ಶಿರಸಿ: ಮುಂಬೈನ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕೊಡಮಾಡುವ 2025ನೇ ಸಾಲಿನ ಚೆನ್ನಭೈರಾದೇವಿ ಪ್ರಶಸ್ತಿಯನ್ನು ಶಿರಸಿಯ ಅಜಿತ ಮನೋಚೇತನ ಟ್ರಸ್ಟ್‌ನ ವಿಕಾಸ ವಿಶೇಷ ಶಾಲೆಯ ಮುಖ್ಯಾಧ್ಯಾಪಕಿ ನರ್ಮದಾ ಹೆಗಡೆ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು.
ವಿಶೇಷಚೇತನ ಮಕ್ಕಳಿಗೆ ನರ್ಮದಾ ಹೆಗಡೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಇಲ್ಲಿನ ಗಣೇಶ ನೇತ್ರಾಲಯದ ನಯನಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಚೆನ್ನಬೈರಾದೇವಿ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಾಹಿತಿ ಗಜಾನನ ಶರ್ಮ, ಉತ್ತರ ಕನ್ನಡದ ವಿಶಿಷ್ಟ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಅವರಿಗೆ ಉತ್ತರ ಕನ್ನಡದ ಐಕಾನ್ ಆಗಿದ್ದ ಅವ್ವರಸಿ ರಾಣಿ ಚೆನ್ನಾಭೈರಾದೇವಿ ಹೆಸರಿನಲ್ಲಿ ಮುಂಬೈನ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ ನೀಡುತ್ತಿರುವುದನ್ನು ನೋಡಿದರೆ ತಾನು ರಾಣಿ ಚೆನ್ನಾಭೈರಾದೇವಿ ಕಾದಂಬರಿ ಬರೆದದ್ದು ಸಾರ್ಥಕವಾಯಿತು ಎಂದು ಅನ್ನಿಸುತ್ತಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನರ್ಮದಾ ಹೆಗಡೆ, ಇದನ್ನು ನಾನು ಅಜಿತ ಮನೋಚೇತನ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಮಕ್ಕಳ ಪರವಾಗಿ ಪ್ರಶಸ್ತಿ ಸ್ವೀಕರಿಸುತ್ತೇನೆ ಎಂದು ಹೇಳಿದರು.ಮುಂಬೈನ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಕಾಶಿಸಿದ, ವಿಶ್ವನಾಥ ದೊಡ್ಮನೆ ಸಂಪಾದನೆಯ ಹೊರನಾಡಿನಲ್ಲಿ ತುಳುವರು ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅಶೋಕ ಹಾಸ್ಯಗಾರ, ಈ ಪುಸ್ತಕ ಹೊರ ರಾಜ್ಯದಲ್ಲಿ ನೆಲೆಸಿರುವ, ವಿಶೇಷವಾಗಿ ಮುಂಬೈನಲ್ಲಿ ನೆಲೆಸಿರುವ ತುಳುವರ ಬದುಕು ಹಾಗೂ ಸಂಸ್ಕೃತಿ ಬಗ್ಗೆ ಹೆಚ್ಚು ಪ್ರಸ್ತಾಪಿಸುತ್ತದೆ ಎಂದರು.ರವಿ ಹೆಗಡೆ ಗಡಿಹಳ್ಳಿ ಶುಭಾಶಂಸನೆಗೈದರು. ಸಾಹಿತಿ ಜಯಪ್ರಕಾಶ ಹಬ್ಬು ನಿರೂಪಿಸಿದರು. ವಿಶ್ವನಾಥ ಹೆಗಡೆ ದೊಡ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ವಿ.ಹೆಗಡೆ ಕೊಪ್ಪಲತೋಟ ಸ್ವಾಗತಿಸಿದರು. ಕೇಶವ ಕಿಬ್ಳೆ ವಂದಿಸಿದರು. ಯಶಸ್ವಿನಿ ಶ್ರೀಧರಮೂರ್ತಿ ಅಭಿನಂದನಾ ಪತ್ರ ಓದಿದರು. ರಾಜಲಕ್ಷ್ಮೀ ಭಟ್ ಬೊಮ್ನಳ್ಳಿ ಪ್ರಾರ್ಥಿಸಿದರು. ನಂತರ ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಸಂಘ ದೊಡ್ಮನೆ ಇವರಿಂದ ಚೆನ್ನಾಭೈರಾದೇವಿ ಆಖ್ಯಾನದ ತಾಳಮದ್ದಲೆ ನಡೆಯಿತು.
ನರ್ಮದಾ ಹೆಗಡೆ ಅವರಿಗೆ ಚೆನ್ನಭೈರಾದೇವಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.