದ ಜನ ವಿರೋಧಿ ನೀತಿ, ಧೋರಣೆಗಳ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸಲಿದ್ದಾರೆ ಎಂದರು.

ಬಿಜೆಪಿಯು ಸಾಮಾನ್ಯ ಅಭ್ಯರ್ಥಿಗಳಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡಿದೆ. ಸಾಮಾನ್ಯ ಕಾರ್ಯಕರ್ತರಿಗೆ ಪರಿಷತ್ ಗೆಲ್ಲಿಸಿ, ಸದಸ್ಯರಾಗಿ ಮಾಡಿದೆ. ಇಬ್ಬರ ಪಕ್ಷ ನಿಷ್ಟೆಗೆ ಸಿಕ್ಕ ಗೌರವ, ಪ್ರೋತ್ಸಾಹ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ನೀಡುತ್ತಿದೆ. ಎಲ್ಲ ವರ್ಗದವರಿಗೆ ಆದ್ಯತೆ ನೀಡಿದೆ. ಬರೀ ಹಣವಿದ್ದವರಿಗೆ ಮಾತ್ರ ಮೇಲ್ಮನೆ ಟಿಕೆಟ್ ನೀಡುವ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದೇ ಬಿಜೆಪಿ ಎಂದು ಅವರು ತಿಳಿಸಿದರು.

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಪಕ್ಷಕ್ಕಾಗಿ ಹಗಲಿರುಳು ದುಡಿದವರಿಗೆ ಮನ್ನಣೆ ನೀಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದೇಶದಲ್ಲಿ ಬೇರೆ ಯಾವ ಪಕ್ಷಗಳಲ್ಲಿಯೂ ಇಂತಹದ್ದೊಂದು ಸಂಪ್ರದಾಯ ಇಲ್ಲ. ದೇಶದ ಜನರು ಹಾಗಾಗಿಯೇ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಒಪ್ಪಿರುವುದು. ರಘು ಕೌಟಿಲ್ಯ, ಲಿಂಗರಾಜ್ ಪಾಟೀಲರು ಸಂಘಟನೆಗೆ ಅವಿರತ ಶ್ರಮ ವಹಿಸಿದ್ದಾರೆ. ಪಕ್ಷ ವಹಿಸಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದವರು ಎಂದು ಅವರು ಹೇಳಿದರು.

ರಘು ಕೌಟಿಲ್ಯ, ಲಿಂಗರಾಜ ಪಾಟೀಲರ ಪಕ್ಷ ನಿಷ್ಷೆ, ಸೇವೆ, ಸಂಘಟನೆ ಸೇರಿದಂತೆ ಎಲ್ಲ ಆಯಾಮಗಳಲ್ಲೂ ಚಿಂತಿಸಿ, ಪಕ್ಷ ಟಿಕೆಟ್ ನೀಡಿತ್ತು. ಗೆದ್ದಿರುವ ಇಬ್ಬರೂ ಅಭ್ಯರ್ಥಿಗಳು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಅಕ್ರಮ, ಭ್ರಷ್ಟಾಚಾರ, ಜನವಿರೋಧಿ ನೀತಿಗಳ ಬಗ್ಗೆ ಸಮರ್ಥವಾಗಿ ಮೇಲ್ಮನೆಯಲ್ಲಿ ಧ್ವನಿ ಎತ್ತಲಿದ್ದಾರೆಂಬ ಸಂಪೂರ್ಣ ವಿಶ್ವಾಸ ನಮಗಿದೆ. ಕೆಳ ಹಂತದಿಂದ ಪಕ್ಷದಲ್ಲಿ ಬೆಳೆದು ಬಂದ ಇಂತಹ ವ್ಯಕ್ತಿಗಳು ಮೇಲ್ಮನೆಯಲ್ಲಿ ರಾಜ್ಯದ ಜನರ ಧ್ವನಿಯಾಗಿ ಹೋರಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಒಬಿಸಿ ಘಟಕದ ಅಧ್ಯಕ್ಷ ಮಹೇಂದ್ರ ಹೆಬ್ಬಾಳ್, ಅಣಜಿ ಗುಡ್ಡೇಶ, ಕಿರೀಟ್ ಸಿ.ಕಲಾಲ್‌, ಶಂಕರಗೌಡ ಬಿರಾದಾರ್‌, ಶಿವನಗೌಡ ಪಾಟೀಲ, ಕಿಶೋರಕುಮಾರ, ಶಿವಾನಂದ, ಬಾಲರಾಜ ಶ್ರೇಷ್ಠಿ, ನಿಂಗರಾಜ ಹಾವನೂರು, ಡೈಮಂಡ್ ಮಂಜು, ಸುರೇಂದ್ರ ಮೊಯ್ಲಿ, ಮಂಜುನಾಥ ಗುತ್ತೂರು, ರಾಮಚಂದ್ರ, ನವೀನಕುಮಾರ, ಏಕಾಂತಪ್ಪ,ಸಾಂಬಾಜಿರಾವ್, ಎಚ್.ಬಿ. ದುಗ್ಗೇಶ ಇತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

- - -

(ಕೋಟ್‌) ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತವನ್ನು ವಿಪಕ್ಷಗಳ ಜನ ಪ್ರತಿನಿಧಿಗಳೂ ಒಪ್ಪುತ್ತಿದ್ದಾರೆ. ಈಚೆಗೆ ನಡೆದ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಆಳ್ವಿಕೆಯನ್ನು ಜನ ಒಪ್ಪಿರುವುದಕ್ಕೆ ಸಾಕ್ಷಿಯೆಂಬಂತೆ ಫಲಿತಾಂಶ ಬಂದಿದೆ. ಪಶ್ಚಿಮ ಬಂಗಾಳದ ಜಾಗೃತ ಮತದಾರರು ನೀಡಿರುವ ಫಲಿತಾಂಶವು ಮುಂಬರುವ ಕರ್ನಾಟಕ ವಿಧಾನಸಭೆ 2028ರ ಸಾರ್ವತ್ರಿಕ ಚುನಾವಣೆಗೂ ದಿಕ್ಸೂಚಿಯಾಗಿದೆ. ರಾಜ್ಯದ ಮತದಾರರು ಇಲ್ಲಿ ಬದಲಾವಣೆಯ ಕಹಳೆ ಊದಲಿದ್ದಾರೆ.

- ರಾಜನಹಳ್ಳಿ ಶಿವಕುಮಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿಜೆಪಿ.

- - -

-19ಕೆಡಿವಿಜಿ1, 2:

ವಿಧಾನ ಪರಿಷತ್‌ಗೆ ರಘು ಕೌಟಿಲ್ಯ, ಲಿಂಗರಾಜ ಪಾಟೀಲ್ ಆಯ್ಕೆಯಾದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಶುಕ್ರವಾರ ಬಿಜೆಪಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕರು ಅವರವರ ಆತ್ಮಸಾಕ್ಷಿಗೆ ಮತ ಚಲಾಯಿಸಿದ್ದಾರೆ
ಸೂಕ್ತ ಪರಿಷ್ಕರಣೆಯಿಂದ 14 ಲಕ್ಷ ಮತಗಳು ವಿಮರ್ಶೆಗೆ ಒಳಪಡುತ್ತದೆ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