ಕಾವೇರಿ ನದಿ ಹರಿವು ಬಹುತೇಕ ಕ್ಷೀಣ

KannadaprabhaNewsNetwork | Published : Mar 3, 2025 1:47 AM

ಸಾರಾಂಶ

ಫೆಬ್ರವರಿ ಅಂತ್ಯದಲ್ಲಿಯೇ ಕುಶಾಲನಗರ ವ್ಯಾಪ್ತಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದೆ.

ಕೀರ್ತನ ಕನ್ನಡಪ್ರಭ ವಾರ್ತೆ ಕುಶಾಲನಗರ

ಫೆಬ್ರವರಿ ಅಂತ್ಯದಲ್ಲಿಯೇ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದ್ದು, ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮಾರ್ಚ್ ನಡುವೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆಯಲ್ಲಿ ಬಹುತೇಕ ಏರುಪೇರು ಉಂಟಾಗುವ ಸಾಧ್ಯತೆ ಬಹುತೇಕ ಖಚಿತವಾದಂತಿದೆ.

ಪಟ್ಟಣ ಹಾಗೂ ಗ್ರಾಮಗಳ ವ್ಯಾಪ್ತಿಯ ಸುಮಾರು 35 ಸಾವಿರಕ್ಕೂ ಅಧಿಕ ನಾಗರಿಕರಿಗೆ ಮತ್ತು ಅಗತ್ಯ ಕೇಂದ್ರಗಳಿಗೆ ನೀರನ್ನು ಸರಬರಾಜು ಮಾಡುವ ನಿಟ್ಟಿನಲ್ಲಿ ಬೈಚನಹಳ್ಳಿ ಪಂಪ್ ಹೌಸ್ ಬಳಿ ನದಿಗೆ ಅಡ್ಡಲಾಗಿ ಮರಳು ಬಂಡ್‌ಳನ್ನು ನಿರ್ಮಾಣ ಮಾಡಬೇಕಾದ ಸ್ಥಿತಿ ಎದುರಾಗಲಿದೆ. ಇದೇ ವ್ಯಾಪ್ತಿಯಿಂದ ನೆರೆಯ ಪಿರಿಯಾಪಟ್ಟಣ ನಗರಕ್ಕೂ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಬೈಚನಹಳ್ಳಿ ಬಳಿ ಕಾವೇರಿ ನದಿಯಿಂದ ನೀರು ಸಂಗ್ರಹಿಸಿ ಕುಡಿಯುವ ನೀರು ಸರಬರಾಜು ಮಾಡಲು ಕುಶಾಲನಗರ ನೀರು ಸರಬರಾಜು ಮಂಡಳಿ ಮತ್ತು ಪಿರಿಯಾಪಟ್ಟಣ ಪುರಸಭೆಯ ಅಧಿಕಾರಿಗಳು ಬೇಸಿಗೆ ಅವಧಿಯಲ್ಲಿ ಅಗತ್ಯವಿರುವ ಕುಡಿಯುವ ನೀರು ಒದಗಿಸಲು ಕ್ರಿಯಾಯೋಜನೆ ರೂಪಿಸುತ್ತಿದ್ದಾರೆ. ಪ್ರಸಕ್ತ ಮಳೆ ಬೀಳದಿದ್ದಲ್ಲಿ ನೀರಿಗೆ ಸಮಸ್ಯೆ ಉಂಟಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೈಚನಹಳ್ಳಿ ಪಂಪ್ ಹೌಸ್ ಬಳಿ ಕಾವೇರಿ ನದಿಯಿಂದ ಕುಶಾಲನಗರ ಪಟ್ಟಣಕ್ಕೆ 60 ಅಶ್ವ ಶಕ್ತಿಯ 2 ಮೋಟರ್ ಪಂಪುಗಳು ದಿನವಿಡೀ ನೀರೆತ್ತಿ ಶುದ್ಧೀಕರಣ ಘಟಕಕ್ಕೆ ಹಾಯಿಸುತ್ತಿದೆ.

ಅತ್ತ ಪಿರಿಯಾಪಟ್ಟಣ ನಗರಕ್ಕೆ ಪಂಪ್ ಹೌಸ್ ಮೂಲಕ 75 ಅಶ್ವ ಶಕ್ತಿಯ ಎರಡು ಪಂಪುಗಳು ದಿನದ 24 ಗಂಟೆಗಳ ಕಾಲ ನೀರು ಎತ್ತುತ್ತಿದ್ದು ಇನ್ನೊಂದಡೆ ಭಾರಿ ಅಶ್ವಶಕ್ತಿಯ ಎರಡು ಮೋಟಾರ್ ಪಂಪುಗಳು ಕೊಪ್ಪ ಸೇರಿದಂತೆ ನೆರೆಯ 15 ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.

ಬಿಸಿಲಿನ ಬೇಗೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನದಿ ತಟದ ಗದ್ದೆಗಳಿಗೆ, ಕೃಷಿ ಚಟುವಟಿಕೆಗಳಿಗೆ ಭಾರಿ ಪ್ರಮಾಣದ ಅಶ್ವ ಶಕ್ತಿಯ ಮೋಟಾರ್ ಪಂಪುಗಳು ಕಾವೇರಿ ನದಿಯಿಂದ ನೀರೆತ್ತುವ ಕಾಯಕದಲ್ಲಿ ತೊಡಗಿಕೊಂಡಿರುವ ದೃಶ್ಯ ಅಲ್ಲಲ್ಲಿ ಕಂಡು ಬಂದಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮಾರ್ಚ್ ಆರಂಭದಲ್ಲಿ ಕಾವೇರಿ ನದಿ ತಟದ ಪಟ್ಟಣಗಳು ಗ್ರಾಮಗಳ ವ್ಯಾಪ್ತಿಯ ನಾಗರಿಕರು ಕುಡಿಯುವ ನೀರಿಗೆ ಹಾಹಾಕಾರ ಎದುರಿಸುವ ಸಾಧ್ಯತೆ ಅಧಿಕ ಎನ್ನಲಾಗಿದೆ.

