ಕನ್ನಡಪ್ರಭ ವಾರ್ತೆ ಕಲಬುರಗಿ
ನದಿ ಬತ್ತಿ 3 ತಿಂಗಳಾಯ್ತು, ರಣ ಬಿಸಿಲಲ್ಲಿ ಜನ-ಜಾನುವಾರು ದಾಹ ಹೆಚ್ಚುತ್ತಿದೆ. ನದಿಯಲ್ಲಿ ನೀರು ಹರಿದರೇನೇ ಸಮಸ್ಯೆಗೆ ಪರಿಹಾರವೆಂದು ಜನ ಆಗ್ರಹಿಸುತ್ತಿದ್ದಾರೆ. ಇದೇ ಸಮಸ್ಯೆ ಮುಂದಿಟ್ಟುಕೊಂಡು ಶುರುವಾಗಿರುವ ಆಮರಣ ಉಪವಾಸ ಸತ್ಯಾಗ್ರಹ 5 ನೇ ದಿನಕ್ಕೆ ಕಾಲಿಟ್ಟಿದೆ. ಉಪವಾಸ ಕೈಗೊಂಡಿರುವ ರೈತ ಹೋರಾಟಗಾರ ಶಿವಕುಮಾರ್ ನಾಟೀಕಾರ್ ದೇಹಸ್ಥಿತಿ ಬಿಗಡಾಯಿಸುತ್ತಿದೆ. ಸೋಮವಾರ ರಾತ್ರಿ ವೈದ್ಯರ ತಂಡ ನಾಟೀಕಾರ್ ಅವರನ್ನು ತಪಾಸಣೆ ನಡೆಸಿದೆ.
ಭೀಮಾ ತೀರದಲ್ಲಿ ಜನರ ಹೋರಾಟ ಉಗ್ರಸ್ವರೂಪ ಪಡೆದುಕೊಳ್ಳುವ ಲಕ್ಷ್ಮಗಳಿವೆ, ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಇಲ್ಲಿನ ಹಾಲಿ ಸಾಸಕ ಎಮವೈ ಪಾಟೀಲ್, ಮಾಜಿ ಶಾಸಕ ಮಾಲೀಕಯ್ಯಾ ಗುತ್ತೇದಾರ್ ಇಬ್ಬರೂ ಸಮಸ್ಯೆ ಪರಿಹಾರ ಹುಡುಕುವ ಪ್ರಯತ್ನದ ಭಾಗವಾಗಿ ರಾಜಧಾನಿಗೆ ದೌಡಾಯಿಸಿದ್ದಾರೆ.ಜಲ ಸಂಪನ್ಮೂಲ ಇಲಾಖೆಗೆ ಮನವರಿಗೆ ಮಾಡಿಕೊಡುವ ಮೂಲಕ ಕೃಷ್ಣಾ ನದಿಯಿಂದಲಾದರೂ ತಕ್ಷಣಕ್ಕೆ 2 ಅಥವಾ 3 ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸಬೇಕು ಎಂಬುದೇ ಇವರ ಉದ್ದೇಶವಾಗಿದೆ. ಆದರೆ ಕೃಷ್ಣಾನದಿಯಲ್ಲೂ ನೀರಿನ ತತ್ವಾರ ಇರೋದರಿಂದ ಈ ಕೆಲಸವು ಸುಲಭದಲ್ಲಿ ಕೈಗೂಡದಂತಾಗಿದೆ. ಹೀಗಾಗಿ ಭೀಮಾ ತೀರದಲ್ಲಿ ನೀರಿಲ್ಲದೆ ಕಾವು ಹೆಚ್ಚಿದೆ. ಜೊತೆಗೇ ರೈತರ ಹೋರಾಟದಿಂದಲೂ ಕಾವು ಹೆಚ್ಚುತ್ತ ಸಾಗಿದೆ.
ಏತನ್ಮಧ್ಯೆ ಪಕ್ಷಭೇದ ಮರೆತು ಹೋರಾಟಕ್ಕೆ ಬೆಂಬಲಿಸಿರುವ ಶಾಸಕ ಎಂವೈ ಪಾಟೀಲ್ ಹಾಗೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ನಿರಶನ ಕೈಬಿಡುವಂತೆ ಶಿವಕುಮಾರ್‌ಗೆ ಕೋರಿದ್ದಾರೆ.ಭೀಮಾ ತೀರದಲ್ಲೆಲ್ಲಾ ಹಾಹಾಕಾರ ಉಂಟಾಗಿದೆ. ಕೂಡಲೇ ಭೀಮಾ ನದಿಗೆ ನೀರು ಬಿಡಲು ಈಗಾಗಲೇ ನಾನು ಕೋರಿದ್ದೇನೆ. ಆಲಮಟ್ಟಿ ಇಲ್ಲವೇ ನಾರಾಯಣಪುರ ಜಲಾಶಯಗಳಿಂದ ಭೀಮಾ ನದಿಗೆ ನೀರಿ ಹರಿಸಬೇಕಾದರೆ ಬಹಳ ದೂರವಾಗುತ್ತದೆ. ಅಲ್ಲದೇ ನಾರಾಯಣಪುರ ಮತ್ತು ಆಲಮಟ್ಟಿಯಲ್ಲಿಯೂ ಸಹ ನೀರಿನ ಸಂಗ್ರಹ ಕಡಿಮೆ ಇದೆ. ಹಾಗಾಗಿ ಉಜನಿ ಆಣೆಕಟ್ಟೆಯಿಂದ ನಮಗೆ ಬರಬೇಕಾದ 15 ಟಿಎಂಸಿ ನೀರಿನಲ್ಲಿ ತುರ್ತಾಗಿ 5 ಟಿಎಂಸಿ ನೀರು ಬಿಡಲು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಮೇಲೆ ಒತ್ತಡ ತರುವೆ.
- ಮಾಲೀಕಯ್ಯಾ ಗುತ್ತೇದಾರ್, ಮಾಜಿ ಸಚಿವರು, ಅಫಜಲ್ಪುರ
ಇಂದು ಅಫಜಲ್ಪುರ ಬಂದ್ ಕರೆ: ಭೀಮಾ ನದಿಗೆ 5 ಟಿಎಂಸಿ ನೀರು ಉಜನಿ ಆಣೆಕಟ್ಟೆಯಿಂದ ಹರಿಸಬೇಕು ಎಂದು ಒತ್ತಾಯಿಸಿ ಮಾ.20ರಂದು ಅಫಜಲ್ಪುರ ಪಟ್ಟಣ ಬಂದ್ ಕರೆ ನೀಡಲಾಗಿದೆ. ಇಲ್ಲಿನ ವರ್ತಕರು ಸ್ವಯಂಪ್ರೇರಿತ ನಿರ್ಣಯ ಕೈಗೊಂಡಿದ್ದಾರೆ. ಸತ್ಯಾಗ್ರಹದ ಸ್ಥಳಕ್ಕೆ ಪಕ್ಷ ಬೇಧ ಮರೆತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸರ್ವ ಸಂಘಟನೆಗಳ ಪದಾಧಿಕಾರಿಗಳು, ಮಠಾಧೀಶರು ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.