ದಟ್ಟ ಕಾಡಿನೊಳಗಿರುವ ಬೃಹತ್ ಗಾತ್ರದ ಲಿಂಗು
ಗುರುಶಾಂತ ಜಡೆಹಿರೇಮಠ
ಕನ್ನಡಪ್ರಭ ವಾರ್ತೆ ದಾಂಡೇಲಿಎತ್ತ ನೋಡಿದರತ್ತ ಹಚ್ಚ ಹಸಿರು, ದಟ್ಟ ಕಾಡು, ಕಾಡು ಮೃಗಗಳ ಗರ್ಜನೆ, ವಿವಿಧ ಪಕ್ಷಿಗಳ ಕಲರವ ಇವುಗಳ ಮಧ್ಯೆ ಕಾಳಿ ನದಿ ದಡದಲ್ಲಿ ಇದೇ ಬೃಹತ್ ಗಾತ್ರದ ಲಿಂಗು, ಅದುವೇ ಕವಳೇಶ್ವರ ಶಿವಲಿಂಗ.
ಕವಳಾ ಗುಹೆಯಲ್ಲಿ ಇರುವ ಕವಳೇಶ್ವರ ಶಿವಲಿಂಗ ದರ್ಶನ ಶಿವರಾತ್ರಿಯ ದಿನ ಅಂದು ನಡೆಯುವ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಜನ ಶಿವ ಭಕ್ತರು ಇಲ್ಲಿಗೆ ಆಗಮಿಸಿ ಪರಮೇಶ್ವರನ ದರ್ಶನ ಪಡೆದು, ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಕವಳಾ ಗುಹೆಯಲ್ಲಿರುವ ಈ ಶಿವಲಿಂಗ ದರ್ಶನ ವರ್ಷಕ್ಕೆ ಒಂದು ಬಾರಿ ಮಹಾಶಿವರಾತ್ರಿಯ ದಿನದಂದು ಮಾತ್ರ ಗುಹೆಯ ಒಳಗೆ ಹೋಗಿ ದರ್ಶನಕ್ಕೆ ಅವಕಾಶವಿದೆ. ಇಲ್ಲಿ ಮಹಾಶಿವರಾತ್ರಿಯಂದು ಭಗವಂತನ ದರ್ಶನಕ್ಕೆ ಬರಲು ಭಕ್ತರು ಮುಗಿ ಬೀಳುತ್ತಾರೆ. ಗುಹೆಯಲ್ಲಿ ಬೃಹತ್ ಆಕಾರದ ಕಲ್ಲಿನ ಕವಳೇಶ್ವರ ಲಿಂಗವಿದ್ದು, ಕಪ್ಪು ಮತ್ತು ನೇರಳೆ ಬಣ್ಣದಿಂದ ಕೂಡಿದ ಲಿಂಗವಾಗಿದೆ. ವರ್ಷಕ್ಕೆ ಒಂದು ಬಾರಿ ನಡೆಯುವ ಈ ಕವಳಾ ಜಾತ್ರೆಗೆ ತಾತ್ಕಾಲಿಕ ವಿದ್ಯುತ್ ನೀಡಲಾಗುತ್ತದೆ. ಕವಳಾಕ್ಕೆ ಹೋಗಲು ಎರಡು ಮಾರ್ಗಗಳಿವೆ ಒಂದು ಫನಸೋಲಿ ಗ್ರಾಮದಿಂದ ಕಾಡಿನ ಮಧ್ಯದಿಂದ ಇಳಿಜಾರು ರಸ್ತೆಯಿಂದ ಸಾಗಿ ಮೆಟ್ಟಿಲು ಇಳಿದು ಹೋಗುವುದು, ಇನ್ನೊಂದು ಅಂಬಿಕಾನಗರ ನಾಝರಿ ಭಾಗದಿಂದ ಮೆಟ್ಟಿಲುಗಳನ್ನು ಇಳಿದು ಕವಳಾಕ್ಕೆ ಹೋಗಬೇಕಾಗುತ್ತದೆ. ಕವಳಾ ಗುಹೆಯೊಳಗೆ ಇಕ್ಕಟ್ಟಾದ ದಾರಿಯಿಂದ ಸಾಗಿ ಶಿವಲಿಂಗ ದರ್ಶನ ಪಡೆಯಬೇಕು. ಬಂದ ದಾರಿಯಿಂದ ಮರಳಿ ಹೋಗುವುದಕ್ಕಾಗದೆ ಗುಹೆಯ ಇನ್ನೊಂದು ದಾರಿಯಿಂದ ಹೊರ ಬರಬೇಕಾಗುತ್ತದೆ. ಮಹಾಶಿವರಾತ್ರಿಯ ದಿನ ಬೆಳಗ್ಗೆಯಿಂದ ಸಂಜೆಯವರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕವಳೇಶ್ವರ ಲಿಂಗ ದರ್ಶನಕ್ಕೆ ಸಾವಿರಾರು ಶಿವಭಕ್ತರು ಸರದಿ ಸಾಲಿನಲ್ಲಿ ನಿಂತು ಶಿವಲಿಂಗ ದರ್ಶನ ಪಡೆಯಲು ಭಕ್ತಿಯಿಂದ ಕಾಯುವುದು ವಿಶೇಷ.
ಕವಳಾ ಗುಹೆ ದಟ್ಟ ಕಾಡಿನ ಮಧ್ಯೆ ಇರುವುದರಿಂದ ಅರಣ್ಯ ಇಲಾಖೆಯವರು ಕಾಡಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅರಣ್ಯ ಇಲಾಖೆಯವರು ಕೂಡ ನೀರು, ಬೆಲ್ಲ, ಕಡಲೆಕಾಯಿ ವಿತರಿಸುವ ವ್ಯವಸ್ಥೆ ಮಾಡುತ್ತಾರೆ. ಕಾಡಿನ ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು, ಕಾಡಿಗೆ ಯಾರು ಬೆಂಕಿ ಹಾಕಬಾರದು ಎಂಬ ತಿಳುವಳಿಕೆ ಫಲಕ ಮತ್ತು ಧ್ವನಿವರ್ಧಕದ ಮೂಲಕ ಭಕ್ತರಿಗೆ ತಿಳುವಳಿಕೆ ಮೂಡಿಸುತ್ತಾರೆ. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗುತ್ತದೆ. ಕವಳಾ ಜಾತ್ರೆಗೆ ದಾಂಡೇಲಿಯಿಂದ ಅಷ್ಟೇ ಅಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಂದಲೂ ಜನರು ಆಗಮಿಸುತ್ತಾರೆ. ಹಿಂದೆ ಜಾತ್ರೆಗೆ ಒಂದೆರಡು ಸಾವಿರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಆದರೆ ಈಗ ಸುಮಾರು ಐವತ್ತು ಸಾವಿರ ಭಕ್ತಾದಿಗಳು ಶಿವರಾತ್ರಿ ದಿನದಂದು ಶಿವಲಿಂಗ ದರ್ಶನಕ್ಕೆ ಬರುತ್ತಾರೆ.