ಕುಶಾಲನಗರ ಪಟ್ಟಣ ಮತ್ತು ಸಮೀಪದ ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಕಾವೇರಿ ನದಿಯ ಶೇ.80ರಷ್ಟು ಪ್ರದೇಶಗಳಿಗೆ ನದಿ ನೀರು ನೀರು ಸರಬರಾಜು ಆಗುತ್ತಿದೆ.

ಕುಶಾಲನಗರ ಪಟ್ಟಣದ ಕೆಲವೆಡೆ ಬಡಾವಣೆಗಳು, ಮುಳ್ಳುಸೋಗೆ, ಗೊಂದಿಬಸವನಹಳ್ಳಿ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸುವ ವ್ಯವಸ್ಥೆಗೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಲಭ್ಯವಿರುವ ಕೊಳವೆಬಾವಿಗಳ ನಿರ್ವಹಣೆ ಕಾಮಗಾರಿ ಕೂಡ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪುರಸಭೆ ಎಂಜಿನಿಯರ್ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ಶೇ.20ರಷ್ಟು ಕೊಳವೆಬಾವಿ, ಜಲಜೀವನ್ ಮಿಷನ್ ಮತ್ತಿತರ ವ್ಯವಸ್ಥೆಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.

ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ಬಹುತೇಕ ಕ್ಷೀಣಗೊಳ್ಳುತ್ತಿದ್ದು, ನದಿಯಲ್ಲಿ ಬಂಡೆಗಳು ಮಾತ್ರ ಗೋಚರಿಸುತ್ತಿವೆ. ಕಳೆದ ವರ್ಷ ಮಾರ್ಚ್ ಆರಂಭದಿಂದ ಸುಮಾರು 72 ದಿನಗಳ ಕಾಲ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ದುಬಾರೆ ಪ್ರವಾಸಿ ಕೇಂದ್ರದ ಬಳಿ ಕೂಡ ಕಾವೇರಿ ನದಿಯಲ್ಲಿ ನೀರಿನ ಹರಿವು ಪ್ರಮಾಣ ಬಹುತೇಕ ಕ್ಷೀಣಗೊಳ್ಳುತ್ತಿದ್ದು, ನದಿಯಲ್ಲಿ ರಾಪ್ಟಿಂಗ್ ಕ್ರೀಡೆ ಕೂಡ ಸದ್ಯದಲ್ಲಿಯೇ ಸ್ಥಗಿತಗೊಳ್ಳಲಿದೆ.

ಮುಂಬರುವ ಕುಡಿಯುವ ನೀರಿನ ಸಮಸ್ಯೆಗೆ ಈಗಾಗಲೇ ಸರ್ಕಾರ ಶಾಶ್ವತ ಪರಿಹಾರ ಒದಗಿಸುವ ಸಂಬಂಧ ಕಾವೇರಿ ಮತ್ತು ಹಾರಂಗಿ ಸಂಗಮ ಪ್ರದೇಶವಾದ ಕೂಡು ಮಂಗಳೂರು ಬಳಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕುಶಾಲನಗರ ಪಟ್ಟಣ ಹಾಗೂ ಪಿರಿಯಾಪಟ್ಟಣ ನಗರಗಳಿಗೆ 365 ದಿನಗಳ ಕಾಲ ನಿರಂತರವಾಗಿ ನೀರು ಸರಬರಾಜು ಮಾಡುವ ಬೃಹತ್ ಯೋಜನೆಗೆ ಈಗಾಗಲೇ ಚಾಲನೆ ದೊರೆತಿದೆ.

ಕಾವೇರಿ ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡ ವೇಳೆ ಹಾರಂಗಿ ಅಣೆಕಟ್ಟಿನಿಂದ ನೀರು ನದಿಗೆ ಹರಿಸಿ ಆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಯೋಜನೆ ರೂಪಿಸುವಲ್ಲಿ ಅಧಿಕಾರಿಗಳು ಕಾರ್ಯಯೋಜನೆ ರೂಪಿಸಿದ್ದಾರೆ.

ಹಾರಂಗಿ ಅಣೆಕಟ್ಟಿನಲ್ಲಿ ಪ್ರಸಕ್ತ ಮೂರು ಟಿಎಂಸಿ ಪ್ರಮಾಣದ ನೀರು ಮಾತ್ರ ಸಂಗ್ರಹ ಇರುವುದಾಗಿ ಹಾರಂಗಿ ಅಣೆಕಟ್ಟು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುಶಾಲನಗರ ಪಟ್ಟಣ ಸೇರಿದಂತೆ ಎಲ್ಲೆಡೆ ಕುಡಿಯ ನೀರು ಸರಬರಾಜು ಪ್ರಕ್ರಿಯೆಗೆ ಈಗಾಗಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಾವೇರಿ ಮತ್ತು ಹಾರಂಗಿ ಸಂಗಮವಾಗುವ ಕೂಡಿಗೆ ಬಳಿ ದಿನದ 24 ಗಂಟೆಗಳ ಕಾಲ ಕುಶಾಲನಗರ ಪಟ್ಟಣಕ್ಕೆ ನೀರು ಒದಗಿಸುವ 45 ಕೋಟಿ ವೆಚ್ಚದ ಕಾಮಗಾರಿ ಭರದಿಂದ ನಡೆಯುತ್ತಿದೆ.

। ಡಾ.ಮಂತರ್ ಗೌಡ, ಶಾಸಕ

Share this article