ರಾಮನಗರ: ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣ ವಿಚಾರದಲ್ಲಿ ಕಾನೂನು ಹೋರಾಟದ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿರುವ ತಮಿಳುನಾಡಿಗೆ ಕಾವೇರಿ ನದಿ ರಕ್ಷಣಾ ಸಮಿತಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿ ವರದಾನವಾಗಲಿದೆ ಎಂದು ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ಎಚ್ಚರಿಸಿದರು.
ರಾಜ್ಯಗಳ ನಡುವೆ ನಡುವಿನ ಯಾವುದೇ ವಿವಾದಲ್ಲಿ ಕೇಂದ್ರ ಸರ್ಕಾರ ಹೊರತುಪಡಿಸಿ ಯಾವುದೇ ಸಂಘ ಸಂಸ್ಥೆಗಳು, ವ್ಯಕ್ತಿ ಮಧ್ಯ ಪ್ರವೇಶ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರ ಹೊರತಾಗಿಯೂ ಎಚ್.ಸಿ.ರಾಮು ಅಧ್ಯಕ್ಷತೆಯ ನಮ್ಮ ರಾಜ್ಯದ ಕಾವೇರಿ ನದಿ ರಕ್ಷಣಾ ಸಮಿತಿ ಸಲ್ಲಿಸಿರುವ ರಿಟ್ ಅರ್ಜಿ ತಮಿಳುನಾಡಿಗೆ ವರದಾನವಾಗಿದೆ. ಮೇ.30ರಂದು ಸುಪ್ರೀಂ ಕೋರ್ಟ್‌ಗೆ ಸಂವಿಧಾನ ಪರಿಚ್ಛೇದ 32ರ ಅಡಿಯಲ್ಲಿ ರಿಟ್ ಅರ್ಜಿಯನ್ನು ಸಲ್ಲಿಕೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ನದಿ ನೀರು ಹಂಚಿಕೆ ವಿಚಾರದಲ್ಲಿ ಮೊದಲನೆಯದಾಗಿ ರಿಟ್ ಅರ್ಜಿ ಸಲ್ಲಿಸುವಂತಿಲ್ಲ. ಮತ್ತೊಂದೆಡೆ ತಮಿಳುನಾಡಿನ ತಕರಾರು ಅರ್ಜಿ ಮತ್ತು ಪುನರ್ ಪರಿಶೀಲನಾ ಅರ್ಜಿ ವಜಾಗೊಂಡಿದೆ. ಇಂತಹ ಸಂದರ್ಭದಲ್ಲಿ ನಮ್ಮ ರಾಜ್ಯದಿಂದ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಕಾನೂನಿನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಲು ಅವಕಾಶವೇ ಇಲ್ಲ ಎನ್ನುವ ಮಾಹಿತಿ ಇಲ್ಲದೆ, ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿ ವಿಚಾರಣೆಯನ್ನು ಕೈಗೆತ್ತಿಕೊಂಡಲ್ಲಿ ವ್ಯಾಜ್ಯ ಸುಮಾರು 7-8 ವರ್ಷಗಳ ಕಾಲ ನಡೆಯುತ್ತದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತದೆಯೇ ಹೊರತು ಲಾಭವಾಗುವುದಿಲ್ಲ ಎಂದರು.ಮೇಕೆದಾಟು ವಿಚಾರದಲ್ಲಿ ಕಾನೂನಿನ ಎಲ್ಲಾ ಬಾಗಿಲುಗಳು ತಮಿಳುನಾಡಿಗೆ ಮುಚ್ಚಿರುವುದರಿಂದ, ಅರ್ಜಿಯ ವಿಚಾರಣೆ ನಡೆಯಲಿ ಎಂದು ತಕರಾರು ಹಾಕುವುದು ಸರಿಯಲ್ಲ. ಇದರಿಂದ ಕಾವೇರಿ ಕೊಳ್ಳದ ಜನತೆಗೆ ಅನ್ಯಾಯ ಮಾಡಿದಂತಾಗುತ್ತದೆ. ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ರಾಜ್ಯವು ಸಂಪೂರ್ಣ ಅನುಮತಿ ಪಡೆಯಲು ಈ ಅರ್ಜಿ ತೊಡಕಾಗಲಿದೆ. ಈ ಅರ್ಜಿ ಇತ್ಯರ್ಥವಾಗುವವರೆಗೂ ಯಾವುದೇ ಅನುಮತಿಗಳು ನಮಗೆ ದೊರೆಯುವುದಿಲ್ಲ ಎಂದು ಹೇಳಿದರು.
ಕಾವೇರಿ ನದಿ ತೀರ್ಪು 2018ರಲ್ಲಿಯೇ ಬಂದಿದೆ, ಅಂದೆಯೇ ಅದನ್ನು ಪ್ರಶ್ನಿಸಬೇಕು ಎಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿ, ದೇವೇಗೌಡರು, ಸಿದ್ದರಾಮಯ್ಯ, ಗೋಪಾಲಗೌಡರು ಸೇರಿದಂತೆ ಹಲವರ ಗಮನಕ್ಕೆ ತಂದರೂ ಯಾರೂ ಸಹ ತಮ್ಮ ಮಾತನ್ನು ಪರಿಗಣಿಸಲಿಲ್ಲ. ಇದಾದ ನಂತರ 2024ರಲ್ಲಿ ಅಸ್ತಿತ್ವಕ್ಕೆ ಬಂದ ಕಾವೇರಿ ನದಿ ರಕ್ಷಣಾ ಸಮಿತಿ, ಎರಡು ವರ್ಷಗಳಿಂದ ಸುಮ್ಮನಿದ್ದು, 2026ರಲ್ಲಿ ಮೇ 30ರಂದು ತಕರಾರು ಅರ್ಜಿ ಸಲ್ಲಿಸಲಾಗಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆಣಿಗೆರೆ ಮಲ್ಲಯ್ಯ, ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಮತ್ತಿತರರು ಇದ್ದರು.
ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.